ADVERTISEMENT

ಶಿವಮೊಗ್ಗ: 10 ವರ್ಷ, 18,700 ಎಕರೆ ಕಾಡು ಕಣ್ಮರೆ!

ಮಲೆನಾಡಿನ ಪರಿಸರಾಸಕ್ತರಲ್ಲಿ ಆತಂಕ ಮೂಡಿಸಿದ ಎಫ್‌ಎಸ್‌ಐ ವರದಿ

ವೆಂಕಟೇಶ ಜಿ.ಎಚ್.
Published 3 ಜನವರಿ 2025, 7:17 IST
Last Updated 3 ಜನವರಿ 2025, 7:17 IST
ಸೊರಬ ತಾಲ್ಲೂಕಿನ ತೊರಣಗೊಂಡನಕೊಪ್ಪ ಗ್ರಾಮದಲ್ಲಿ ಒತ್ತುವರಿಗಾಗಿ ಅರಣ್ಯದಲ್ಲಿನ ಬೃಹತ್ ಮರ ಕಡಿದುರುಳಿಸಿದ್ದ ದೃಶ್ಯ..
ಪ್ರಜಾವಾಣಿ ಸಂಗ್ರಹ ಚಿತ್ರ
ಸೊರಬ ತಾಲ್ಲೂಕಿನ ತೊರಣಗೊಂಡನಕೊಪ್ಪ ಗ್ರಾಮದಲ್ಲಿ ಒತ್ತುವರಿಗಾಗಿ ಅರಣ್ಯದಲ್ಲಿನ ಬೃಹತ್ ಮರ ಕಡಿದುರುಳಿಸಿದ್ದ ದೃಶ್ಯ.. ಪ್ರಜಾವಾಣಿ ಸಂಗ್ರಹ ಚಿತ್ರ   

ಶಿವಮೊಗ್ಗ: ಭಾರತೀಯ ಅರಣ್ಯ ಸಮೀಕ್ಷೆ (ಎಫ್‌ಎಸ್‌ಐ) ದೇಶದಲ್ಲಿನ ಅರಣ್ಯ ಸ್ಥಿತಿಗತಿಯ ವರದಿ ನೀಡಿದ್ದು, ಅದರನ್ವಯ ಕಳೆದ 10 ವರ್ಷಗಳಲ್ಲಿ (2013–2023) ಅರಣ್ಯ ನಾಶದಲ್ಲಿ ಶಿವಮೊಗ್ಗ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಇದು ಮಲೆನಾಡಿನ ಪರಿಸರ ಪ್ರಿಯರಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಒಟ್ಟು 1,395.16 ಚದರ ಕಿ.ಮೀ ಅರಣ್ಯ ಪ್ರದೇಶವಿದೆ. ಆ ಪೈಕಿ 74.50 ಚ.ಕಿಮೀ (18,700 ಎಕರೆ) ಅರಣ್ಯ ನಾಶವಾಗಿರುವುದನ್ನು ಎಫ್‌ಎಸ್‌ಐ ಗುರುತಿಸಿದೆ. ಕಳೆದೊಂದು ದಶಕದಲ್ಲಿ ಪಶ್ಚಿಮ ಘಟ್ಟದ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ (ಶಿವಮೊಗ್ಗ, ಕೊಡಗು, ಚಾಮರಾಜನಗರ, ಬೆಳಗಾವಿ, ಮೈಸೂರು, ಹಾಸನ) 153.80 ಚ.ಕಿಮೀ ಅರಣ್ಯ ಕಣ್ಮರೆಯಾಗಿದೆ. ಅದರಲ್ಲಿ ಶಿವಮೊಗ್ಗದ ಪಾಲು ಶೇ 48 ರಷ್ಟು ಎಂಬ ಅಘಾತಕಾರಿ ಸಂಗತಿಯನ್ನು ಈ ಸಮೀಕ್ಷೆ ತೆರೆದಿಟ್ಟಿದೆ.

