
ಹೊಸನಗರ: ಗತಕಾಲದಲ್ಲಿ ವೈಭವ ಮೆರೆದ ಬಿದನೂರು ಸಾಮ್ರಾಜ್ಯದ ಸಾಕ್ಷಿ ಪ್ರಜ್ಞೆಯಾದ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದೇವಗಂಗೆ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ಡಿ. 19ರ ಶುಕ್ರವಾರ ಸಂಭ್ರಮದ ಎಳ್ಳಮವಾಸ್ಯೆ ಹಬ್ಬದಾಚರಣೆಗಳು ನಡೆಯಲಿವೆ. ಅಂದು ಸಂಜೆ ಕೊಳದ ಆವರಣದಲ್ಲಿ ಮಲೆನಾಡಿನಲ್ಲಿ ಇದೇ ಮೊದಲ ಬಾರಿಗೆ ಗಂಗಾರತಿ ಕಾರ್ಯಕ್ರಮ ನಡೆಯಲಿದೆ.
ಶುಕ್ರವಾರ ಬೆಳಿಗ್ಗೆ 3 ಗಂಟೆಯಿಂದ ದೇವಗಂಗೆ ಸಪ್ತ ಕೊಳದಲ್ಲಿ ಪವಿತ್ರ ತೀರ್ಥಸ್ನಾನ, ಶ್ರೀ ಗಂಗಾಧರೇಶ್ವರ ದೇವರಿಗೆ ಪ್ರಾಥ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಸಂಜೆ 6ರಿಂದ ವಿಶೇಷವಾಗಿ ಗಂಗಾರತಿ, ಕೊಳದಲ್ಲಿ ತೆಪ್ಪೋತ್ಸವ, ನಂತರ ಶ್ರೀ ನಂದಿಕೇಶ್ವರ ಯಕ್ಷಗಾನ ಮಂಡಳಿ, ಮೆಕ್ಕೆಕಟ್ಟು ಮೇಳದವರಿಂದ ‘ರಾಜಾ ರುದ್ರಕೋಪ, ಅಭಿಮನ್ಯು’ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಬಾರಿ ವಿಶೇಷವಾಗಿ ಪೆರ್ಡೂರು ಆಶೋಕ್ ಮತ್ತು ಎಸ್.ಕೆ. ನವೀನ್ ತಂಡದಿಂದ ವಿದ್ಯುತ್ ಬೆಳಕಿನ ದೃಶ್ಯ ವೈಭವವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸ್ಥಳಮಹಿಮೆ:
ದೇವಗಂಗೆ ಎಂಬ ಹೆಸರೇ ಪಾವಿತ್ರ್ಯತೆಯನ್ನು ಹೊಂದಿದೆ. ಪೂಜನೀಯ ಭಾವವನ್ನು ಕೊಡುವ ಸಪ್ತಕೊಳಗಳ ತಾಣವಾಗಿದೆ. ಅಂದಿನ ಬಿದನೂರು ಸಂಸ್ಥಾನದ ಪ್ರಮುಖ ವೈಶಿಷ್ಟ್ಯಪೂರ್ಣ ದೇಗುಲ ಇದಾಗಿದೆ. ಬಿದನೂರು ಹೆಮ್ಮೆಯ ನಾಯಕರು ಪ್ರಜಾವತ್ಸಲರಾದ ಕಾರಣ ಉತ್ತರದ ಕಾಶಿಯಂತೆ ಈ ತಾಣವನ್ನು ದಕ್ಷಿಣದ ಕಾಶಿಯಾಗಿಸಿ ಗಂಗೆಯನ್ನೇ ಇಲ್ಲಿಗೆ ತರಿಸಿ, ಗಂಗಾಧರೇಶ್ವರನ ಸನ್ನಿಧಿಯಲ್ಲಿ ದೇವಗಂಗೆ ಕೊಳಗಳ ಸಮುಚ್ಚಯವನ್ನು ನಿರ್ಮಿಸಿದರು ಎಂಬ ಪ್ರತೀತಿ ಇದೆ.
ದೇವಗಂಗೆ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಸಮಿತಿ ಎಳ್ಳಮವಾಸ್ಯೆ ಜಾತ್ರೆಯನ್ನು ವಿಶೇಷ ಪರಿಕಲ್ಪನೆಯಲ್ಲಿ ಆಯೋಜಿಸಿದೆ. ಇದಕ್ಕೆ ಗ್ರಾಮಸ್ಥರು, ಸರ್ವರ ಸಹಕಾರವು ಲಭ್ಯವಾಗಿದ್ದು ದೇವಗಂಗೆಯಲ್ಲಿ ಹಬ್ಬದ ಸಡಗರ ಮನೆಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.