ಭದ್ರಾವತಿ: ಶುಭ ಶುಕ್ರವಾರ (ಗುಡ್ ಫ್ರೈಡೇ) ಈಸ್ಟರ್ ಹಬ್ಬಕ್ಕೆ (ಯೇಸುವಿನ ಪುನರುತ್ಥಾನ) ಮುಂಚಿನ ಶುಕ್ರವಾರ. ಯೇಸುವಿನ ತ್ಯಾಗ ಮತ್ತು ಮರಣ ದಿನವಾಗಿ ಇದನ್ನು ಆಚರಿಸಲಾಗುತ್ತದೆ.
ಈ ದಿನ ಕ್ರೈಸ್ತರಿಗೆ ಅತ್ಯಂತ ಪವಿತ್ರ. ಉಪವಾಸ ಮತ್ತು ಪ್ರಾರ್ಥನೆಯೊಂದಿಗೆ ಆಚರಿಸುತ್ತಾರೆ. ಯೇಸುವಿನ ತ್ಯಾಗ ಮತ್ತು ಪುನರುತ್ಥಾನದ ಭರವಸೆಯನ್ನು ಇದು ಸಂಕೇತಿಸುತ್ತದೆ. ತ್ಯಾಗ, ಪ್ರೀತಿ, ಕ್ಷಮೆ ಕ್ರೈಸ್ತರ ಪ್ರಮುಖ ಅಂಶಗಳು ಎಂದು ಯೇಸುಕ್ರಿಸ್ತರು ಶಿಲುಬೆಗೆ ಏರುವುದರೊಂದಿಗೆ ಅಂದು ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ಇದನ್ನು ‘ಗುಡ್ ಫ್ರೈಡೇ‘ ಎಂದು ಕರೆಯಲಾಗುತ್ತದೆ.
ಇಲ್ಲಿನ ಗಾಂಧಿನಗರ, ನ್ಯೂ ಟೌನ್, ಪೇಪರ್ ಟೌನ್, ಕಾರೇಹಳ್ಳಿ, ಮೂಲೆ ಕಟ್ಟೆ, ಮಾವಿನಕೆರೆ ಸೇರಿದಂತೆ ತಾಲ್ಲೂಕಿನಲ್ಲಿ 7 ಕ್ರೈಸ್ತ ಕ್ಯಾಥೋಲಿಕರ ದೇವಾಲಯಗಳಿದ್ದು, ಬೆಳಿಗ್ಗೆಯಿಂದಲೇ ಉಪವಾಸ, ಪ್ರಾರ್ಥನೆಯಲ್ಲಿ ಭಕ್ತರು ನಿರತರಾಗಿದ್ದಾರೆ. ಮಧ್ಯಾಹ್ನ 12 ಗಂಟೆಯ ನಂತರ ಯೇಸುಕ್ರಿಸ್ತರು ಅನುಭವಿಸಿದ ಪಾಡು ಮರಣದ 14 ಹಂತಗಳನ್ನು ದೇವಾಲಯದ ಹೊರಬದಿಯಲ್ಲಿ ಚಿತ್ರಿಸಿ, 14 ಶಿಲುಬೆಗಳನ್ನು ನೆಟ್ಟು, ಏಸುಕ್ರಿಸ್ತರು ಶಿಲುಬೆಗೆ ಏರುವ ಮುನ್ನ ಅನುಭವಿಸಿದ ಯಾತನೆಯನ್ನು ಸ್ಮರಿಸಿ ಪ್ರಾರ್ಥಿಸಲಾಗುವುದು.
