ಹೊಸನಗರ: ಮಲೆನಾಡ ನಡುಮನೆ ಹೊಸನಗರ ತಾಲ್ಲೂಕಿನಾದ್ಯಂತ ಬಿರುಗಾಳಿ ಸಹಿತ ಜೋರು ಮಳೆಯಾಗುತ್ತಿದೆ. ಕಳೆದ ವಾರದಿಂದ ಆರಂಭವಾದ ಮಳೆ ಶುಕ್ರವಾರದಿಂದ ಜೋರಾಗಿ ಸುರಿಯುತ್ತಿದೆ. ಶನಿವಾರ ಸಂಜೆ ವೇಳೆಗೆ ಗಾಳಿ, ಮಳೆ ಹೆಚ್ಚಿದ್ದು, ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ.
ಶನಿವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ 14.5 ಸೆಂ.ಮೀ. ಮಳೆ ದಾಖಲಾಗಿದೆ.
ಉಳಿದಂತೆ ಹುಲಿಕಲ್ 14 ಸೆಂ.ಮೀ. ಸಾವೇಹಕ್ಲು 9 ಸೆಂ.ಮೀ, ಮಾಣಿ 7 ಮತ್ತು ಯಡೂರಿನಲ್ಲಿ 6 ಸೆಂ.ಮೀ. ಮಳೆ ದಾಖಲಾಗಿದೆ.
ತಾಲ್ಲೂಕಿನ ಪ್ರಮುಖ ನದಿ ಶರಾವತಿ ಸೇರಿ ವಿವಿಧ ನದಿಗಳು ಹಾಗೂ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ತಾಲ್ಲೂಕಿನ ಪ್ರಮುಖ ರಸ್ತೆ ಸಂಪರ್ಕವಾದ ಬೈಂದೂರು– ರಾಣೇಬೆನ್ನೂರು ರಾಷ್ಟ್ರೀಯ ಹೆದ್ದಾರಿ 766 ‘ಸಿ’ ಮಳೆ ಪರಿಣಾಮ ಹದಗೆಟ್ಟು ಹೋಗಿದೆ. ರಸ್ತೆ ಇಕ್ಕೆಲಗಳು ಕೊಚ್ಚಿಕೊಂಡು ಹೋಗಿದೆ. ಚರಂಡಿಯಲ್ಲಿ ಮಣ್ಣು ಕಟ್ಟಿ ಕುಳಿತಿದ್ದು, ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮೊದಲೇ ಹೊಂಡಗುಂಡಿಗಳಿಂದ ಆವೃತವಾದ ರಸ್ತೆಯಲ್ಲಿ ನೀರು ತುಂಬಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ.
ಹಾಗೇ ಶಿವಮೊಗ್ಗ– ಕುಂದಾಪುರ, ಯಡೂರು– ಮಾಸ್ತಿಕಟ್ಟೆ, ಹೊಸನಗರ– ತೀರ್ಥಹಳ್ಳಿ ರಸ್ತೆಗಳು ಮಳೆಯಿಂದ ಹಾನಿಗೊಳಗಾಗಿವೆ.
ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದ್ದರೂ ತಾಲ್ಲೂಕು ಆಡಳಿತ ಇತ್ತ ಗಮನ ಹರಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.