ಆನವಟ್ಟಿ: ಸೊರಬ ತಾಲ್ಲೂಕಿನ ಗಿಣಿವಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ವಿದ್ಯಾರ್ಥಿಗಳಿಲ್ಲದೇ ಕಳೆಗುಂದಿದ್ದನ್ನು ಗಮನಿಸಿದ ಗ್ರಾಮಸ್ಥರು, ಶಾಲೆಗೆ ಕಾಯಕಲ್ಪ ನೀಡಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾನ್ವೆಂಟ್ ಮಾದರಿಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಶುರು ಮಾಡಿ, ಸರ್ಕಾರಿ ಶಾಲೆಯನ್ನು ಉಳಿಸಿಕೊಂಡಿದ್ದಾರೆ. ಗ್ರಾಮಸ್ಥರು ಸಂಘಟಿತರಾಗಿ ಶಾಲಾ ಕ್ಷೇಮಾಭಿವೃದ್ಧಿ ಸಮಿತಿ ರಚಿಸಿ, ₹ 2 ಲಕ್ಷ ದೇಣಿಗೆ ಸಂಗ್ರಹಿಸಿದ್ದಾರೆ. ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳನ್ನು ಕರೆತರಲು ₹ 10,000 ಬಾಡಿಗೆ ಹೊಂದಿಸಿ, ವಾಹನ ವ್ಯವಸ್ಥೆ ಮಾಡಿದ್ದಾರೆ. ಇಬ್ಬರು ಶಿಕ್ಷಕಿಯರ ವೇತನ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪೀಠೋಪಕರಣ ಒದಗಿಸಿದ್ದಾರೆ.
ಗ್ರಾಮಸ್ಥರ ಪ್ರಯತ್ನದ ಫಲವಾಗಿ ಎಲ್‌ಕೆಜಿ ಹಾಗೂ ಯುಕೆಜಿಗೆ 32, ಒಂದರಿಂದ 7ನೇ ತರಗತಿಗೆ 50 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪಕ್ಕದ ವಡ್ಡಿಗೇರಿ, ಸಿದ್ದಿಗೇರಿ, ಹಂಚಿ ತಾಂಡಾ, ಚಿಕ್ಕಮಾಗಡಿ ತಾಂಡದ ಪಾಲಕರೂ ಆಕರ್ಷಿತರಾಗಿ ಮಕ್ಕಳನ್ನು ಈ ಶಾಲೆಗೆ ಕಳುಹಿಸುತ್ತಿದ್ದಾರೆ.
ಇಂಗ್ಲಿಷ್ ಮಾಧ್ಯಮದ ವ್ಯಾಮೋಹದಿಂದಾಗಿ ಪಾಲಕರು ಖಾಸಗಿ ಶಾಲೆಯತ್ತ ವಾಲಿದ್ದರಿಂದ ಪ್ರಸಕ್ತ ವರ್ಷದಲ್ಲಿ 6 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದು, ಸರ್ಕಾರಿ ಶಾಲೆ ಮುಚ್ಚುವ ಹಂತ ತಲುಪಿತ್ತು. ಶಿಕ್ಷಕರು, ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಚರ್ಚಿಸಿ ಸಮಿತಿ ರಚಿಸಿ ಯೋಜನೆ ಅನುಷ್ಠಾನಕ್ಕೆ ತಂದಿದ್ದರಿಂದ ಶಾಲೆಗೆ ಮರುಜೀವ ಬಂದಿದೆ.