ಜಲಾಶಯ ನಿರ್ಮಾಣ, ರಸ್ತೆ, ಪ್ರವಾಸೋದ್ಯಮದ ಹೆಸರಲ್ಲಿ ಅಭಿವೃದ್ಧಿ, ಗಣಿಗಾರಿಕೆ, ನಗರೀಕರಣ, ಅರಣ್ಯ ಭೂಮಿ ಒತ್ತುವರಿ ಹಾಗೂ ಅಡಿಕೆ ಬೆಳೆಯ ಮೇಲಿನ ವಿಪರೀತ ವ್ಯಾಮೋಹ ಅರಣ್ಯ ಪ್ರದೇಶಕ್ಕೆ ತೀವ್ರ ಕುತ್ತು ತಂದಿದೆ. ಜಿಲ್ಲೆಯಲ್ಲಿ ಮರಗಳಿಂದ ಆವೃತವಾಗಿರುವ ಅರಣ್ಯ ಪ್ರದೇಶವು 1,21,427.6 ಹೆಕ್ಟೇರ್‌ ಇದ್ದು, ಅದರಲ್ಲಿ ಶೇ 9.6 ರಷ್ಟು ತೋಟಗಳಾಗಿ ಬದಲಾಗಿವೆ ಎಂಬುದನ್ನು ಭಾರತೀಯ ಅರಣ್ಯ ಸಮೀಕ್ಷೆ ಗುರುತಿಸಿದೆ.

ADVERTISEMENT

ಉಷ್ಣವಲಯದ ನಿತ್ಯಹರಿದ್ವರ್ಣ, ತೇವಾಂಶವುಳ್ಳ ಎಲೆ ಉದುರುವ ವೈವಿಧ್ಯಮಯ ಕಾಡು ಶಿವಮೊಗ್ಗ ಜಿಲ್ಲೆಯ ವಿಶೇಷ. ಈಗ ಅರಣ್ಯ ಪ್ರದೇಶದ ವಿಸ್ತಾರ ತಗ್ಗುತ್ತಿರುವುದು ಆನೆ, ಹುಲಿ, ಚಿರತೆ, ಕಾಡು ನಾಯಿ, ಕಾಡು ಕೋಣ, ಸಾಂಬಾರ, ಚುಕ್ಕೆ ಜಿಂಕೆ, ಬೊಗಳುವ ಜಿಂಕೆ, ಜೇನು ಕರಡಿ, ಕಾಡು ಹಂದಿ, ನರಿ, ಲಂಗೂರ್, ಸಿಂಗಳೀಕ ಹೀಗೆ ವೈವಿಧ್ಯಮಯ ವನ್ಯಜೀವಿ ಸಂಕುಲದ ಅಸ್ತಿತ್ವಕ್ಕೆ ಕುತ್ತು ತಂದಿದೆ. ಹಿನ್ನೀರಿನಿಂದ ಮಂಡಗದ್ದೆ ಪಕ್ಷಿಧಾಮ ತುಂಗಾರ್ಪಣಗೊಂಡ ನಂತರ ಈಗ ಗುಡವಿ ಪಕ್ಷಿಧಾಮಕ್ಕೆ ಸಂತಾನೋತ್ಪತ್ತಿಗಾಗಿ ಬರುವ ವಲಸೆ ಪಕ್ಷಿಗಳಿಗೂ ಅರಣ್ಯನಾಶ ಕುತ್ತು ತರಲಿದೆ ಎಂಬ ಆತಂಕ ಪರಿಸರ ಪ್ರಿಯರು ವ್ಯಕ್ತಪಡಿಸುತ್ತಾರೆ.

