
ಹೊಸನಗರ: ತಾಲ್ಲೂಕು ಆರ್ಯ ಈಡಿಗರ ಸಂಘದಲ್ಲಿ ದುರಾಡಳಿತ ಅಕ್ರಮ ನಡೆದಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರು ಸಂಘದ ಎದುರು ಕೈಗೊಂಡಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ.
ನಿಟ್ಟೂರು ನಾರಾಯಣ ಗುರುಮಠದ ಪೀಠಾಧ್ಯಕ್ಷ ರೇಣುಕಾನಂದ ಸ್ವಾಮೀಜಿ ನಡೆಸಿದ ಅವರು ಗುರುವಾರ ಮಧ್ಯಸ್ಥಿಕೆ ನಡೆಸಿದರು. ಕೆಲ ಷರತ್ತುಗಳ ಮೇರೆಗೆ ಉಪವಾಸ ಅಂತ್ಯಗೊಳಿಸಿದರು.
‘ಆರ್ಯ ಈಡಿಗರ ಸಂಘದ ತಾಲ್ಲೂಕು ಘಟಕದ ಆಡಳಿತ ಮಂಡಳಿಯಲ್ಲಿ ಅಕ್ರಮ ನಡೆದಿದೆ. ಸಂಘದ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಮಾಡಲಾಗಿದೆ. ವಾರ್ಷಿಕ ಸಭೆ ಕರೆದಿಲ್ಲ. ಸದಸ್ಯರ ನಕಲಿ ಸಹಿ ಮಾಡಲಾಗಿದೆ. ಸಂಘದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ’ ಎಂದು ಸ್ವಾಮಿರಾವ್ ಆರೋಪಿಸಿದ್ದರು.
ಸಂಘದ ಅಧ್ಯಕ್ಷ, ಉಪಾಧ್ಯಕ್ಷರು ರಾಜೀನಾಮೆ ಕೊಡಬೇಕು. ಹೊಸ ಆಡಳಿತ ಮಂಡಳಿ ರಚನೆ ಆಗಬೇಕು ಎಂದು ಆಗ್ರಹಿಸಿ ಪಟ್ಟಣದ ಆರ್ಯ ಈಡಿಗರ ಸಂಘದ ಆವರಣದಲ್ಲಿ ಬುಧವಾರ ಅಮರಣಾಂತ ಉಪವಾಸ ಸತ್ಯಾಗ್ರಹ ಧರಣಿ ಕುಳಿತಿದ್ದರು.
ಸಮುದಾಯದ ಹಿರಿಯರು, ಮುಖಂಡರು ಸ್ಥಳಕ್ಕೆ ಆಗಮಿಸಿ ಧರಣಿ ಕೈಬಿಡುವಂತೆ ಮನವಿ ಮಾಡಿದ್ದರೂ ಅವರು ತಮ್ಮ ಪಟ್ಟು ಸಡಿಲಿಸಿರಲಿಲ್ಲ. ಬುಧವಾರ ರಾತ್ರಿವರೆಗೂ ನಡೆದ ಮಾತುಕತೆ ವಿಫಲವಾಗಿತ್ತು.
ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹಾಲಪ್ಪ ಹರತಾಳು, ಕಿಮ್ಮನೆ ರತ್ನಾಕರ್, ಜೆಡಿಎಸ್ ಮುಖಂಡ ಚಾಬುಸಾಬ್, ಸಮಾಜವಾದಿ ಮುಖಂಡ ಕಲ್ಲೂರು ಮೇಘರಾಜ್, ಉಮೇಶ್ ಕಂಚುಗಾರ್, ದೀವರ ಯುವ ವೇದಿಕೆ ಸದಸ್ಯರು, ದೀವರ ಹಿತರಕ್ಷಣಾ ವೇದಿಕೆ ಸದಸ್ಯರು ಸೇರಿದಂತೆ ಅನೇಕರು ಉಪವಾಸ ನಿರತ ಸ್ವಾಮಿರಾವ್ ಅವರ ಮನವೊಲಿಸಲು ಯತ್ನಿಸಿದರು. ನಂತರದ ಶ್ರೀಗಳ ಮಧ್ಯಪ್ರವೇಶದ ಬಳಿಕ ಪ್ರತಿಭಟನೆ ಅಂತ್ಯಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.