ADVERTISEMENT

ಕೋಣಂದೂರು| ಹಿಂದುತ್ವ ದೇಶದ ಅಸ್ಮಿತೆ, ಸನಾತನ ಧರ್ಮ ದೇಶದ ಆತ್ಮ: ಸುನಿಲ್ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 4:28 IST
Last Updated 9 ಫೆಬ್ರುವರಿ 2026, 4:28 IST
ಕೋಣಂದೂರಿನಲ್ಲಿ ಶನಿವಾರ ನಡೆದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಕೆ.ಆರ್.ಸುನಿಲ್ ಮಾತನಾಡಿದರು
ಕೋಣಂದೂರಿನಲ್ಲಿ ಶನಿವಾರ ನಡೆದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಕೆ.ಆರ್.ಸುನಿಲ್ ಮಾತನಾಡಿದರು   

ಕೋಣಂದೂರು: ‘ಹಿಂದುತ್ವ ಈ ದೇಶದ ಅಸ್ಮಿತೆ, ಸನಾತನ ಧರ್ಮ ಈ ದೇಶದ ಆತ್ಮ. ಕ್ರಾಂತಿಯಿಂದ ನಾವು ಸ್ವಾತಂತ್ರ್ಯ ಪಡೆದವು. ಶಾಂತಿಯಿಂದಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತದ ಗೋರಕ್ಷ ಪ್ರಮುಖ್ ಕೆ.ಆರ್.ಸುನಿಲ್ ಹೇಳಿದರು.

ಇಲ್ಲಿನ ಕೋಣಂದೂರು- ಹಾದಿಗಲ್ಲು ಹಿಂದೂ ಸಂಗಮ ನಿರ್ವಹಣಾ ಸಮಿತಿ, ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಶನಿವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

‘ಇಸ್ಲಾಮರು ನಿರಂತರ 1,000 ವರ್ಷಗಳ ಕಾಲ ನಮ್ಮ ಮಠ ಮಂದಿರಗಳ ಆಕ್ರಮಣ ಮಾಡಿ ನಮ್ಮ ಸಂಪತ್ತನ್ನು ದೋಚಿದರು. ಗುಜರಾತಿನ ಸೋಮನಾಥ ದೇವಾಲಯದ ಮೇಲೆ ಸತತ 17 ಬಾರಿ ಆಕ್ರಮಣ ಮಾಡಿದ್ದರು. ರಜಪೂತರು 500 ವರ್ಷ ತಮ್ಮ ತ್ಯಾಗ ಬಲಿದಾನದಿಂದ ಹೋರಾಟ ನಡೆಸಿದ್ದಾರೆ. ಮಹಿಳೆಯರು ಬಲಿದಾನ ಜೊಹರ್‌ಗೆ ಒಳಗಾಗಿದ್ದಾರೆ. ನಂತರ ಶಿವಾಜಿ ಪಟ್ಟಕ್ಕೇರಿದ ನಂತರ 152 ಯುದ್ಧ ಮಾಡುತ್ತಾನೆ. ಎಂದಿಗೂ ಸೋಲು ಕಾಣಲಿಲ್ಲ. ಹಿಂದೂಗಳು ತಮ್ಮತನವನ್ನು ಉಳಿಸಿಕೊಂಡಿದ್ದೇವೆ. ಶಿವಾಜಿ ಹಿಂದವೀ ಸ್ವರಾಜ್ಯ ಕಟ್ಟಿ ದೇಶ ಕಾಪಾಡಿದ್ದು ಸಾಹಸವಲ್ಲದೆ ಮತ್ತೇನು’ ಎಂದು ಪ್ರಶ್ನಿಸಿದರು.