ಒತ್ತುವರಿ ಹೆಚ್ಚಳ: ಸಾಗರ, ಹೊಸನಗರ, ಸೊರಬ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಕಾನು ಬೆಟ್ಟ, ಸೊಪ್ಪಿಗೆ ಮುಫತ್ತು, ಗೋಚರ, ಕಾಫಿಕಾನು ಮೊದಲಾದ ಹೆಸರಲ್ಲಿ ಒಂದು ಲಕ್ಷ ಎಕರೆಗಿಂತ ಹೆಚ್ಚು ಕಂದಾಯ ಅರಣ್ಯ ಪ್ರದೇಶವಿದೆ. ಡೀಮ್ಡ್ ಅರಣ್ಯ ಪಟ್ಟಿಯಲ್ಲಿ ಇವುಗಳ ಅರ್ಧಭಾಗ ಸೇರಿದೆ. ಪಾರಂಪರಿಕವಾಗಿ ಹಳ್ಳಿಗಳ ಜನರೇ ಈ ಕಾನು ಅರಣ್ಯಗಳ ನಿರ್ವಹಣೆ ಮಾಡುತ್ತಿದ್ದರು. ಆದರೆ ಕಳೆದ 30 ವರ್ಷಗಳಲ್ಲಿ ಒತ್ತುವರಿ ಹೆಚ್ಚಾಗಿ ಕಂದಾಯ ಅರಣ್ಯಗಳು ನಶಿಸುತ್ತಿವೆ ಎಂದು ವೃಕ್ಷ ಲಕ್ಷ ಆಂದೋಲನದ ಸಂಚಾಲಕ ಅನಂತ ಹೆಗಡೆ ಆಶೀಸರ ಹೇಳುತ್ತಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಅರಣ್ಯ ಹಾಗೂ ಭದ್ರಾವತಿಯ ಎಂಪಿಎಂ ಕಾರ್ಖಾನೆ ಅಧೀನದಲ್ಲಿ 70 ಸಾವಿರ ಎಕರೆ ಕಂದಾಯ ಅರಣ್ಯಭೂಮಿ ಇದೆ. ಆದರೆ ಕಳೆದ 6 ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿದೆ. ಈಗ ಎರಡೂ ಅರಣ್ಯ ಪ್ರದೇಶ ಕಣ್ಮರೆಯಾಗುವ ಆತಂಕವಿದೆ. ಅದನ್ನು ರಕ್ಷಿಸುವ ಕೆಲಸ ಸರ್ಕಾರ ಪ್ರಾಮಾಣಿಕವಾಗಿ ಮಾಡಲಿ ಎಂದು ಆಶೀಸರ ಒತ್ತಾಯಿಸುತ್ತಾರೆ.

ಎಫ್‌ಎಸ್ಐ ವರದಿ ಗಂಭೀರವಾಗಿ ಪರಿಗಣಿಸಿದ್ದು ಅರಣ್ಯ ಕಣ್ಮರೆಯಾಗಿರುವ ಪ್ರದೇಶದ ಚಿತ್ರಗಳ ಕಳುಹಿಸಲು ಕೇಳಿದ್ದೇವೆ. ಅದು ಬಂದ ನಂತರ ವಾಸ್ತವ ಪರಿಶೀಲಿಸಿ ಅರಣ್ಯ ಸಂರಕ್ಷಣೆಗೆ ಕಾರ್ಯಯೋಜನೆ ರೂಪಿಸಲಿದ್ದೇವೆ.
–ಕೆ.ಟಿ.ಹನುಮಂತಪ್ಪ, ಮುಖ್ಯ ಅರಣ್ಯಾಧಿಕಾರಿ ಶಿವಮೊಗ್ಗ
ಎಫ್‌ಎಸ್‌ಐ ದಟ್ಟ ಅರಣ್ಯದ ಪ್ರಮಾಣ ಹೆಚ್ಚಿರುವುದನ್ನು ವರದಿಯಲ್ಲಿ ಗುರುತಿಸಿದೆ. ವನ್ಯಜೀವಿಗಳ ಆವಾಸಕ್ಕೆ ತೊಂದರೆ ಏನೂ ಇಲ್ಲ. ಬದಲಿಗೆ ಅವುಗಳ ಪ್ರಮಾಣ ಹೆಚ್ಚಳಗೊಂಡಿದೆ.
–ಪ್ರಸನ್ನಕೃಷ್ಣ ಪಟಗಾರ, ಡಿಸಿಎಫ್ ಶಿವಮೊಗ್ಗ ವನ್ಯಜೀವಿ ವಿಭಾಗ
ಈಗಲೂ ಕಾಲ ಮಿಂಚಿಲ್ಲ. ಅರಣ್ಯ ಇಲಾಖೆ ಕಾರ್ಯ ಯೋಜನೆ ರೂಪಿಸಿದರೆ ಮುಂದಿನ ದಿನಗಳಲ್ಲಿ ಅರಣ್ಯ ನಾಶವನ್ನು ತಡೆಗಟ್ಟಬಹುದು. ಮಲೆನಾಡಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಪ್ರವೃತ್ತವಾಗಲಿ.
–ಅನಂತ ಹೆಗಡೆ, ಆಶೀಸರ ವೃಕ್ಷ ಲಕ್ಷ ಬಳಗದ ಸಂಚಾಲಕ
ಕಾಳಿಂಗ ಸರ್ಪ ಸೇರಿದಂತೆ ಬಹುತೇಕ ಹಾವುಗಳ ಆವಾಸ ವ್ಯಾಪ್ತಿ 6 ಚದರ ಕಿ.ಮೀ ಮಾತ್ರ. ಹೀಗಾಗಿ ಅರಣ್ಯ ನಾಶ ಅವುಗಳ ಸಂತಾನೋತ್ಪತ್ತಿಯ ಮೇಲೆ ತೀವ್ರ ಪರಿಣಾಮ ಬೀರಿದೆ.
–ಗೌರಿಶಂಕರ್, ವನ್ಯಜೀವಿ ತಜ್ಞ ಆಗುಂಬೆ

