ADVERTISEMENT

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಲಗಾಮಿಲ್ಲ: ಎಚ್.ಎಸ್. ಸುಂದರೇಶ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 5:55 IST
Last Updated 14 ಜುಲೈ 2021, 5:55 IST
ಎಚ್‌.ಎಸ್‌.ಸುಂದರೇಶ್‌
ಎಚ್‌.ಎಸ್‌.ಸುಂದರೇಶ್‌   

ಶಿವಮೊಗ್ಗ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಇದಕ್ಕೆ ಲಗಾಮು ಹಾಕುವವರೇ ಇಲ್ಲವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಕಟುವಾಗಿ ಟೀಕಿಸಿದರು.

‘ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಪಕ್ಷದ ಸಾಮಾನ್ಯ ಕಾರ್ಯಕರ್ತನವರೆಗೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಯಾವುದೇ ಹೊಸ ಯೋಜನೆಗಳು ಬಂದರೂ ಕಿಕ್‌ಬ್ಯಾಕ್ ಸಿದ್ಧವಾಗಿಯೇ ಇರುತ್ತದೆ. ರಸ್ತೆಯಿಂದ ಹಿಡಿದು ವಿಮಾನನಿಲ್ದಾಣದವರೆಗೆ ಕಮಿಷನ್ ದಂಧೆ ನಡೆಯುತ್ತಲೇ ಇದೆ. ಇವರಿಗೆ ಹೇಳುವವರು ಕೇಳುವವರಾರೂ ಇಲ್ಲ. ಅಧಿಕಾರದ ದರ್ಪದಲ್ಲಿ→ಮನಸ್ಸಿಗೆ ಬಂದಂತೆ ನಡೆಯುತ್ತಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಕೊರೊನಾ ಸಂಕಟದಲ್ಲಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಜನರ ಕಷ್ಟಗಳನ್ನು ಆಲಿಸದ ಸಚಿವರು ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕು, ಗೆಲ್ಲಲು ಸಾಧ್ಯವಾಗದಿದ್ದರೆ ಬೇರೆ ಪಕ್ಷದವರನ್ನು ಹೇಗೆ ಕರೆತರಬೇಕು ಎಂದು ಲೆಕ್ಕ ಹಾಕುತ್ತಿದ್ದಾರೆ. ಈಗ ಪಕ್ಷದೊಳಗೆ ಉಲ್ಬಣಿಸಿರುವ ಭಿನ್ನಾಭಿಪ್ರಾಯ ಗಳಿಗೆ ತೇಪೆ ಹಚ್ಚುವುದರಲ್ಲೇ ಕಾಲ ಕಳೆಯುತ್ತಿದ್ದಾರೆಯೇ ಹೊರತು, ಅಭಿವೃದ್ಧಿ ಬಗ್ಗೆ ಬಿಜೆಪಿಯವರಿಗೆ ಕಿಂಚಿತ್ತೂ ಯೋಚನೆ ಇಲ್ಲ’ಟೀಕಿಸಿದರು.

ADVERTISEMENT

‘ಶಿವಮೊಗ್ಗದಲ್ಲಿ ಸ್ಮಾರ್ಟ್‌ಸಿಟಿ ಹೆಸರಿನಲ್ಲಿ ಕಳೆಪ ಕಾಮಗಾರಿ ನಡೆಯುತ್ತಿದ್ದರೂ ಸಚಿವ ಕೆ.ಎಸ್.ಈಶ್ವರಪ್ಪ ಅವರು ನೋಡಿಯೂ ನೋಡದಂತೆ ಓಡಾಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲೂ ಬಿಜೆಪಿ ತನ್ನ ಸ್ವಾರ್ಥ ರಾಜಕಾರಣ ಮಾಡುತ್ತಿದೆ. ವರ್ಷ ಕಳೆದರೂ ನೆರೆ ಪರಿಹಾರ ಇನ್ನೂ ಅರ್ಹರಿಗೆ ದೊರಕಿಲ್ಲ. ಕಾರ್ಮಿಕರಿಗೆ ಕಿಟ್ ವಿತರಣೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಆದರೆ, ಹಲವರಿಗೆ ಇನ್ನೂ ಕಾರ್ಮಿಕರ ಕಾರ್ಡ್ನವೀಕರಣ ಮಾಡಿಕೊಟ್ಟಿಲ್ಲ’ ಎಂದು ದೂರಿದರು.

‘ಕಾಂಗ್ರೆಸ್ ಒಂದು ತಾತ್ವಿಕ ಹೋರಾಟ ಹಮ್ಮಿಕೊಂಡಿದೆ. ನಾವು ಪ್ರತಿಭಟನೆ ಮಾಡಬಹುದಷ್ಟೇ. ಸರ್ಕಾರ ಆಡಳಿತ, ಅಧಿಕಾರ ಎಲ್ಲವೂ ಅವರ ಕೈಯಲ್ಲೇ ಇರುವಾಗ ಹಲವು ಸಂದರ್ಭಗಳಲ್ಲಿ ನಮ್ಮ ಹೋರಾಟಕ್ಕೆ ಹಿನ್ನಡೆಯಾಗಬಹುದು. ಹಾಗೆಂದು ನಾವು ಸುಮ್ಮನಿರುವುದಿಲ್ಲ’ ಎಂದು ಖಾರವಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಎಚ್.ಸಿ.ಯೋಗೇಶ್, ಮೇಹಕ್ ಷರೀಫ್, ಪ್ರಮುಖರಾದ ಸಿ.ಎಸ್.ಚಂದ್ರಭೂಪಾಲ, ವಿಶ್ವನಾಥ್ ಕಾಶಿ, ನಾಗರಾಜ್, ಚಂದನ್ ಎಂ.ಎನ್.ಡಿ.ಪ್ರವೀಣ್ ಹಲವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.