ADVERTISEMENT

ಎಡಮನೆ | ಜನಪ್ರತಿನಿಧಿಗಳು ರಾಜಕೀಯ ನಿವೃತ್ತಿ ಪಡೆಯಲಿ: ದಿನೇಶ್ ಶಿರವಾಳ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 3:41 IST
Last Updated 15 ಫೆಬ್ರುವರಿ 2026, 3:41 IST
ಎಡಮನೆ ಗ್ರಾಮದಲ್ಲಿ ರೈತ ಸಂಘದಿಂದ ಗ್ರಾಮ ವಾಸ್ತವ್ಯದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿದರು.
ಎಡಮನೆ ಗ್ರಾಮದಲ್ಲಿ ರೈತ ಸಂಘದಿಂದ ಗ್ರಾಮ ವಾಸ್ತವ್ಯದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿದರು.   

ಎಡಮನೆ (ತುಮರಿ): ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸದೇ ಹಳ್ಳಿಗಳಲ್ಲಿ ಮುಗ್ದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕ್ರಮ ಖಂಡನೀಯ, ಭೂಮಿ ಹಕ್ಕು ನೀಡಲು ಇಚ್ಛಾಶಕ್ತಿ ತೋರದ ಜಿಲ್ಲೆಯ ಸಂಸದರು, ಶಾಸಕರು, ಮಂತ್ರಿಗಳು 'ರಾಜಕೀಯ ನಿವೃತ್ತಿ' ತೆಗೆದುಕೊಳ್ಳಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ ಆಗ್ರಹಿಸಿದರು.

ತಾಲ್ಲೂಕಿನ ಕಟ್ಟಿನಕಾರು ಗ್ರಾಮದ ಎಡಮನೆ ಹಳ್ಳಿಯಲ್ಲಿ ರೈತ ಸಂಘದಿಂದ ಶನಿವಾರ 1 ದಿನದ ಗ್ರಾಮ ವಾಸ್ತವ್ಯದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಲೆನಾಡಿನ ಹಲವೆಡೆ ತಲೆ ಎತ್ತಿದ ಅಕ್ರಮ ಹೋಂ ಸ್ಟೇಗಳ ಬಗ್ಗೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳು 80 ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ 16 ಕುಟುಂಬಗಳ ಒಕ್ಕಲೆಬ್ಬಿಸುವ ಕ್ರಮ ಖಂಡನೀಯ, ಅರಣ್ಯ ವಾಸಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಶರಾವತಿ ಸಿಂಗಳೀಕ ಅಭಯಾರಣ್ಯ, ಮೀಸಲು ಅಭಯಾರಣ್ಯ, ಜೀವ ವೈವಿಧ್ಯ ತಾಣ ಹೆಸರಿನಲ್ಲಿ ಮಲೆನಾಡಿನ ರೈತರ ಜನ ವಸತಿ ಪ್ರದೇಶವನ್ನು ಅರಣ್ಯ ಇಲಾಖೆಗೆ ಸೇರಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಅರಣ್ಯ ಕಾಯ್ದೆಗಳು, ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಗಾಳಿಗೆ ತೂರಿ ಎಡಮನೆ ಗ್ರಾಮದಲ್ಲಿ ರೈತರಿಗೆ ಕಿರುಕುಳ ನೀಡಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಅರಣ್ಯ ಇಲಾಖೆಯವರು ಒತ್ತುವರಿ ಹೆಸರಿನಲ್ಲಿ ವಿನಾ ಕಾರಣ ರೈತರ ತೋಟ ಕಡಿತಲೆಗೆ ಮಾಡಿ ತೊಂದರೆ ನೀಡುತ್ತಿರುವುದು ಸರಿಯಲ್ಲ, ಅರಣ್ಯ ವಾಸಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಿಮಿನಲ್‌ ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ. ರೈತರ ಮೇಲೆ ದಾಖಲಾದ ಅರಣ್ಯ ಒತ್ತುವರಿ ಪ್ರಕರಣ ಕೈಬಿಡಬೇಕು, ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ರೈತರಿಗೆ ಭೂ ಮಂಜೂರಾತಿ ನೀಡಬೇಕು ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಹೋರಾಟ ರೊಪಿಸುವ ನಿಟ್ಟಿನಲ್ಲಿ ಶಿಫ್ರವೇ ಸಮಾಲೋಚನೆ ನೆಡೆಸಲಾಗುವುದು ಎಂದರು.

