ಆನಂದಪುರ: ಸುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಭಾರಿ ಪ್ರಮಾಣದ ಹಾನಿ ಉಂಟಾಗಿದೆ.
ಖೈರಾ ಹಾಗೂ ಕೆರೆಹಿತ್ಲು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಳೆಯ ಅಬ್ಬರದಿಂದಾಗಿ 30 ಎಕರೆಗೂ ಹೆಚ್ಚು ಶುಂಠಿ ಬೆಳೆ ನಷ್ಷವಾಗಿದೆ.
ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆರೆಹಿತ್ಲು ಗ್ರಾಮದ ಅಕ್ಬರ್ ಖಾನ್, ಖೈರಾ ಗ್ರಾಮದ ರಮಾನಂದ ಸೇರಿದಂತೆ ಅನೇಕ ರೈತರ ಶುಂಠಿ ಹೊಲ ನೀರಿನಿಂದ ಮುಳುಗಡೆ ಆಗಿದೆ.
‘1 ಎಕರೆಗೆ ₹ 5 ಲಕ್ಷ ಖರ್ಚು ಮಾಡಿ ಶುಂಠಿ ಬೆಳೆದಿದ್ದೆ. ಎಕರೆಗೆ ₹ 10 ಲಕ್ಷದ ಆದಾಯದ ನೀರಿಕ್ಷೆ ಇತ್ತು. ಆದರೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ವಡ್ಡಿನ ಕೆರೆ ಒಡೆದು ಶುಂಠಿ ಗದ್ದೆ ಜಲಾವೃತವಾಗಿದೆ. ಶುಂಠಿ ಪೂರ್ಣ ಬೆಳೆಯದ ಕಾರಣ ಕಿತ್ತು ಮಾರಾಟ ಮಾಡಿದರೂ ಹಾಕಿದ ಹಣ ಬರುವುದಿಲ್ಲ’ ಎಂದು ರೈತ ರಮಾನಂದ ಅಳಲು ತೋಡಿಕೊಂಡರು.
ತಂಗಳವಾಡಿ ಗ್ರಾಮದಲ್ಲಿ ಅಮ್ಮನಕೆರೆ ದಂಡೆ ಒಡೆದು ನೂರಾರು ಎಕರೆ ಭತ್ತದ ಗದ್ದೆ, ಅಡಿಕೆ ತೋಟ, ಕಾಳು ಮೆಣಸಿನ ಬೆಳೆ ಹಾನಿಗೀಡಾಗಿದೆ. ತೋಟದಲ್ಲಿ ಮರಳು ಹಾಗೂ ದೊಡ್ಡ ದೊಡ್ಡ ಕಲ್ಲುಗಳು ಬಂದು ಬಿದ್ದಿವೆ.
ಗಿಳಾಲಗುಂಡಿಯಲ್ಲಿ ಹೆದ್ದಾರಿ ಪಕ್ಕದಲ್ಲಿದ್ದ ಬಸ್ ನಿಲ್ದಾಣ ಬಹುತೇಕ ಕೊಚ್ಚಿಕೊಂಡು ಹೋಗಿದೆ. ಪತ್ರೆಹೊಂಡದಲ್ಲಿ ರಸ್ತೆ ಕುಸಿದಿದ್ದು, ಸಂಪರ್ಕ ಕಡಿತಗೊಂಡಿದೆ. ಗೇರುಬೀಸು ಹಾಗೂ ಇರುವಕ್ಕಿ ಗ್ರಾಮಗಳಲ್ಲಿ ಸೇತುವೆ ಮುಳುಗಡೆಯಾಗಿದ್ದು, ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಮಳೆಯಿಂದಾಗಿ ಕಣ್ಣೂರು ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಸಾಕಷ್ಟು ಹಾನಿ ಉಂಟಾಗಿದೆ. ಗ್ರಾಮಸ್ಥರು ರಸ್ತೆಯನ್ನೇ ಒಡೆದು ನೀರು ಹರಿಯಲು ಅನುವು ಮಾಡಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಮಳೆ ಬಂತೆಂದರೆ ಪ್ರತಿವರ್ಷ ಇದೇ ಸಮಸ್ಯೆ ಉಂಟಾಗುತ್ತದೆ. ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಭಾರಿ ಮಳೆಯಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮುಂಬಾಳು ಗ್ರಾಮದಲ್ಲಿ ವಿದ್ಯುತ್ ಕಂಬಗಳು ಕೊಚ್ಚಿಕೊಂಡು ಹೋಗಿದೆ.
ನಗಾರಭಿವೃದ್ಧಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ, ಸಹಾಯಕ ಕೃಷಿ ನಿರ್ದೇಶಕರಾದ ಚಂದ್ರಶೇಖರ್, ಎಂಜಿನಿಯರ್ ಸಂತೋಷ್, ಉಪ ತಹಶೀಲ್ದಾರ್ ಕವಿರಾಜ್, ಪ್ರಮುಖರಾದ ಖಲಿಮುಲ್ಲಾ, ಚೇತನ್ ರಾಜ್ ಕಣ್ಣೂರ್, ರಮಾನಂದ, ರವಿ ಯಡೇಹಳ್ಳಿ, ರಹಮತ್ ವುಲ್ಲಾ, ಶರತ್ ನಾಗಪ್ಪ ಹಾನಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.