ಸಾಗರ: ಇಲ್ಲಿನ ಗಣಪತಿ ಕೆರೆ ದಂಡೆಯ ಮೇಲಿರುವ ಜಾಮಿಯಾ ಮಸೀದಿ ಕಟ್ಟಡ ನವೀಕರಣ ವಿವಾದಕ್ಕೆ ಸಂಬಂಧಿಸಿದಂತೆ ಭಾನುವಾರ ಎರಡು ಗುಂಪುಗಳನಡುವೆ ಘರ್ಷಣೆ ನಡೆದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಒಂದು ಹಂತದಲ್ಲಿ ಎರಡು ಗುಂಪುಗಳಲ್ಲಿದ್ದ ಜನರು ಪರಸ್ಪರ ಕೈಕೈ ಮಿಲಾಯಿಸಲು ಮುಂದಾಗಿ ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.
ಪ್ರಾರ್ಥನಾ ಮಂದಿರದ ಕಟ್ಟಡದ ನವೀಕರಣ ಕಾಮಗಾರಿಯನ್ನು ನಿಯಮಉಲ್ಲಂಘಿಸಿ ನಡೆಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು ಅಧ್ಯಕ್ಷತೆಯಲ್ಲಿ ಎರಡೂ ಸಮುದಾಯದ ಮುಖಂಡರ ಸಭೆಯನ್ನು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಕಚೇರಿಯಲ್ಲಿ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಅತ್ತ ಪ್ರಾರ್ಥನಾ ಮಂದಿರಎದುರು ಎರಡೂ ಸಮುದಾಯದವರು ಸೇರಿದ್ದರು. ಪ್ರಾರ್ಥನಾ ಮಂದಿರ ಹಾಗೂದೇವಸ್ಥಾನದ ನಡುವೆ ಇರುವ ಚರಂಡಿಯನ್ನು ಮುಚ್ಚಲಾಗಿದೆ ಎಂದು ಆರೋಪಿಸಿದ ಒಂದು ಗುಂಪಿನ ಜನರು ಚರಂಡಿಯಲ್ಲಿದ್ದ ಮಣ್ಣನ್ನು ತೆಗೆಯಲು ಮುಂದಾದರು. ಇದನ್ನು ಮತ್ತೊಂದು ಗುಂಪಿನವರು ವಿರೋಧಿಸಿದರು.
ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಾತುಕತೆಯಲ್ಲಿ ಪಾಲ್ಗೊಂಡವರು ಸ್ಥಳಕ್ಕೆ ಆಗಮಿಸಿ ಒಪ್ಪಂದದ ಬಗ್ಗೆ ವಿವರಿಸಲು ಮುಂದಾದಾಗಒಂದು ಗುಂಪಿನಿಂದ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿದ ಮತ್ತೊಂದು ಗುಂಪು ಪ್ರತಿಯಾಗಿ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತ ದೇಶದ್ರೋಹಿಗಳನ್ನು ಬಂಧಿಸಿ ಎಂದು ಆಗ್ರಹಿಸಿತು.
ಈ ನಡುವೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು.
ದೇವರ ಹೆಸರಿನಲ್ಲಿಕೂಗಿದ ಘೋಷಣೆಯನ್ನು ತಪ್ಪಾಗಿ ಅರ್ಥೈಸಿ ‘ ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿರುವುದಾಗಿ ನಮ್ಮ ಮೇಲೆ ಆರೋಪ ಹೊರಿಸಲಾಗುತ್ತಿದೆ. ನಮ್ಮನ್ನು ದೇಶದ್ರೋಹಿಗಳೆಂದು ಕೂಗಿದವರನ್ನು ಬಂಧಿಸಿ ಎಂದು ಒಂದು ಗುಂಪು ಆಗ್ರಹಿಸಿತು.
ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಆಗ ಗುಂಪುಗಳ ನಡುವೆ ಕಲ್ಲು ತೂರಾಟ ಕೂಡ ನಡೆಯಿತು. ನಗರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಮಹಾಬಲೇಶ್ವರ್ ನಾಯ್ಕ್ ಅವರ ಹಣೆಗೆ ಕಲ್ಲು ತಾಗಿತು.
ನಂತರ ಸ್ಥಳಕ್ಕೆ ಆಗಮಿಸಿದ ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ನಗರಸಭೆ ಮಾಜಿ ಉಪಾಧ್ಯಕ್ಷ ಸೈಯದ್ ಇಕ್ಬಾಲ್ ಅವರು ಎರಡೂ ಸಮುದಾಯದವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು.
ಸಂಪೂರ್ಣ ಘಟನೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ.ಎಲ್.ನಾಗರಾಜ್ ಹೇಳಿದರೂ ಸ್ಥಳದಲ್ಲಿದ್ದವರು ಸಮಾಧಾನಗೊಳ್ಳಲಿಲ್ಲ.
ಬಳಿಕ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ ಎಂಬ ವ್ಯಕ್ತಿಯನ್ನು ಸ್ಥಳಕ್ಕೆ ಕರೆಯಿಸಲಾಯಿತು. ‘ನಾನು ದೇಶವಿರೋಧಿ ಘೋಷಣೆ ಕೂಗಿಲ್ಲ. ಅದಕ್ಕೆ ಸಾಕ್ಷ್ಯವಿದ್ದಲ್ಲಿ ನನ್ನ ವಿರುದ್ಧ ಕ್ರಮ ಕೈಗೊಳ್ಳಬಹುದು’ ಎಂದಾಗ ಪರಿಸ್ಥಿತಿ ತಿಳಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.