ADVERTISEMENT

ಶಿವಮೊಗ್ಗ: ವಾಡಿಕೆಗಿಂತ ಹೆಚ್ಚು ಮಳೆ; ಕೃಷಿ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 5:36 IST
Last Updated 6 ಜುಲೈ 2025, 5:36 IST
   

ಶಿವಮೊಗ್ಗ: ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಭರ್ಜರಿ ಮಳೆಯಾಗಿದೆ. ಜಿಲ್ಲೆಯ ವಾಡಿಕೆ ಮಳೆ 33.66 ಸೆಂ.ಮೀ ಇದ್ದರೂ, ಈ ಬಾರಿ 42.86 ಸೆಂ.ಮೀ ಮಳೆಯಾಗಿದೆ. ಹೀಗಾಗಿ ಮಲೆನಾಡಿನಲ್ಲಿ ಭದ್ರಾ, ಮಾಣಿ, ಲಿಂಗನಮಕ್ಕಿ ಸೇರಿದಂತೆ ಜಲಾಶಯಗಳ ನೀರಿನಮಟ್ಟ ದಾಖಲೆಯ ಏರಿಕೆಯಾಗಿದೆ.

ಜೊತೆಗೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಮೆಕ್ಕೆಜೋಳ (ಮುಸುಕಿನ ಜೋಳ) ಬಿತ್ತನೆಗೆ ರೈತರು ಉಳುಮೆ ಆರಂಭಿಸಿದ್ದು, ಭತ್ತದ ನಾಟಿಗೆ ಬೀಜ ಚೆಲ್ಲಲು ಅಣಿ ಮಾಡಿಕೊಂಡಿದ್ದಾರೆ.

ಭತ್ತ, ಮುಸುಕಿನ ಜೋಳಕ್ಕೆ ವಿಮೆ: 

ADVERTISEMENT

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರು ಕೇವಲ ಶೇ 2ರಷ್ಟು ಪ್ರೀಮಿಯಂ ಮೊತ್ತ ಪಾವತಿಸಿ ಬೆಳೆ ವಿಮೆ ಯೋಜನೆಗೆ ನೋಂದಾಯಿಸಿಕೊಳ್ಳಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಟಿ.ರಮೇಶ್ ತಿಳಿಸಿದ್ದಾರೆ.

ಬೆಳೆಗಳು ನೈರ್ಸಗಿಕ ವಿಕೋಪಗಳಿಂದ ಕುಂಠಿತ ಬೆಳವಣಿಗೆ, ಇಳುವರಿ ನಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ರೈತರನ್ನು ಆರ್ಥಿಕ ನಷ್ಟದಿಂದ ಹೊರತರಲು ಈ ಯೋಜನೆ ಉಪಯುಕ್ತವಾಗಿದೆ. ಬೆಳೆ ವಿಮೆ ಯೋಜನೆಗೆ ನೋಂದಾಯಿಸಿಕೊಳ್ಳಲು ಮುಸುಕಿನ ಜೋಳಕ್ಕೆ ಜುಲೈ 31 ಕೊನೆಯ ದಿನಾಂಕ. ಭತ್ತದ ಬೆಳೆಗೆ ಆಗಸ್ಟ್ 16 ಕೊನೆಯ ದಿನವಾಗಿದೆ. ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಕರ್ನಾಟಕ-ಒನ್, ಗ್ರಾಮ-ಒನ್ ಕೇಂದ್ರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆ ವಿಮೆ ಪ್ರೀಮಿಯಂ ಪಾವತಿಸಬಹುದು. 

ರೈತರು ತಾವು ಬೆಳದ ಬೆಳೆಯನ್ನು ಮೊಬೈಲ್ ಫೋನ್ ಆ್ಯಪ್ ಮೂಲಕ ಸಮೀಕ್ಷೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಸಮೀಕ್ಷೆ ಸಂದರ್ಭದಲ್ಲಿ ತೊಡಕು ಉಂಟಾದಾಗ ರೈತರು ಗೂಗಲ್ ಪ್ಲೇಸ್ಟೋರ್‌ನಲ್ಲಿ ಮುಂಗಾರು ರೈತರ ಬೆಳೆ ಸಮೀಕ್ಷೆ-2025 (Farmer Crop Survey App-2025) ಆ್ಯಪ್ ಡೌನ್ಲೋಡ್ ಮಾಡಿಕೊಂಡು ವಿವರ ದಾಖಲಿಸಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.