ADVERTISEMENT

ಶಿವಮೊಗ್ಗ | ಜ್ಞಾನ ಹಂಚುವ ಉಪನ್ಯಾಸಕರಿಗೆ ಅನ್ಯಾಯ: ಡಾ.ಧನಂಜಯ ಸರ್ಜಿ

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯಿಂದ ಸಂವಾದ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 4:45 IST
Last Updated 30 ಸೆಪ್ಟೆಂಬರ್ 2025, 4:45 IST
ಶಿವಮೊಗ್ಗ ಪ್ರೆಸ್‌ ಟ್ರಸ್ಟ್ ಆವರಣದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಡಾ.ಧನಂಜಯ ಸರ್ಜಿ ಮಾತನಾಡಿದರು
ಶಿವಮೊಗ್ಗ ಪ್ರೆಸ್‌ ಟ್ರಸ್ಟ್ ಆವರಣದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಡಾ.ಧನಂಜಯ ಸರ್ಜಿ ಮಾತನಾಡಿದರು   

ಶಿವಮೊಗ್ಗ: ‘ದೇಶದಲ್ಲಿ ರೈತರು, ಸೈನಿಕರು, ಕಾರ್ಮಿಕರೂ ಸೇರಿದಂತೆ ಶಿಕ್ಷಕ ವರ್ಗ ಮತ್ತು ಉಪನ್ಯಾಸಕರಿಗೆ ಗೌರವ ನೀಡಬೇಕು. ಪ್ರಸ್ತುತ ಅತಿಥಿ ಎಂದು ಕರೆಯಲ್ಪಡುವ ಉಪನ್ಯಾಸಕರಿಗೆ ‘ಅ’ ಅಕ್ಷರ ತೆಗೆದು ತಿಥಿ ಮಾಡಲಾಗಿದೆ. ಇದು ಶೋಚನೀಯ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಬೇಸರ ವ್ಯಕ್ತಪಡಿಸಿದರು. 

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯಿಂದ ಇಲ್ಲಿನ ಪ್ರೆಸ್‌ ಟ್ರಸ್ಟ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ಮಾನ್ಯತೆ ಪಡೆಯದ ಉಪನ್ಯಾಸಕರು 10 ರಿಂದ 20 ವರ್ಷ ದುಡಿದರೂ ಕೇವಲ ₹30,000 ಸಂಬಳ. ಅದೇ ಯುಜಿಸಿ ಮಾನ್ಯತೆ ಇರುವ ಉಪನ್ಯಾಸಕರಿಗೆ ₹3 ಲಕ್ಷ ಸಂಬಳ. ಇಲ್ಲಿ ನಾನ್ ಯುಜಿಸಿ ಉಪನ್ಯಾಸಕರನ್ನು ಕೈಬಿಡಲು ಸರ್ಕಾರ ಹೊರಟಿರುವುದು ಸರಿಯಲ್ಲ. ಅನುಭವದ ಆಧಾರದ ಮೇಲೆ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.  

ADVERTISEMENT

‘ಜ್ಞಾನವನ್ನು ಹಂಚುವ ಉಪನ್ಯಾಸಕರಿಗೆ ಈ ಪರಿಸ್ಥಿತಿ ಬರಕೂಡದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉನ್ನತ ಪದವಿ ಪಡೆದವರಿಗೆ ಜವಾಬ್ದಾರಿಯುತ ಹುದ್ದೆ ನೀಡಲು ಸಾಧ್ಯವಾಗದ ಸರ್ಕಾರಗಳು ಇರುವುದನ್ನು ನೋಡಲು ಬೇಸರವಾಗುತ್ತದೆ. ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಇಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆಯಲೇಬೇಕು ಎನ್ನುವ ಸರ್ಕಾರಗಳು, ಉದ್ಯೋಗ ನೀಡುವ ವಿಚಾರದಲ್ಲಿ ಏಕೆ ತಾರತಮ್ಯ ಎಸಗುತ್ತಿವೆ ಎಂಬುದು ತಿಳಿಯುತ್ತಿಲ್ಲ’ ಎಂದು ರೈತ ನಾಯಕ ಕೆ.ಟಿ.ಗಂಗಾಧರ ಬೇಸರಿಸಿದರು. 

‘ಸರ್ಕಾರ ಕಾನೂನು ಬದ್ಧವಾಗಿ ನಡೆದುಕೊಂಡಿದ್ದೇ ಆದರೆ, ಅತಿಥಿ ಉಪನ್ಯಾಸಕರಿಗೆ ಖಂಡಿತ ನ್ಯಾಯ ಸಿಗಲಿದೆ. ಇಲ್ಲಿ ಅನೇಕ ಕಾನೂನುಗಳು ಬದಲಾವಣೆಗೊಂಡಿದ್ದು, ಯಾವುದೇ ಸರ್ಕಾರ ಆಡಳಿತಕ್ಕೆ ಬರಲಿ ಶಿಕ್ಷಣ ನೀತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ವಿಫಲವಾಗಿವೆ. ಶಿಕ್ಷಣದ ಮೌಲ್ಯದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ’ ಎಂದು ಡಿವಿಎಸ್ ಕಾಲೇಜು ನಿವೃತ್ತ ಪ್ರಾಚಾರ್ಯ ರಾಚಪ್ಪ ದೂರಿದರು.  

