ADVERTISEMENT

ಹಿಂದೂ ಮಹಾಗಣಪತಿ ಅದ್ಧೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 6:48 IST
Last Updated 13 ಸೆಪ್ಟೆಂಬರ್ 2022, 6:48 IST
ಶಿರಾಳಕೊಪ್ಪದ ಹಿಂದೂ ಮಹಾಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬೆಂಬಲಿಗರು ಹೆಗಲ ಮೇಲೆ ಕೂರಿಸಿಕೊಂಡು ಕುಣಿದರು.
ಶಿರಾಳಕೊಪ್ಪದ ಹಿಂದೂ ಮಹಾಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬೆಂಬಲಿಗರು ಹೆಗಲ ಮೇಲೆ ಕೂರಿಸಿಕೊಂಡು ಕುಣಿದರು.   

ಶಿರಾಳಕೊಪ್ಪ: ಪಟ್ಟಣದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಸುತ್ತಮುತ್ತಲ ಗ್ರಾಮಗಳ ಸಾವಿರಾರು ಯುವಕರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಮೆರವಣಿಗೆಯಲ್ಲಿ ಜಾಂಜ್, ಸಮ್ಮಳ, ಜನಪದ ಹಲಗಿ ಸೇರಿ ಹಲವು ತಂಡಗಳು ಭಾಗವಹಿಸಿದ್ದವು. ಆಕರ್ಷಕ ಹಾಡುಗಳಿಗೆ ಯುವತಿಯರು ನೃತ್ಯ ಪ್ರದರ್ಶನ ಮಾಡಿದ್ದು ಗಮನ ಸೆಳೆಯಿತು. ಬಸ್ ನಿಲ್ದಾಣದ ವೃತ್ತದಲ್ಲಿ ಯುವಕರ ನೃತ್ಯಕ್ಕಾಗಿ ವೇದಿಕೆ ಸಿದ್ಧಪಡಿಸಲಾಗಿತ್ತು. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ADVERTISEMENT

ಮೆರವಣಿಗೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ರಾಜ್ಯ ಸಹಕಾರಿ ಮಾರಾಟ ಮಂಡಳದ ನೂತನ ನಿರ್ದೇಶಕ ಅಗಡಿ ಅಶೋಕ್, ಸಮಿತಿ ಅಧ್ಯಕ್ಷ ಅಗಡಿ ಆದಿತ್ಯ ಭಾಗವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ರಟ್ಟಿಹಳ್ಳಿ ಲೋಕೇಶ್, ಎಚ್.ಎಂ.ಚಂದ್ರಶೇಖರ ಮೆರವಣಿಗೆ ಉಸ್ತುವಾರಿ ವಹಿಸಿಕೊಂಡಿದ್ದರು.

‘ಮುಂದಿನ ಸಿಎಂ ವಿಜಯೇಂದ್ರ’ ಘೋಷಣೆ : ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೆರವಣಿಗೆಗೆ ಬರುತ್ತಿದ್ದಂತೆ ಅವರ ಅಭಿಮಾನಿಗಳು ‘ಮುಂದಿನ ಮುಖ್ಯಮಂತ್ರಿ ಬಿ.ವೈ.ವಿಜಯೇಂದ್ರ’ ಎಂದು ಘೋಷಣೆ ಕೂಗಿದರು. ನಂತರ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಕುಣಿದು ಕುಪ್ಪಳಿಸಿದರು.

ಭಾರಿ ಪೊಲೀಸ್‌ ಬಂದೋಬಸ್ತ್: ಕೋಮು ಸೂಕ್ಷ್ಮ ಪ್ರದೇಶವಾಗಿರುವ ಪಟ್ಟಣದ ಗಣೇಶೋತ್ಸವ ಮೆರವಣಿಗೆಯ ಉಸ್ತುವಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ವಹಿಸಿಕೊಂಡಿದ್ದರು. ಡಿವೈಎಸ್‍ಪಿ ಶಿವಾನಂದ ಮದರಕಂಡಿ, ಸಬ್ ಇನ್‌ಸ್ಪೆಕ್ಟರ್ ರಮೇಶ್ ಸೇರಿ ಇಬ್ಬರು ಸರ್ಕಲ್ ಇನ್‌ಸ್ಪೆಕ್ಟರ್, 10 ಸಬ್ ಇನ್‌ಸ್ಪೆಕ್ಟರ್, 10 ಎಎಸ್‌ಐ, 2 ಡಿಆರ್, 2 ಕೆಎಸ್‌ಆರ್‌ಪಿ ತುಕಡಿ ಸೇರಿ 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.