ಅಕ್ರಮ ಗಣಿಗಾರಿಕೆ; ಅರಣ್ಯಕ್ಕೆ ಕುತ್ತು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವ್ಯಾಪಕಗೊಂಡಿರುವ ಅಕ್ರಮ ಕಲ್ಲು ಜಂಬಿಟ್ಟಿಗೆ ಗಣಿಗಾರಿಕೆ ಮಣ್ಣು ಬಗೆದು ಒಯ್ಯುವ ಮಾಫಿಯಾ ನಾಟಾ ಕಳ್ಳತನ ಅರಣ್ಯ ಕಂದಾಯ ಭೂಮಿ ಒತ್ತುವರಿಯಿಂದಲೂ ಮರಗಳು ನೆಲಕ್ಕುರುಳುತ್ತಿವೆ. ಅಕ್ರಮ ಗಣಿಗಾರಿಕೆಗೆ ಕಾಡಿನಲ್ಲಿ ರಸ್ತೆಗಳನ್ನು ಮಾಡಲು ಮರಗಳ ಕಡಿಯಲಾಗುತ್ತಿದೆ. ಜೊತೆಗೆ ಹೆದ್ದಾರಿ ವಿಸ್ತರಣೆ ನಗರೀಕರಣ ಪ್ರವಾಸೋದ್ಯಮ ಅಭಿವೃದ್ಧಿಯೂ ಮಲೆನಾಡಿನ ಸಹಜ ಪರಿಸರಕ್ಕೆ ಧಕ್ಕೆ ತಂದಿದೆ.

ಮಾನವ–ಪ್ರಾಣಿ ಸಂಘರ್ಷಕ್ಕೆ ವೇದಿಕೆ..

