ADVERTISEMENT

ಅರಣ್ಯ, ಕಂದಾಯ ಅಧಿಕಾರಿಗಳು ಸಮನ್ವಯ ಸಾಧಿಸಲಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಅರಣ್ಯಾಧಿಕಾರಿಗಳು ಹಾಗೂ ತಹಶೀಲ್ದಾರರ ಸಭೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 4:20 IST
Last Updated 20 ಡಿಸೆಂಬರ್ 2025, 4:20 IST
ಶಿವಮೊಗ್ಗದಲ್ಲಿ ನಡೆದ ಅರಣ್ಯಾಧಿಕಾರಿಗಳು ಹಾಗೂ ತಹಶೀಲ್ದಾರರ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು
ಶಿವಮೊಗ್ಗದಲ್ಲಿ ನಡೆದ ಅರಣ್ಯಾಧಿಕಾರಿಗಳು ಹಾಗೂ ತಹಶೀಲ್ದಾರರ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು   

ಶಿವಮೊಗ್ಗ: ‘ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ರೂಪಿಸಲಾದ ಜನಹಿತ ಯೋಜನೆಗಳ ವ್ಯವಸ್ಥಿತ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಅಗತ್ಯ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು. 

ನಗರದಲ್ಲಿ ಶುಕ್ರವಾರ ಅರಣ್ಯಾಧಿಕಾರಿಗಳು ಹಾಗೂ ತಹಶೀಲ್ದಾರರ ಸಭೆಯ ಅ‍ಧ್ಯಕ್ಷತೆ ವಹಿಸಿ ಮಾತನಾಡಿ, ಕೆಲವು ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗಿದ್ದು, ಸಕಾಲದಲ್ಲಿ ಯೋಜನೆಗಳು ಪೂರ್ಣಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಆಯಾ ಇಲಾಖೆಗಳ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಲು ಹಾಗೂ ಎದುರಾಗಬಹುದಾದ ಸಮಸ್ಯೆಗಳ ಇತ್ಯರ್ಥಕ್ಕೆ ಪರಸ್ಪರರ ನಡುವೆ ಸಮನ್ವಯತೆ ಸಾಧಿಸಿಕೊಳ್ಳುವುದಲ್ಲದೆ ಕಾಲಕಾಲಕ್ಕೆ ಸಭೆಗಳನ್ನು ನಡೆಸುವಂತೆ ಸಲಹೆ ನೀಡಿದರು. 

ವಿಶೇಷವಾಗಿ ಶರಾವತಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವವರಿಗೆ ನಿಯಮಾನುಸಾರ ದಾಖಲೆಗಳನ್ನು ಪರಿಶೀಲಿಸಿ, ಭೂಮಂಜೂರಾತಿಗೆ ಕ್ರಮ ವಹಿಸಬೇಕಾದ ತುರ್ತು ಅಗತ್ಯವಿರುವುದನ್ನು ತಿಳಿಸಿದ ಅವರು, ಈಗಾಗಲೇ ನಿಯಮಾನುಸಾರ ಗುರುತಿಸಲಾದ ಅರಣ್ಯ ಪ್ರದೇಶದಲ್ಲಿನ ಸಾಗುವಳಿದಾರರ ಸಮಸ್ಯೆಗೆ ನಿರ್ಣಾಯಕ ತೀರ್ಮಾನ ಕೈಗೊಳ್ಳುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು. 