ಒಂದೊಂದು ಹಂತದಲ್ಲಿ ಪ್ರಪಂಚದ ಶಾಂತಿಗಾಗಿ, ಉತ್ತಮ ಆಡಳಿತ ನಡೆಸುವ ರಾಜಕಾರಣಿಗಳಿಗಾಗಿ, ಉತ್ತಮ ಸಮಾಜಕ್ಕಾಗಿ, ಸರ್ವಧರ್ಮ ಜನಾಂಗದ ಯೋಗ ಕ್ಷೇಮಕ್ಕಾಗಿ ಹಾಗೂ ವಿವಿಧ ಉದ್ದೇಶಗಳಿಗಾಗಿ ಪ್ರಾರ್ಥಿಸಲಾಗುವುದು. ಯುವಕರಿಂದ ದೇವಾಲಯದ ಸುತ್ತಮುತ್ತಲ ಬೀದಿಗಳಲ್ಲಿ ಏಸುಕ್ರಿಸ್ತ ಅನುಭವಿಸಿದ ಯಾತನೆ ಮರಣದ ಮರು ಸೃಷ್ಟಿ ಮಾಡಲಾಗುವುದು ಎಂದು ಧರ್ಮಗುರು ಫಾದರ್ ವೀರೇಶ್ ಮೊರಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪವಿತ್ರ ವಾರ: ಶುಭ ಶುಕ್ರವಾರವಿರುವ ವಾರದ ಪ್ರತಿದಿನವೂ ಪವಿತ್ರವಾರ ಎಂಬುದಾಗಿ ಆಚರಿಸಲಾಗುವುದು. ಪವಿತ್ರ ವಾರದ ಸಾಂಪ್ರದಾಯಿಕ ಆಚರಣೆಯ ವಿಧಿ-ವಿಧಾನಗಳು ಆ ವಾರದ ಭಾನುವಾರದಿಂದ ಪ್ರಾರಂಭವಾಗಿದ್ದು, ಗರಿಗಳ ಭಾನುವಾರ (ಪಾಮ್ ಸಂಡೇ) ಆಚರಿಸಲಾಯಿತು. ಅಂದು ಯೇಸುಕ್ರಿಸ್ತರು ತಮ್ಮ 12 ಮಂದಿ ಶಿಷ್ಯರ ಪಾದ ತೊಳೆದು ಎಲ್ಲರೂ ಸಮಾನರು ಎಂದು ತೋರಿಸಿಕೊಟ್ಟಿದ್ದರು.
‘ಈ ದಿನವನ್ನು ಭಗವಂತ ಯೇಸು ಕ್ರಿಸ್ತನ ತ್ಯಾಗದ ಸಂಕೇತವಾಗಿ ಆಚರಿಸಲಾಗುತ್ತದೆ. ಗುಡ್ ಫ್ರೈಡೇ ಆಚರಿಸುವ 40 ದಿನಗಳ ಮೊದಲು ಕ್ರಿಶ್ಚಿಯನ್ ಸಮುದಾಯದವರು ಪ್ರಾರ್ಥನೆ ಮತ್ತು ಉಪವಾಸ ಪ್ರಾರಂಭಿಸುತ್ತಾರೆ’ ಎಂದು ಗಾಂಧಿನಗರದ ವೇಳಾಂಗಣಿ ಆರೋಗ್ಯ ಮತ್ತು ದೇವಾಲಯದ ಧರ್ಮ ಗುರು ಫಾದರ್ ಸ್ಟೀವನ್ ಡೇಸಾ ತಿಳಿಸಿದರು.
ಪವಿತ್ರ ಶುಕ್ರವಾರದ ನಂತರದ ಭಾನುವಾರ ಈಸ್ಟರ್ ಹಬ್ಬ ಆಚರಿಸಲಾಗುವುದು. ಕಳೆದ 40 ದಿನಗಳಲ್ಲಿ ಮಾಡಿದ ತ್ಯಾಗದ ಪ್ರತೀಕವಾಗಿ ಅಂದು ಪ್ರತಿ ಕ್ರೈಸ್ತ ಕುಟುಂಬಗಳಲ್ಲಿ ಶೇಖರಿಸಿದ ಹಣವನ್ನು ನಿರ್ಗತಿಕರಿಗೆ ನೀಡಲಾಗುವುದುಸಿಸ್ಟರ್ ವಿಲ್ಮಾ ಭದ್ರಾವತಿ
ಪ್ರಭು ಯೇಸು ಪ್ರೀತಿ ಕರುಣೆ ಜ್ಞಾನ ಮತ್ತು ಅಹಿಂಸೆಯ ಸಂದೇಶ ನೀಡಿದ್ದಲ್ಲದೆ ಯಹೂದಿ ಆಡಳಿತಗಾರರಿಂದ ತೀವ್ರ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಿ ಶಿಲುಬೆಗೇರಿಸಲ್ಪಟ್ಟರು. ಯೇಸುವಿನ ತ್ಯಾಗದ ದಿನವೆಂದು ಈ ದಿನ ಆಚರಿಸಲಾಗುತ್ತದೆಸಿಸ್ಟರ್ ಗ್ಲಾಡಿಸ್ ಪಿಂಟೋ ಭದ್ರಾವತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.