‘ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆ, ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇಲ್ಲಿ ಖಾಸಗಿ ಕ್ಷೇತ್ರವೊಂದಕ್ಕೇ ಮಣೆ ಹಾಕಲಾಗುತ್ತಿದೆ. ಚುನಾವಣೆ ಪೂರ್ವ ಸಮಸ್ಯೆ ಪರಿಹರಿಸುವುದಾಗಿ ಹೇಳುವ ಎಲ್ಲ ಪಕ್ಷದ ಮುಖಂಡರು ಕುರ್ಚಿಗೆ ಅಂಟಿಕೊಂಡ ಬಳಿಕ ಜನರ ಸಮಸ್ಯೆಯನ್ನೇ ಮರೆಯುವ ಕಾಯಿಲೆಗೆ ತುತ್ತಾಗುತ್ತಾರೆ. ಸರ್ಕಾರಗಳಿಗೆ ಆರ್ಥಿಕ ಶಿಸ್ತು, ಜವಾಬ್ದಾರಿ ಬಗ್ಗೆ ಅರಿವೇ ಇಲ್ಲ’ ಎಂದು ರೈತ ನಾಯಕ ಎಚ್.ಆರ್.ಬಸವರಾಜಪ್ಪ ದೂರಿದರು.  

ಸಮಿತಿಯ ರಾಜ್ಯ ಘಟಕ ಅಧ್ಯಕ್ಷ ಸೋಮಶೇಖರ್ ಎಚ್. ಶಿಮೊಗ್ಗಿ, ಅಹಿಂದ ಸಂಘಟನೆಯ ನಟರಾಜ್ ಇದ್ದರು. 

ಶಿಕ್ಷಣ ಇಲಾಖೆಯ ಅವ್ಯವಸ್ಥೆಯಿಂದಾಗಿ ಇಂದಿನ ಯುವ ಸಮೂಹ ಬಿಎ ಬಿಕಾಂ ಬಿಎಸ್ಸಿ ಸೇರಿದಂತೆ ಇತರೆ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಹಿಂಜರಿಸುತ್ತಿದ್ದಾರೆ. ಇಲ್ಲಿ ಭವಿಷ್ಯ ಕಟ್ಟಿಕೊಳ್ಳುವುದು ಸುಲಭವಿಲ್ಲ ಎನ್ನುವುದನ್ನು ಅರ್ಥೈಸಿಕೊಂಡಿರಬಹುದು 
ಡಾ.ಧನಂಜಯ ಸರ್ಜಿ ಶಾಸಕ 
ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡುವ ನಿರ್ಧಾರದಿಂದ ಶೋಷಿತ ಸಮಾಜದ ಭವಿಷ್ಯ ಕೂಡ ಸಂಕಷ್ಟಕ್ಕೆ ಸಿಲುಕಲಿದೆ
ಟಿ.ಎಚ್. ಹಾಲೇಶಪ್ಪ ಡಿಎಸ್‌ಎಸ್ (ಅಂಬೇಡ್ಕರ್ ವಾದ) ಸಂಚಾಲಕ

‘ಇತರೆ ದೇಶಗಳಲ್ಲಿ ಶಿಕ್ಷಣಕ್ಕೆ ಒತ್ತು’

‘ಹೊಸ ಶಿಕ್ಷಣ ನೀತಿಯಡಿ ಶಿಕ್ಷಣ ಕ್ಷೇತ್ರಕ್ಕೆ ಶೇ 5 ರಿಂದ ಶೇ 6 ರಷ್ಟು ಬಂಡವಾಳ ಹೂಡಬೇಕು. ಆದರೆ ಸರ್ಕಾರ ಶೇ 2.2 ರಿಂದ ಶೇ 2.9 ರಷ್ಟು ಮಾತ್ರ ಹೂಡಿಕೆ ಮಾಡುತ್ತಿವೆ’ ಎಂದು ಡಿವಿಎಸ್ ಕಾಲೇಜು ನಿವೃತ್ತ ಪ್ರಾಚಾರ್ಯ ರಾಚಪ್ಪ ದೂರಿದರು.  ‘ಇತರೆ ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಶಿಕ್ಷಣ ವಲಯಕ್ಕೆ ಶೇ 16 ರಿಂದ ಶೇ 19 ರಷ್ಟು ಅನುದಾನ ಹೂಡುತ್ತಿವೆ. ಆ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಕ್ರಿಶ್ಚಿಯನ್ ಬೌದ್ಧ ರಾಷ್ಟ್ರಗಳು ವಿದ್ಯಭ್ಯಾಸಕ್ಕೆ ಹೆಚ್ಚು ಒತ್ತು ನೀಡುತ್ತಿವೆ‌. ಆದರೆ ಹಿಂದೂ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿಲ್ಲ. ಇದರಿಂದ ಆರ್ಥಿಕವಾಗಿಯೂ ಹಿಂದೆ ಉಳಿದಿದ್ದೇವೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.