ADVERTISEMENT

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಂಬಂಧಿಸಿದಂತೆ 9,129 ಎಕರೆಗೆ ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಸರ್ವೆ ಕಾರ್ಯದಿಂದ ಕೈಬಿಟ್ಟು ಹೋಗಿರುವ ಸಂತ್ರಸ್ತರು ಆಯಾ ತಹಶೀಲ್ದಾರರು, ಡಿಸಿಎಫ್ ಹಾಗೂ ಎಸಿಗಳಿಗೆ ನೀಡಿರುವ ಅರ್ಜಿಗಳ ಆಧರಿಸಿ ಕ್ರಮಕ್ಕೆ ತಹಶೀಲ್ದಾರರಿಗೆ ಈ ಹಿಂದೆಯೇ ಸೂಚಿಸಲಾಗಿತ್ತು. ಅದಕ್ಕಾಗಿ ವಿನ್ಯಾಸಗೊಳಿಸಲಾದ ಮಾದರಿ ನಮೂನೆಯನ್ನು ಈಗಾಗಲೇ ನೀಡಲಾಗಿದೆ. ಅವರ ವರದಿ ಸೋಮವಾರದೊಳಗಾಗಿ ಪಡೆದು ಪರಿಶೀಲಿಸಿ, ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. 

ಮೊಬೈಲ್‌ ಫೋನ್‌ ಸ್ಥಾವರಗಳ ನಿರ್ಮಾಣ ಕಾರ್ಯದಲ್ಲಿ ಸಮಸ್ಯೆ ಎದುರಾದ ಸ್ಥಳಗಳು ಮತ್ತು ಅಲ್ಲಿನ ತಾಂತ್ರಿಕ ಸಮಸ್ಯೆಗಳ ಕುರಿತು ಬಿಎಸ್‌ಎನ್‌ಎಲ್ ಅಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, ಚರ್ಚಿಸಿ, ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 

ಸಭೆಯಲ್ಲಿದ್ದ ಸಿಸಿಎಫ್ ಹನುಮಂತಪ್ಪ ಮಾತನಾಡಿ, ಹುಲಿಕಲ್‌ ಘಾಟಿಯಲ್ಲಿ ರಸ್ತೆ ಕಾಮಗಾರಿ ಆರಂಭಗೊಳಿಸಲು ಅಗತ್ಯ ದಾಖಲೆಗಳೊಂದಿಗೆ ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸಿದಲ್ಲಿ ಪರಿಶೀಲಿಸಿ ಅನುಮತಿ ನೀಡಲು ಕ್ರಮವಹಿಸಲಾಗುವುದು ಎಂದರು. 

ಪ್ರೊಬೇಷನರಿ ಐಎಎಸ್‌ ಅಧಿಕಾರಿ ಬಾಬು ರಾಜೇಂದ್ರಕುಮಾರ್‌, ಡಿಎಸ್‌ಎಫ್‌ಗಳಾದ ಅಜ್ಜಯ್ಯ, ಪ್ರಸನ್ನ ಪಟಗಾರ್, ಮೋಹನ್‌ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಅಭಿಷೇಕ್‌ ಉಪಸ್ಥಿತರಿದ್ದರು.

ಅರಣ್ಯ ಪ್ರದೇಶಗಳಲ್ಲಿ ಶುದ್ಧಕುಡಿಯುವ ನೀರನ್ನು ಪೂರೈಸಲು ಕುಡಿಯುವ ನೀರಿನ ಸ್ಥಾವರಗಳ ನಿರ್ಮಾಣಕ್ಕೆ ಘನ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣಕ್ಕೆ ಹಾಗೂ ಗ್ರಾಮಠಾಣೆಗಳಲ್ಲಿ ಬೆಳೆದು ನಿಂತ ಮರಗಳ ಕಟಾವಿಗೆ ಅರಣ್ಯ ಇಲಾಖೆ ಅನುಮತಿ ನೀಡಬೇಕು
- ಎನ್.ಹೇಮಂತ್‌ ಜಿ.ಪಂ. ಸಿಇಒ
ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಅರಣ್ಯ ಇಲಾಖೆಯ ಅನುಮತಿ ಅಗತ್ಯವಿದ್ದಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಕಾಲದಲ್ಲಿ ಅನುಮತಿ ಪಡೆದು ಕಾಮಗಾರಿಗಳ ಕೈಗೆತ್ತಿಕೊಳ್ಳಬಹುದಾಗಿದೆ
- ಕೆ.ಟಿ.ಹನುಮಂತಪ್ಪ‌ ಸಿಸಿಎಫ್ ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.