ADVERTISEMENT

ಗಾಂಧಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ವೇಗ: ಶಾಸಕ ಚನ್ನಬಸಪ್ಪ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:20 IST
Last Updated 21 ಫೆಬ್ರುವರಿ 2026, 4:20 IST
ಶಾಸಕ ಚನ್ನಬಸಪ್ಪ
ಶಾಸಕ ಚನ್ನಬಸಪ್ಪ   

ಶಿವಮೊಗ್ಗ: ನಗರದ ಪ್ರಮುಖ ಹಸಿರು ತಾಣವಾದ ಗಾಂಧಿ ಪಾರ್ಕ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲಾಗಿದ್ದು, ಒಂದು ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದರು. 

ಹರಾಜು ಪ್ರಕ್ರಿಯೆ ನಡೆಸಿದ ಸಂದರ್ಭದಲ್ಲಿ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಇನ್ನು ಮುಂದೆ ನಗರಸಭೆಯೇ ನಿರ್ವಹಣೆ ಕೈಗೊಳ್ಳಲಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

‘ಈಗಾಗಲೇ ಆಟದ ಉಪಕರಣಗಳನ್ನು ದುರಸ್ತಿಗೊಳಿಸಲಾಗಿದೆ. ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಲಾಗಿದೆ. ಹಸಿರೀಕರಣಕ್ಕಾಗಿ ತುಂತುರು ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಸಸಿಗಳಿಗೆ ನಿಯಮಿತವಾಗಿ ನೀರು ಒದಗಿಸಲಾಗುತ್ತಿದೆ. ಒಳಚರಂಡಿ ನೀರಿನಿಂದ ದುರ್ವಾಸನೆ ಬಾರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.  

ADVERTISEMENT

‘ಪಾರ್ಕ್‌ನಲ್ಲಿ ವನ್ಯಜೀವಿ ಮಾಹಿತಿ ಹಾಗೂ ವಿವರಣೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮಕ್ಕಳಲ್ಲಿ ಪರಿಸರ ಮತ್ತು ವನ್ಯಜೀವಿಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕೇಂದ್ರವನ್ನು ರೂಪಿಸಲಾಗಿದೆ’ ಎಂದರು. 

ಕಾಮಗಾರಿಗಳ ಮೇಲ್ವಿಚಾರಣೆಗೆ ಉಪ ಆಯುಕ್ತರು ಮತ್ತು ಕಾರ್ಯಪಾಲಕ ಎಂಜಿನಿಯರ್‌ ಸೇರಿದಂತೆ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು. 

‘ಉಚಿತ ಪ್ರವೇಶ ನೀಡಿದರೆ ಹಾನಿ ಮಾಡುವ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಕಡಿಮೆ ಶುಲ್ಕದ ಮೂಲಕ ಸಂರಕ್ಷಣೆಗೆ ಮಹತ್ವ ನೀಡಲಾಗಿದೆ. ವಯಸ್ಕರಿಗೆ ₹ 10, ಮಕ್ಕಳಿಗೆ ₹ 5 ನಿಗದಿಪಡಿಸಲಾಗಿದೆ’ ಎಂದರು. 

ಉಪಆಯುಕ್ತ ತುಷಾರ್, ಕಾರ್ಯಪಾಲಕ ಎಂಜಿನಿಯರ್‌ ಲಕ್ಷ್ಮೀ ಪ್ರಿಯಾ, ಜ್ಯೋತಿ ಉಪಸ್ಥಿತಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.