ADVERTISEMENT

ತೀರ್ಥಹಳ್ಳಿ: 28ಕ್ಕೆ ‘ಗರ್ಕು’ ಕಾದಂಬರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಮೇ 2022, 2:25 IST
Last Updated 25 ಮೇ 2022, 2:25 IST
ಶಿವಾನಂದ ಕರ್ಕಿ
ಶಿವಾನಂದ ಕರ್ಕಿ   

ತೀರ್ಥಹಳ್ಳಿ: ಸಹಜ ಅರಣ್ಯಕ್ಕೆ ಪರ್ಯಾಯವಾಗಿ ನಿರ್ಮಾಣವಾದ ಅಕೇಶಿಯಾ ನೆಡುತೋಪುವಿನಿಂದ ಬದಲಾದ ಜನಜೀವನ, ಪ್ರಸ್ತುತ ಕಾಲಘಟ್ಟದ ಅಭಿವೃದ್ಧಿಯ ಚಿತ್ರಣಗಳನ್ನು ಒಳಗೊಂಡ ‘ಗರ್ಕು’ ಕಾದಂಬರಿ ಮೇ 28ರ ಶನಿವಾರ ಬಿಡುಗಡೆಯಾಗಲಿದೆ ಎಂದು ಲೇಖಕ ಶಿವಾನಂದ ಕರ್ಕಿ ಹೇಳಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಮಧ್ಯಾಹ್ನ 3.30ಕ್ಕೆ ಕಾದಂಬರಿ ಬಿಡುಗಡೆಗೊಳ್ಳಲಿದೆ. ವೈವಿಧ್ಯ ಕಳೆದುಕೊಂಡ ಮಲೆನಾಡು, ಗ್ರಾಮೀಣ ಜನಜೀವನದ ಮೇಲಿನ ಗಂಭೀರ ಪರಿಣಾಮ, ಹಣ, ಮತಾಂತರ, ಪ್ರೀತಿ, ದುಃಖ, ವ್ಯಾಮೋಹ, ಆಸೆ, ಪರಿಸರ ಕಾದಂಬರಿಯ ಮೂಲ ಕಥಾವಸ್ತು’ ಎಂದರು.

ಹಿರಿಯ ಸಾಹಿತಿ ಡಾ.ಜೆ.ಕೆ. ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಧ್ಯಾಪಕ ಡಾ.ಮೊಗೊಳ್ಳಿ ಗಣೇಶ್ ಪುಸ್ತಕ ಬಿಡುಗಡೆ ಮಾಡುವರು. ಮುಖ್ಯ ಅತಿಥಿಯಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥ ಗೌಡ ಭಾಗವಹಿಸಲಿದ್ದಾರೆ. ಸಂಸ್ಕೃತಿ ಚಿಂತಕ, ವಕೀಲ ಸುಧೀರ್‌ ಕುಮಾರ್‌ ಮುರೊಳ್ಳಿ ಕಾಂದಬರಿ ಕುರಿತು ಮಾತನಾಡಲಿದ್ದಾರೆ. ನಿವೃತ್ತ ಪ್ರಾಂಶುಪಾಲ ಡಾ.ಬಿ. ಗಣಪತಿ ಉತ್ತುಂಗ, ಚಿಂತಕ ನೆಂಪೆ ದೇವರಾಜ್ ಕಾರ್ಯಕ್ರಮ ನಿರ್ವಹಿಸುವರು ಎಂದು ತಿಳಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ಪ್ರಶಾಂತ್‌ ಹುಲ್ಕೋಡು, ಚಿಂತಕರಾದ ನಿಶ್ಚಲ್‌ ಜಾದೂಗಾರ್‌, ಶ್ರೀನಂದ ದಬ್ಬಣಗದ್ದೆ ಅವರೂ ಇದ್ದರು.

‘ಗರ್ಕು’ ಬಹುದೊಡ್ಡ ಕೊಡುಗೆ

ಪ್ರಸ್ತುತ ದೇಶದ ವಿದ್ಯಮಾನ ಅವಲೋಕಿಸಿದರೆ ಆಡಳಿತದ ಮಾಹಿತಿ ಹೊಂದಿರುವ ಪತ್ರಕರ್ತ ಕೃತಿ ರಚನೆಗೆ ಇಳಿಯಬೇಕು. ಸಾಮಾಜಿಕ ತಲ್ಲಣಗಳನ್ನು ಒಳಗೊಂಡ ಸೂಕ್ಷ್ಮ ಮನಸ್ಸಿನ ಸಾಹಿತ್ಯ ಈ ಹೊತ್ತಿನ ಅನಿವಾರ್ಯ. ಗರ್ಕು ಕೇವಲ ಮಲೆನಾಡನ್ನು ಪ್ರತಿನಿಧಿಸುವುದಿಲ್ಲ. ದೂರದ ಬ್ರೆಜಿಲ್‌, ಅಮೆಜಾನ್‌ ಕಾಡಿನ ಸ್ಥಿತ್ಯಂತರವನ್ನು ಪ್ರತಿನಿಧಿಸುತ್ತದೆ. ಕನ್ನಡ ಸಾರಸ್ವತ ಲೋಕಕ್ಕೆ ‘ಗರ್ಕು’ ಬಹುದೊಡ್ಡ ಕೊಡುಗೆ ನೀಡಲಿದೆ.

ಪ್ರಶಾಂತ್‌ ಹುಲ್ಕೋಡು, ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.