ADVERTISEMENT

ಸಾದ್ವಿ ಪ್ರಜ್ಞಾಸಿಂಗ್ ವಿರುದ್ಧ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಿಂದ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 13:31 IST
Last Updated 28 ಡಿಸೆಂಬರ್ 2022, 13:31 IST
ಸಾದ್ವಿ ಪ್ರಜ್ಞಾಸಿಂಗ್
ಸಾದ್ವಿ ಪ್ರಜ್ಞಾಸಿಂಗ್    

ಶಿವಮೊಗ್ಗ: ದ್ವೇಷ ಭಾಷಣದ ಹಿನ್ನೆಲೆಯಲ್ಲಿ ಭೋಪಾಲ್ ನ ಬಿಜೆಪಿ ಸಂಸದೆ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ವಿರುದ್ಧ ಎಐಸಿಸಿ ಮುಖಂಡ ತೆಹಸೀನ್ ಪೂನಾವಾಲಾ ಪರವಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ಸಂಜೆ ಇಲ್ಲಿನ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.

ಶಿವಮೊಗ್ಗದಲ್ಲಿ ಭಾನುವಾರ ಹಿಂದೂ ಜಾಗರಣ ವೇದಿಕೆಯಿಂದ ನಡೆದ ಕಾರ್ಯಕ್ರಮದಲ್ಲಿ ಸಾದ್ವಿ ಪ್ರಜ್ಞಾ ಸಿಂಗ್ ಭಾಷಣ ಮಾಡಿದ್ದರು.

ಮಾಧ್ಯಮಗಳ ವರದಿ ಆಧರಿಸಿ ತೆಹಸೀನ್ ಪೂನಾವಾಲ ಟ್ವಿಟರ್ ಮೂಲಕ ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರಿಗೆ ದೂರು ನೀಡಿದ್ದರು. ದ್ವೇಷ ಭಾಷಣದ ಹಿನ್ನೆಲೆಯಲ್ಲಿ ಸಾದ್ವಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಮನವಿ ಮಾಡಿದ್ದರು.

ADVERTISEMENT

ಟ್ವಿಟರ್ ಮೂಲಕ ದೂರು ನೀಡಿದಲ್ಲಿ ನಿಯಮಾವಳಿ ಅನ್ವಯ ಪರಿಗಣಿಸಲು ಆಗುವುದಿಲ್ಲ. ಖುದ್ದಾಗಿ ಬಂದು ದೂರು ದಾಖಲಿಸುವಂತೆ ಪೂನವಾಲಾ ಅವರಿಗೆ ತಿಳಿಸಲಾಗಿದೆ ಎಂದು ಎಸ್ಪಿ ಪ್ರತಿಕ್ರಿಯಿಸಿದ್ದರು.

'ಸಮಯದ ಅಭಾವದಿಂದ ತೆಹಸೀನ್ ಪೂನಾವಾಲಾ ಅವರು ಶಿವಮೊಗ್ಗಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ಪರವಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ' ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ 'ಪ್ರಜಾವಾಣಿ'ಗೆ ತಿಳಿಸಿದರು.

ಈ ಮಧ್ಯೆ ಟಿಎಂಸಿ ಸಂಸದ ಸಾಕೇತ್ ಗೋಖಲೆ ಕೂಡ ಇ-ಮೇಲ್ ಮೂಲಕ ಸಾದ್ವಿ ಪ್ರಜ್ಞಾ ಸಿಂಗ್ ವಿರುದ್ಧ ಎಸ್ಪಿಗೆ ಮಂಗಳವಾರ ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು 'ಪ್ರಜಾವಾಣಿ' ಎಸ್ಪಿ ಅವರನ್ನು ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.