ADVERTISEMENT

ಬೇಡಿಕೆಗೆ ತಕ್ಕಷ್ಟು ಸಿದ್ಧವಾಗದ ಮೂರ್ತಿಗಳು: ಗಣಪತಿ ತಯಾರಕರ ಅಳಲು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 4:01 IST
Last Updated 9 ಸೆಪ್ಟೆಂಬರ್ 2021, 4:01 IST
ಭದ್ರಾವತಿ ಕಲಾವಿದ ಬೆನಕಪ್ಪಾಚಾರ್ ಅವರ ಕೈಯಲ್ಲಿ ಅರಳಿದ ಕೊರೊನಾ ನಿವಾರಕ ಗಣಪತಿ
ಭದ್ರಾವತಿ ಕಲಾವಿದ ಬೆನಕಪ್ಪಾಚಾರ್ ಅವರ ಕೈಯಲ್ಲಿ ಅರಳಿದ ಕೊರೊನಾ ನಿವಾರಕ ಗಣಪತಿ   

ಭದ್ರಾವತಿ: ‘ಗಣಪನ ನಿರ್ಮಾಣಕ್ಕೆ ಕನಿಷ್ಠ ಒಂದು ವಾರ ಬೇಕು ಸಾರ್. ಆದರೆ, ಸರ್ಕಾರದ ಆದೇಶ ತಡವಾದ್ದರಿಂದ ಬಹುತೇಕರು ಪಿಒಪಿ ಗಣಪನಿಗೆ ಮೊರೆಹೋಗುವ ಸ್ಥಿತಿ ಇದೆ’ ಎನ್ನುತ್ತಾರೆ ಕಲಾವಿದ ಗುರು.

‘ಆದೇಶದಲ್ಲಿನ ವಿಳಂಬ ಕಾರಣ ತಯಾರಕರು ಹೆಚ್ಚಿನ ಸಿದ್ಧತೆ ಮಾಡಿಕೊಂಡಿಲ್ಲ. ಈಗ ಬೇಡಿಕೆ ಹೆಚ್ಚಿದರೂ ಅದನ್ನು ಪೂರೈಸುವ ಶಕ್ತಿ ಮೂರ್ತಿ ನಿರ್ಮಾಣಕಾರರಲ್ಲಿ ಇಲ್ಲ’ ಎನ್ನುತ್ತಾರೆ ಕಲಾವಿದ ಬೆನಕಪ್ಪಚಾರ್.

‘ಈಗ ಸಾರ್ವಜನಿಕ ಗಣಪತಿಗೆ ಮೂರು ಅಡಿ ನಿಗದಿ ಮಾಡಿದ್ದಾರೆ. ಇದೇ ಆದೇಶವನ್ನು 15 ದಿನದ ಹಿಂದೆ ಮಾಡಿದ್ದರೆ ನಮಗೂ ಬೇಡಿಕೆ ಸಿಗುತ್ತಿತ್ತು. ಗಣಪನ ಪೆಂಡಾಲ್ ಮುಂಚಿನಷ್ಟು ಹೆಚ್ಚಿಲ್ಲ. ಈಗ ಏನಿದ್ದರೂ ಮನೆಯಲ್ಲಿ ಕೂರಿಸುವ ಗಣಪತಿ ಮೂರ್ತಿಗಳು ಮಾತ್ರ ಸಿದ್ಧ ಇವೆ. ಅದನ್ನೇ ಒಂದಿಷ್ಟು ಎತ್ತರ ಮಾಡಿ ಕೊಡುವ ಪರಿಸ್ಥಿತಿ ಇದೆ’ ಎನ್ನುತ್ತಾರೆ ಕಲಾವಿದ ನಾರಾಯಣಪ್ಪ.

ADVERTISEMENT

‘ಪರಿಸರಸ್ನೇಹಿ ಪಿಒಪಿ ಗಣಪತಿಗಳನ್ನು ಸಿದ್ಧಪಡಿಸಿದ್ದರೆ ಎಷ್ಟು ವರ್ಷ ಬೇಕಾದರೂ ಇಟ್ಟುಕೊಂಡು ವ್ಯಾಪಾರ ಮಾಡಬಹುದು. ಆದರೆ, ಕೈ ಕಲೆಯಲ್ಲಿ ಅರಳುವ ಮಣ್ಣಿನ ಗಣಪನಿಗೆ ಸಮಯ ಹೆಚ್ಚು ಬೇಕು ಮತ್ತು ಅದನ್ನು ಬಹಳ ವರ್ಷ ಇಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಕಲಾವಿದ ಗುರು.

ಕೊರೊನಾ ಕಲೆ: ಕಲಾವಿದ ಬೆನಕಪ್ಪಾಚಾರ್ ಕೈಯಲ್ಲಿ ಅರಳಿರುವ ಮಣ್ಣಿನ ಕೊರೊನಾ ನಿವಾರಕ ಗಣಪತಿ ತನ್ನ ಬಲಗಾಲಿನಲ್ಲಿ ಕೊರೊನಾ ಸಂಹಾರ ಮಾಡುವ ಶೈಲಿ ಇದ್ದು, ಕೈಯಲ್ಲಿ ಆಯುಧಗಳನ್ನು ಹಿಡಿದು ನಿಂತಿರುವುದು ಸದ್ಯ ವಿಶೇಷ ಎನಿಸಿದೆ.

‘ಸದ್ಯ ಸಣ್ಣಪುಟ್ಟ ಯುವಕ ಸಂಘದವರು ಹೊಸ ರೀತಿಯ ಗಣಪತಿ ನಿರ್ಮಾಣ ಮಾಡಿಕೊಡುವಂತೆ ಕೇಳಿದ್ದಾರೆ. ಅದಕ್ಕೆ ತಕ್ಕಂತೆ ವಿನ್ಯಾಸ ರೂಪಿಸುತ್ತಿದ್ದೇವೆ’ ಎನ್ನುವ ಕಲಾವಿದ ಜಯರಾಂ, ‘ಈ ಬಾರಿ ಏನೇ ಮಾಡಿದರೂ ಬೇಡಿಕೆಯಲ್ಲಿ ಭಾರಿ ಇಳಿಕೆ ಇದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.