ಮುಖ್ಯ ಶಿಕ್ಷಕ ಜಿ.ಜಗದೀಶ್, ಎಸ್‌ಡಿಎಂಸಿ ಅಧ್ಯಕ್ಷ ಎಸ್. ಈರನಗೌಡ, ಸಿಆರ್‌ಪಿ ಎನ್.ವೈ ಮೋಹನ್, ಮುಖಂಡರಾದ ಕೆ.ಪಿ. ರುದ್ರಗೌಡ, ಪ್ರವೀಣ ಕೆ.ಬಿ, ಹೋಳಬಸಪ್ಪ ಗೌಡ, ಗುರುಶಾಂತಪ್ಪ, ಪರಮೇಶಪ್ಪ, ಮಂಜಣ್ಣ ಅಂಜೇರ್, ಶಾಂತನಗೌಡ, ರಾಜಣ್ಣ ಶಾನಭೋಗ, ಮಲ್ಲನ ಗೌಡ, ಆನಂದಯ್ಯ ಸ್ವಾಮಿ, ನಾಗರಾಜ, ಹನುಮಂತಪ್ಪ ಡಮ್ಮಳೇರ್, ಶಿವಕುಮಾರ್ ಅವರು ಪಾಲಕರ ಮನವೊಲಿಸಿದರು. ಆ ಪೈಕಿ ಕೆಲವು ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ ಈ ಶಾಲೆಗೆ ದಾಖಲಿಸಿದ್ದಾರೆ.
84 ವರ್ಷದಿಂದ ಇರುವ ನಮ್ಮೂರಿನ ಹೆಮ್ಮೆಯ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರತಿಯೊಬ್ಬರೂ ಕೈಜೋಡಿಸಿ ಅಗತ್ಯ ಸೌಲಭ್ಯ ಕಲ್ಪಸಿದ್ದೇವೆ ಕೆ.ಪಿ ರುದ್ರೇಗೌಡ ಡಿಸಿಸಿ ಬ್ಯಾಂಕ್ ನಿರ್ದೇಶಕ
ಕಳೆದ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದರಿಂದ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿ ಬೇರೆಡೆ ನಿಯೋಜಿಸಲಾಗಿತ್ತು. ಈ ವರ್ಷ ಇಬ್ಬರು ಅತಿಥಿ ಶಿಕ್ಷಕರನ್ನು ನೀಡಲಾಗಿದೆ.ಜಿ. ಜಗದೀಶ್ ಮುಖ್ಯ ಶಿಕ್ಷಕ
ಒಂದು ಎಕರೆ ಜಾಗದಲ್ಲಿ ಶಾಲೆ ಇದೆ. 6 ಕೊಠಡಿ ಒಂದು ಸ್ಮಾರ್ಟ್ ಕ್ಲಾಸ್ ಸೇರಿದಂತೆ ಮೂಲ ಸೌಕರ್ಯಗಳನ್ನು ಶಾಲೆ ಒಳಗೊಂಡಿದೆ. ಅಡುಗೆ ಕೋಣೆ ಸೇರಿ ಮೂರು ಕೊಠಡಿಗಳ ಅವಶ್ಯಕತೆ ಇದೆಎಸ್ ಈರನಗೌಡ ಎಸ್‌ಡಿಎಂಸಿ ಅಧ್ಯಕ್ಷ
ಈ ವರ್ಷ ಗ್ರಾಮಸ್ಥರೇ ಪೂರ್ವ ಪ್ರಾಥಮಿಕ ತರಗತಿ ನಿರ್ವಹಿಸಲಿದ್ದು ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರದ ಅನುದಾನ ಸಿಗಲಿದೆ. ಈಗ 1ನೇ ತರಗತಿಗೆ ಮಾತ್ರ ದ್ವಿಭಾಷೆ (ಕನ್ನಡ– ಇಂಗ್ಲಿಷ್) ಕಲಿಕೆಗೆ ಮಾನ್ಯತೆ ಸಿಕ್ಕಿದೆ. ಪ್ರತಿ ವರ್ಷ ಅದು ಮುಂದುವರೆದು 7ನೇ ತರಗತಿವರೆಗೂ ದ್ವಿಭಾಷೆ ನೀತಿ ಅಳವಡಿಕೆಯಾಗುತ್ತದೆ. ಅಗತ್ಯ ಶಿಕ್ಷಕರನ್ನು ನೀಡುವುದಾಗಿ ಶಾಲಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.