ಹೊಸನಗರ (ಶಿವಮೊಗ್ಗ): 'ಮಲೆನಾಡಿನಿಂದ ಕರಾವಳಿ ಭಾಗಕ್ಕೆ ಸಂಪರ್ಕಿಸುವ ಸಾಗರ ತಾಲ್ಲೂಕಿನ ಹಸಿರುಮಕ್ಕಿಯ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ 2026ರ ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು.
ರಾಜ್ಯ ಸರ್ಕಾರದ ಯೋಜನೆಯಾದ ಹಸಿರು ಮಕ್ಕಿ ಸೇತುವೆ ಕಾಮಗಾರಿ ವೀಕ್ಷಿಸಿ ಬಳಿಕ ಮಾತನಾಡಿದರು.
ಈ ಭಾಗದಲ್ಲಿ ಸೇತುವೆ ನಿರ್ಮಿಸುವುದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಕನಸಾಗಿತ್ತು. ಟೆಂಡರ್ ನಿಯಮಾವಳಿ ಪ್ರಕಾರ 1155 ಮೀ. ಉದ್ದ ಹಾಗೂ 8.5 ಮೀ. ಅಗಲದ ಸೇತುವೆ ನಿರ್ಮಾಣ ಕಾಮಗಾರಿಗೆ 2018ರಲ್ಲಿ ಟೆಂಡರ್ ಪ್ರಕ್ರಿಯೆ ನಡೆದಾಗ ಅಂದಾಜು ವೆಚ್ಚ ₹115 ಕೋಟಿಯಾಗಿತ್ತು. ಪ್ರಸ್ತುತ ₹125 ಕೋಟಿ ಅಂದಾಜು ವೆಚ್ಚ ತಗಲುವ ಸಾಧ್ಯತೆ ಇದೆ ಎಂದರು.
ಶಾಸಕ ಬೇಳೂರು ಗೋಪಾಲ ಕೃಷ್ಣ ಮಾತನಾಡಿ, 'ಕಾಗೋಡು ತಿಮ್ಮಪ್ಪ ಅವರ ಕನಸು ನನಸುಗೊಳಿಸಲು ಬಿಜೆಪಿಗರು ಬಿಡಲಿಲ್ಲ. ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಹಸಿರು ಮಕ್ಕಿ ಸೇತುವೆ ಕಾಮಗಾರಿಗೆ ಹಿನ್ನಡೆ ಆಗಿತು.
ಉದ್ದೇಶಿತ ಸೇತುವೆ ನಿರ್ಮಾಣ ಕಾಮಗಾರಿ ಮಾರ್ಗದಲ್ಲಿ ಒಟ್ಟು 34 ಪಿಲ್ಲರ್‌ಗಳು ಶರಾವತಿ ಹಿನ್ನೀರಿನ ಆಳದೊಳಗಿಂದ ನಿರ್ಮಾಣವಾಗಬೇಕಿದೆ. ಆದರೆ ಈವರೆಗೆ 22 ಪಿಲ್ಲರ್‌ಗಳ ಕಾಮಗಾರಿ ಮಾತ್ರ ಆಗಿದೆ. ಸೇತುವೆ ಪೂರ್ಣಗೊಳ್ಳಲು 16 ಮೀಟರ್ ಬಾಕಿ ಇದೆ ಎಂದರು.
ಬಿಜೆಪಿಯಿಂದ ಕಾಮಗಾರಿಗೆ ನಿರ್ಲಕ್ಷ್ಯ: ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸಿರುವ ಅಂಬಾರಗೊಡ್ಲು- ಕಳಸವಳ್ಳಿ (ಸಿಗಂದೂರು) ಸೇತುವೆ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು ಎನ್ನುವ ಕಾರಣಕ್ಕೆ ಮಲೆನಾಡು- ಕರಾವಳಿ ಸಂಪರ್ಕ ಕಲ್ಪಿಸುವ ಹಸಿರು ಮಕ್ಕಿ ಸೇತುವೆ ಕಾಮಗಾರಿಯನ್ನು ಹಿಂದಿನ ಬಿಜೆಪಿ ಸರ್ಕಾರ ಕಡೆಗಣಿಸಿತು. ಇಲ್ಲಿನ ಸಂಸದರು, ಶಾಸಕರ ನಿರ್ಲಕ್ಷ್ಯದಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಪುನಃ ಚಾಲನೆ ದೊರೆತಿದೆ. ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.