ADVERTISEMENT

ಹರ್ಷ ಹತ್ಯೆ: ಮತ್ತೆ ನಾಲ್ವರ ಸೆರೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 18:28 IST
Last Updated 22 ಫೆಬ್ರುವರಿ 2022, 18:28 IST
ಹರ್ಷ
ಹರ್ಷ   

ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ನಗರ ಮಂಗಳವಾರ ಸಹಜ ಸ್ಥಿತಿಗೆ ಮರಳಿದೆ. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದು, ಒಟ್ಟಾರೆ ಬಂಧಿತರ ಸಂಖ್ಯೆ ಆರಕ್ಕೆ ಏರಿದೆ.

ಶಿವಮೊಗ್ಗ ಕ್ಲಾರ್ಕ್‌ ಪೇಟೆಯ ರಿಹಾನ್‌ ಶರೀಫ್‌, ಆಸಿಫ್‌ ಉಲ್ಲಾಖಾನ್‌, ಮುರಾದ್‌ನಗರದ ನಿಹಾನ್‌, ಟ್ಯಾಂಕ್‌ ಮೊಹಲ್ಲಾದ ಅಬ್ದುಲ್‌ ಅಫಾನ್‌ ಬಂಧಿತ ಆರೋಪಿಗಳಾಗಿದ್ದಾರೆ. ಪೊಲೀಸರು ಸೋಮವಾರಮೊಹಮ್ಮದ್ ಖಾಸಿಫ್‌, ಸೈಯದ್‌ ನದೀಂ ಅವರನ್ನು ಬಂಧಿಸಿದ್ದರು.ಬಂಧಿತರ ಪೈಕಿ ಖಾಸಿಫ್‌ (30) ಹೊರತುಪಡಿಸಿ, ಉಳಿದ ಎಲ್ಲ ಆರೋಪಿಗಳೂ 20ರಿಂದ 22 ವಯಸ್ಸಿನ ಒಳಗಿನವರು.

‘ಹರ್ಷ ಹತ್ಯೆಗೆ ಸಂಬಂಧಿಸಿದಂತೆ 12 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಅವರಲ್ಲಿ 6 ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದು ಮೇಲುನೋಟಕ್ಕೆ ದೃಢಪಟ್ಟ ಕಾರಣ ಅವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದರು.

ADVERTISEMENT

‘ಅಪ್ಪ, ಅಮ್ಮನಿಗೆ ಒಳ್ಳೆಯ ಮಕ್ಕಳಾಗಿ’

ಮೃತ ಹರ್ಷ ಅವರ ಸಹೋದರಿ ಅಶ್ವಿನಿ ಮಾಧ್ಯಮಗಳ ಮೂಲಕ ಯುವ ಜನರಿಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಜನರು ಹಂಚಿಕೊಂಡಿದ್ದಾರೆ.

‘ಹಿಂದೂ, ಹಿಂದುತ್ವ ಎಂದಿದ್ದಕ್ಕೆ ಇಂದು ನನ್ನ ತಮ್ಮನಿಗೆ ಇಂತಹ ಸ್ಥಿತಿ ಬಂದಿದೆ. ದಯವಿಟ್ಟು ಎಲ್ಲರೂ ಒಂದು ಸಲ ನೋಡಿ. ಎಲ್ಲ ನನ್ನ ಅಣ್ಣ–ತಮ್ಮಂದಿರಿಗೆ ಕೈಮುಗಿದು ಬೇಡಿಕೊಳ್ಳುತ್ತೇನೆ. ಹಿಂದೂಗಳು, ಮುಸ್ಲಿಮರಿಗೂ ಬೇಡಿಕೊಳ್ಳುತ್ತೇನೆ. ನಿಮ್ಮ ಅಪ್ಪ– ಅಮ್ಮನಿಗೆ ಒಳ್ಳೆಯ ಮಕ್ಕಳಾಗಿರಿ. ಇದೆಲ್ಲ ಮಾಡಲು ಹೋಗಬೇಡಿ’ ಎಂದು ಯುವ ಸಮೂಹಕ್ಕೆ ಅಶ್ವಿನಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.