ಶಿವಮೊಗ್ಗ: ಮಕ್ಕಳು ಉತ್ಸಾಹದ ಚಿಲುಮೆಗಳು. ಉತ್ತಮ ಊಟ-ಆಟ-ಪಾಠದೊಂದಿಗೆ ಪ್ರಗತಿ ಹೊಂದಿದರೆ ಅವರು ಇಡೀ ಸಮಾಜವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ‘ಚಿಗುರು 2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮಕ್ಕಳ ಉತ್ಸಾಹ–ಹುರುಪು ನೋಡಿದರೆ ನಮಗೆ ಮತ್ತೊಮ್ಮೆ ಬಾಲ್ಯಾವಸ್ಥೆಗೆ ಹೋಗಬೇಕು ಅನ್ನಿಸುತ್ತಿದೆ’ ಎಂದರು.
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮುಖ್ಯವಾಗಿ ಜೀವಿಸುವ, ರಕ್ಷಣೆಯ, ಭಾಗವಹಿಸುವ ಮತ್ತು ಪ್ರಗತಿ ಹೊಂದುವ ಈ ನಾಲ್ಕು ಹಕ್ಕುಗಳ ಮೈಗೂಡಿಸಿಕೊಂಡು ಮುನ್ನಡೆಯಬೇಕು. ಮಕ್ಕಳು ಸಮರ್ಪಕ ಆಹಾರ, ದೇಹ ದಣಿಯುವ ಆಟ ಮತ್ತು ಪಾಠದಲ್ಲೂ ಮುಂದೆ ಇರಬೇಕು ಎಂದರು.
ಚಿಗುರು ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಮನೋಭಾವದಿಂದ ಮಕ್ಕಳು ಪಾಲ್ಗೊಳ್ಳಬೇಕು. ಗಮನ ಕೇಂದ್ರೀಕರಿಸಿ ಭಾಗವಹಿಸುವ ಪ್ರತಿ ಸ್ಪರ್ಧಾಳು ವಿಜೇತರಾದಂತೆ ಎಂದರು.
ರಂಗಾಯಣದ ಆಡಳಿತಾಧಿಕಾರಿ ಎ.ಸಿ.ಶೈಲಜಾ, ಸಿಡಿಪಿಒ ಗಂಗಾಬಾಯಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್ ಹಾಜರಿದ್ದರು.
6ರಿಂದ 14 ವರ್ಷದ ಮಕ್ಕಳಿಗೆ ವೇದಿಕೆ..
ಚಿಗುರು ಕಾರ್ಯಕ್ರಮದಲ್ಲಿ 6 ರಿಂದ 14 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದಾಗಿದೆ. ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಹಿಂದೂಸ್ತಾನಿ ಮತ್ತು ಕರ್ನಾಟಕ ವಾದ್ಯ ಸಂಗೀತ ಸುಗಮ ಸಂಗೀತ ಜಾನಪದಗೀತೆ ಸಮೂಹ ನೃತ್ಯ ಯಕ್ಷಗಾನ ಏಕಪಾತ್ರಭಿನಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.