ADVERTISEMENT

ಗ್ರಂಥಾಲಯಗಳಿಗೆ ಉಚಿತ ವಿದ್ಯುತ್, ಕುಡಿಯುವ ನೀರು: ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 15:07 IST
Last Updated 17 ಫೆಬ್ರುವರಿ 2025, 15:07 IST
ಎಸ್.ಮಧು ಬಂಗಾರಪ್ಪ
ಎಸ್.ಮಧು ಬಂಗಾರಪ್ಪ   

ಶಿವಮೊಗ್ಗ: ‘ಸರ್ಕಾರಿ ಶಾಲೆಗಳ ರೀತಿಯಲ್ಲೇ ರಾಜ್ಯದ ಎಲ್ಲ ಸಾರ್ವಜನಿಕ ಗ್ರಂಥಾಲಯಗಳಿಗೂ ಉಚಿತವಾಗಿ ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಗ್ರಂಥಾಲಯ ಇಲಾಖೆಗೆ ಹೊಸ ಸ್ಪರ್ಶ ನೀಡಲು ನಿರ್ಧರಿಸಲಾಗಿದೆ. ಆ ನಿಟ್ಟಿನಲ್ಲಿ ಮೊದಲ ಬಾರಿಗೆ ಐಎಎಸ್‌ ದರ್ಜೆಯ ಅಧಿಕಾರಿಯನ್ನು ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಓದುಗರಿಂದ ಬಂದ ದೂರುಗಳನ್ನು ಅವಲೋಕಿಸಿದಾಗ ಅಲ್ಲಿ ಪುಸ್ತಕಗಳೇ ಇಲ್ಲದಿರುವುದು, ಇರುವ ತಂತ್ರಾಂಶ ಕೂಡ ಓದುಗ ಸ್ನೇಹಿಯಾಗಿಲ್ಲ ಎಂಬುದು ಸೇರಿ ಹಲವು ಲೋಪಗಳಿರುವುದು ಕಂಡುಬಂದಿದೆ. ಈ ಸಂಬಂಧ ಇಲಾಖೆಯ ಕೆಲವು ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದರು.

ADVERTISEMENT

ಡಿಜಿಟಲ್ ಗ್ರಂಥಾಲಯ ವ್ಯವಸ್ಥೆಯ ತಂತ್ರಾಂಶ ಬದಲಾವಣೆ, ಮೂಲ ಸೌಕರ್ಯ ಕಲ್ಪಿಸುವುದು, ಕಾಯಂ ಹಾಗೂ ಗುತ್ತಿಗೆ ಸಿಬ್ಬಂದಿ ನೇಮಕ ಸೇರಿದಂತೆ ಅಗತ್ಯ ಕ್ರಮಕ್ಕೆ ಮುಂದಾಗಿದ್ದೇವೆ. ಬಜೆಟ್ ಅಧಿವೇಶನಕ್ಕೆ ಮೊದಲೇ ಈ ಕುರಿತು ನಿರ್ದಿಷ್ಟ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು.

‘ಸ್ಕಿಲ್ ಅಟ್ ಸ್ಕೂಲ್‌’ ಆರಂಭಕ್ಕೆ ಸಿದ್ಧತೆ
ಮುಂಬರುವ ಶೈಕ್ಷಣಿಕ ವರ್ಷದಿಂದ ‘ಸ್ಕಿಲ್ ಅಟ್ ಸ್ಕೂಲ್’ ಹೆಸರಲ್ಲಿ 8ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೌಶಲ ಆಧರಿತ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ‘ವಿದ್ಯಾರ್ಥಿಗಳು ಈವರೆಗೂ ಪಿಯುಸಿ ಹಂತದಲ್ಲಿ ಕಲೆ ವಾಣಿಜ್ಯ ಮತ್ತು ವಿಜ್ಞಾನ ವಿಷಯದ ಕೋರ್ಸ್‌ಗಳನ್ನು ಮಾತ್ರ ಕಲಿಯುತ್ತಿದ್ದರು. ಈಗ 25 ಕೋರ್ಸ್‌ ಕಲಿಯಲು ಅವಕಾಶವಿದೆ. ಅದರಲ್ಲಿ ಕೆಲವು ಕೌಶಲ ಆಧರಿತ ಕೋರ್ಸ್‌ಗಳಿದ್ದು ‘ಸ್ಕಿಲ್ ಅಟ್ ಸ್ಕೂಲ್’ ಕಾರ್ಯಕ್ರಮ ರೂಪಿಸಲಾಗಿದೆ. 8ನೇ ತರಗತಿಯಿಂದಲೇ ಇದನ್ನು ಆರಂಭಿಸಲಾಗುತ್ತಿದೆ. ಸರ್ಕಾರದ ಸಂ‍ಪನ್ಮೂಲ ಬಳಸಿ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.