ADVERTISEMENT

‘ಬಾಜಿ ಪ್ರಭು ದೇಶಪಾಂಡೆ ಎಂಬ ದೇಶಭಕ್ತನನ್ನು ನಾವು ನೆನೆಯಬೇಕು. ಆರ್.ಎಸ್.ಎಸ್. ಹಿಂದು ಧರ್ಮದ ರಕ್ಷಣೆಗೆ ನಿಂತ ಸಂಸ್ಥೆ. ನಾನು ಎಂಬುದನ್ನು ಕಡಿಮೆ ಮಾಡಿಕೊಂಡು, ನಾವು ಎಂಬುದನ್ನು ಸ್ಥಾಪಿಸಿದ ಸಂಸ್ಥೆ ಇದಾಗಿದೆ. ಸಾಧು ಸಂತರು, ಋಷಿ ಮುನಿಗಳು ಹಿಂದು ಧರ್ಮವನ್ನು ರಕ್ಷಿಸಿದರು. ಭಾರತ ಇಂದು ವಿಶ್ವ ಗುರು ಆಗುತ್ತಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ವಿಚಲಿತರಾದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಇಂತಹ ಹಿಂದೂ ಸಂಗಮದಿಂದ ಸಾಧ್ಯವಾಗುತ್ತಿದೆ. ವೀರ, ಶೂರರ ಭಾರತ ನಮ್ಮದು. ಸಂತರು, ರಾಜನೀತಿಯ ಬಲದಿಂದ ಸದೃಢ ಸಮಾಜ ನಿರ್ಮಾಣವಾಗಿತ್ತು. ದೇಶ, ಧರ್ಮ, ಭಾಷೆಗಳಿಗಾಗಿ ಮಾತನಾಡಿದರೆ ಅದು ಅಪರಾಧ ಎಂದೆನಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆಮಿಷಗಳಿಗಾಗಿ ಇಂದು ಮತಾಂತರ ನಡೆಯುತ್ತಿದೆ’ ಎಂದು ಸಾನ್ನಿಧ್ಯ ವಹಿಸಿದದ ಬೃಹನ್ಮಠದ ಸ್ವಾಮೀಜಿ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಿವೃತ್ತ ಪ್ರಾಂಶುಪಾಲ ಕೆ.ಎಂ.ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ಕೆ.ಆರ್.ಸದಾಶಿವ ಇದ್ದರು.ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕ್ರೀಡಾಂಗಣದಲ್ಲಿ ಜನ ಕಿಕ್ಕಿರಿದು ತುಂಬಿದ್ದರು.

ಕೋಣಂದೂರಿನಲ್ಲಿ ನಡೆದ ಹಿಂದೂ ಸಂಗಮದ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಕೋಣಂದೂರಿನ ಹಿಂದು ಸಂಗಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಪಾಲ್ಗೊಂಡಿದ್ದರು

ಪಟಾಕಿಯಿಂದ ಬಂಟಿಂಗ್‌ಗೆ ಬೆಂಕಿ

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಿಂದ ಆರಂಭವಾದ ಶೋಭಾಯಾತ್ರೆ ಮುಖ್ಯ ರಸ್ತೆಯ ಮೂಲಕ ರಾಷ್ಟ್ರೀಯ ಪ್ರೌಢಶಾಲೆಯ ಕ್ರೀಡಾಂಗಣದವರೆಗೆ ನಡೆಯಿತು. ಶೋಭಾಯಾತ್ರೆ ಸಿ.ಕೆ.ವೃತ್ತ ತಲುಪುತ್ತಿದ್ದಂತೆ ಸಂಭ್ರಮಿಸಿದ ಸಮಾವೇಶದಲ್ಲಿ ಪಾಲ್ಗೊಂಡವರು ಪಟಾಕಿ ಸಿಡಿಸಿ ಸಂಭ್ರಮಿಸುವ ವೇಳೆ ವೃತ್ತದಲ್ಲಿ ಕಟ್ಟಿದ ಬಂಟಿಂಗ್ ಹಾಗೂ ಪ್ಲೆಕ್ಸ್‌ಗಳಿಗೆ ಬೆಂಕಿ ತಗುಲಿತ್ತು. ಆದರೆ ಯಾವುದೇ ಅನಾಹುತ ಸಂಭವಿಸಲಿಲ್ಲ. ಶೋಭಾಯಾತ್ರೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮುಖಂಡ ನವೀನ್ ಹೆದ್ದೂರು ಉದ್ಯಮಿ ಕೆ.ಆರ್.ಪ್ರಕಾಶ್ ಪಾಲ್ಗೊಂಡಿದ್ದರು. ಡೊಳ್ಳು ಕುಣಿತ ಅಂಟಿಗೆ ಪಿಂಟಿಗೆ ಭಜನಾ ತಂಡಗಳ ಭಜನೆ ಸಾಗಿ ಶೋಭಾಯಾತ್ರೆಗೆ ಮೆರುಗು ಹೆಚ್ಚಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.