ಮಲೆನಾಡಿನಲ್ಲಿ ‘ಅತಿಕ್ರಮಣಕಾರರಿಂದ ಅರಣ್ಯ ಸಂಪತ್ತು ಲೂಟಿಯಾಗಿಲ್ಲ. ಭೂಗಳ್ಳರು, ರೇಸಾರ್ಟ್ ಮಾಲೀಕರು, ಲೂಟಿಕೋರರಿಂದ ಅರಣ್ಯ ಸಂಪತ್ತು ಲೂಟಿಯಾಗುತ್ತಿದೆ. ಹೀಗಾಗಿ, ರೈತರಿಗೆ ಅನಗತ್ಯ ಕಿರುಕುಳ ನೀಡುವುದು ನಿಲ್ಲಬೇಕಾಗಿದೆ. ನಮ್ಮ ಜೀವನಕ್ಕಾಗಿ ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ಮಾಡಲೇ ಬೇಕು, ರೈತರು ಹೋರಾಟದ ಕಿಚ್ಚು ಕಳೆದುಕೊಳ್ಳಬೇಡಿ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹೂವಣ್ಣ ಹುರುಳಿ ಧೈರ್ಯ ತುಂಬಿದರು.

ಈ ವೇಳೆ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರಪ್ಪ ರೈತರಾದ ಬೀರಪ್ಪ, ಗಣಪತಿ, ರಾಮಚಂದ್ರ ಇದ್ದರು.

ಹಲವು ಮುಖಂಡರ ಭೇಟಿ:

ಅರಣ್ಯ ಇಲಾಖೆಯಿಂದ ರೈತರ ಒಕ್ಕಲೆಬ್ಬಿಸುವ ನೀತಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಸಿಗಂದೂರು ಕ್ಷೇತ್ರದ ಕಾರ್ಯದರ್ಶಿ ರವಿಕುಮಾರ್ ಹೆಚ್ ಆರ್, ಹೈಕೋರ್ಟ್ ವಕೀಲ ಹೆಚ್ ವಿ ಕುಮಾರಸ್ವಾಮಿ, ಕೆಡಿಪಿ ಸದಸ್ಯ ಸತ್ಯನಾರಾಯಣ ಜಿ ಟಿ, ಅಶೋಕ ಬೇಳೂರು, ಕರೂರು ಹೋಬಳಿಯ ಸಮಾನ ಮನಸ್ಕರು ಭೇಟಿ ನೀಡಿ ಸಂತ್ರಸ್ತ ರೈತರ ನೋವು ಆಲಿಸಿದರು.

ಅರಣ್ಯವಾಸಿಗಳ ಸ್ಥಳಾಂತರ ಕಾನೂನುಬಾಹಿರ:

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಹುಲಿ ಮೀಸಲು ಅರಣ್ಯಗಳ ಕೇಂದ್ರ ಭಾಗದಲ್ಲಿ ವಾಸಿಸುತ್ತಿರುವ ಅರಣ್ಯವಾಸಿಗಳನ್ನು ಮಾತ್ರ ಪುನರ್ವಸತಿ ಕಲ್ಪಿಸಲು ಅವಕಾಶವಿದೆ. ಮೀಸಲು ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವವರನ್ನು ಸ್ಥಳಾಂತರಗೊಳಿಸಲು ಸ್ಪಷ್ಟ ನಿರ್ಬಂಧ ಇದೆ. ಆದರೂ ವನ್ಯಜೀವಿ ಕಾಯ್ದೆ ಮತ್ತು ಎನ್‌ಟಿಸಿಎ ಮಾರ್ಗಸೂಚಿ ಉಲ್ಲಂಘಿಸಿ ಜಿಲ್ಲೆಯ ಎಡಮನೆ ಗ್ರಾಮದಲ್ಲಿ ವಾಸಿಸುತ್ತಿದ್ದ ಮುಗ್ದ ಅರಣ್ಯ ವಾಸಿಗಳನ್ನು ಸ್ಥಳಾಂತರಿಸಲು ಪ್ರಯತ್ನ ನಡೆಯುತ್ತಿದೆ. ರೈತರ ಸಮಸ್ಯೆ ಬಗೆಹರಿಸದಿದ್ದರೆ ಮಾರ್ಚ್ 2ರಂದು ಸಿಗಂದೂರು ರಾಷ್ಟ್ರೀಯ 'ಹೆದ್ದಾರಿ ತಡೆ ಚಳವಳಿ' ನೆಡೆಸಲಾಗುವುದು ಎಂದು ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನಾ.ಶ್ರೀನಿವಾಸ್ ಎಚ್ಚರಿಸಿದರು.

‘ಅರಣ್ಯ ಕಾಯ್ದೆ 2006ರಲ್ಲಿ ಜಾರಿಯಾದರೂ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದ ಅಧಿಕಾರಿಗಳೇ ದೇಶದ್ರೋಹಿಗಳು. ರೈತರ ಅಭಿಪ್ರಾಯ ಪಡೆಯದೇ ಏಕಪಕ್ಷೀಯ ಆದೇಶ ನೀಡಿರುವ ಅರಣ್ಯ ಇಲಾಖೆ ಎಸಿಎಫ್ ನೀಡಿರುವ ತೀರ್ಪು ಅಸಂವಿಧಾನಿಕವಾಗಿದ್ದು, ನೈಸರ್ಗಿಕ ನ್ಯಾಯದ ವಿರೋಧಿಯಾಗಿದೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕು.
ಹೆ ಚ್ ವಿ ಕುಮಾರಸ್ವಾಮಿ, ಹೈಕೋರ್ಟ್ ವಕೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.