ಶಿಕಾರಿ‍ಪುರ ತಾಲ್ಲೂಕಿನ ಅಂಬ್ಲಿಗೊಳಕ್ಕೆ 20 ವರ್ಷಗಳ ನಂತರ ಆನೆ ಬಂದಿದೆ. ಶೆಟ್ಟಿಹಳ್ಳಿ ಆನಂದಪುರ ಅಂಬ್ಲಿಗೊಳ ಮೂಲತಃ ಆನೆ ಕಾರಿಡಾರ್. ಹೀಗಾಗಿ ಸಾಂಪ್ರದಾಯಿಕ ನೆಲೆಯಲ್ಲಿ ಅವು ಸಾಗಿಬಂದಿವೆ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳುತ್ತಾರೆ. ಲಂಗೂರ್ ಸಿಂಗಳೀಕಗಳು ರಸ್ತೆಗೆ ಬಂದು ಜನರ ಬಳಿ ಆಹಾರಕ್ಕೆ ಮೊರೆ ಇಡುತ್ತಿವೆ. ಶಿವಮೊಗ್ಗ ನಗರ ಹೊಳೆಹೊನ್ನೂರು ಶಿಕಾರಿಪುರ ಭಾಗದಲ್ಲಿ ಕರಡಿ ಚಿರತೆಗಳ ದಾಂಗುಡಿ ಶೆಟ್ಟಿಹಳ್ಳಿ ಅಭಯಾರಣ್ಯದ ಸುತ್ತಲೂ ಆನೆಗಳ ಹಾವಳಿ ಕೂಡ ಹೆಚ್ಚಿದೆ. ಜಿಲ್ಲೆಯಲ್ಲಿ ಅರಣ್ಯಪ್ರದೇಶದ ವಿಸ್ತಾರ ವ್ಯಾಪಕವಾಗಿ ಕುಸಿಯುತ್ತಿರುವುದರಿಂದ ನೆಲೆ ಕಳೆದುಕೊಂಡ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿವೆ. ಇದು ಮಾನವ–ಪ್ರಾಣಿ ಸಂಘರ್ಷಕ್ಕೆ ವೇದಿಕೆ ಒದಗಿಸಿದೆ ಎನ್ನುತ್ತಾರೆ.

ಆವಾಸ ಸ್ಥಾನ ಛಿದ್ರ: ಸಂತಾನೋತ್ಪತ್ತಿಗೆ ಧಕ್ಕೆ

ಅರಣ್ಯ ನಾಶದ ಪರಿಣಾಮ ಆವಾಸ ಸ್ಥಾನ ಛಿದ್ರೀಕರಣಗೊಂಡರೆ ವನ್ಯಜೀವಿಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆಗಾಗಿ ಗಾಜನೂರಿನ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ಅರಣ್ಯ ಪ್ರದೇಶದ ನಡುವೆ ಕಾಲುವೆ ನಿರ್ಮಿಸಲಾಗಿದೆ. ಇಲ್ಲಿ ಅರಣ್ಯ ಪ್ರದೇಶ ವಿಭಜನೆಗೊಂಡು ಪ್ರಾಣಿಗಳ ಸಹಜ ಚಲನವಲನಕ್ಕೆ ಅಡ್ಡಿಯಾಗಿದೆ. ಈ ವಿಭಜನೆ ಪ್ರಾಣಿಗಳಿಗೆ ಹೆಚ್ಚು ಆಹಾರ ಸಿಗುವ ಪ್ರದೇಶದ ಸಂಪರ್ಕ ತಪ್ಪಿಸಬಹುದು. ಗಂಡು–ಹೆಣ್ಣುಗಳ ನಡುವೆ ಸಂಪರ್ಕ ತಪ್ಪಿ ಸಂತಾನೋತ್ಪತ್ತಿಗೆ ತೊಂದರೆಯಾಗಲಿದೆ. ಈ ಸಂಗತಿಗಳಿಂದ ವನ್ಯಜೀವಿಗಳ ಅಸ್ತಿತ್ವಕ್ಕೆ ತೊಂದರೆ ಆಗುವುದಲ್ಲದೇ ಆಹಾರ ಅರಸಿ ಜನವಸತಿ ಪ್ರದೇಶಗಳತ್ತ ಬರುವುದರಿಂದ ಮಾನವ–ಪ್ರಾಣಿ ಸಂಘರ್ಷಕ್ಕೂ ವೇದಿಕೆ ಕಲ್ಪಿಸುತ್ತಿದೆ ಎಂದು ವನ್ಯಜೀವಿ ಆಸಕ್ತ ಶಿವಮೊಗ್ಗದ ಡಾ.ಸಂದೇಶ್ ಕುಮಾರ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.