ADVERTISEMENT

ಹುಣಸೋಡು ಸ್ಫೋಟ ಪ್ರಕರಣ: ಮಂದಗತಿಯ ತನಿಖೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 9:44 IST
Last Updated 19 ಮಾರ್ಚ್ 2021, 9:44 IST
ಹುಣಸೋಡು ಸ್ಫೋಟ ನಡೆದ ಸ್ಥಳ
ಹುಣಸೋಡು ಸ್ಫೋಟ ನಡೆದ ಸ್ಥಳ    

ಶಿವಮೊಗ್ಗ: ಹುಣಸೋಡು ಸ್ಫೋಟ ನಡೆದು ಎರಡು ತಿಂಗಳಾದರೂ ತನಿಖೆ ಮಂದಗತಿಯಲ್ಲೇ ಸಾಗಿದೆ. ವಿಳಂಬವಾದಂತೆ ತನಿಖೆ ದಿಕ್ಕೂ ತಪ್ಪುತ್ತಿದೆ. ಪ್ರಕರಣವನ್ನು ಸಿಬಿಐ, ಹೈಕೋರ್ಟ್ ನ್ಯಾಯಾಧೀಶರಿಗೆ ನೀಡಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಒತ್ತಾಯಿಸಿದರು.

ಕರ್ನಾಟಕದ ಜನರನ್ನು ಬೆಚ್ಚಿ ಬೀಳಿಸಿದ ಈ ಸ್ಫೋಟದಲ್ಲಿ ಆರು ಜನರು ಮೃತಪಟ್ಟಿದ್ದರು. ತನಿಖೆಯ ದಿಕ್ಕು ತಪ್ಪುತ್ತಿದೆ ಎಂದು ಆರಂಭದಲ್ಲೇ ಕಾಂಗ್ರೆಸ್‌ ಹೇಳಿತ್ತು. ಈಗ ಅದು ನಿಜವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸರಿಯಾದ ರೀತಿ ತನಿಖೆ ನಡೆಯಲು ಬಿಡುತ್ತಿಲ್ಲ. ಪ್ರಮುಖ ಆರೋಪಿಗಳನ್ನು ಪೊಲೀಸರು ಕೈ ಬಿಟ್ಟಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಕ್ರಷರ್ ಮಾಲೀಕ ಸುಧಾಕರ್ ಸೇರದಿಂತೆ ಜಮೀನಿನ ಮಾಲೀಕರು, ತಾಂತ್ರಿಕವಾಗಿ ಅಲ್ಲಿ ಕೆಲಸ ಮಾಡುತ್ತಿದ್ದವರನ್ನು ಆರೋಪಿಗಳೆಂದು ನಿರ್ಧರಿಸಲಾಗಿದೆ. ಇಡೀ ಘಟನೆಯ ಹಿಂದಿರುವ ಕಿಂಗ್‌ಪಿನ್‌ಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಬಂಧಿಸಿದ ಪ್ರಮುಖ ಆರೋಪಿಗಳನ್ನು ವಿಚಾರಣೆ ನಡೆಸಿ, ಬಿಡುಗಡೆ ಮಾಡಿದ್ದಾರೆ. ಅವರಿಗೆ ಸರ್ಕಾರವೇ ರಕ್ಷಣೆ ಕೊಡುತ್ತಿದೆ ಎಂದು ಆರೋಪಿಸಿದರು.

ADVERTISEMENT

ಸದನದಲ್ಲೂ ಕಾಂಗ್ರೆಸ್‌ ಮುಖಂಡರು ಸೂಕ್ತ ತನಿಖೆಗೆ ಆಗ್ರಹಿಸಿದ್ದರು. ಆದರೂ, ಸರ್ಕಾರ ಕಿವಿಗೊಡಲಿಲ್ಲ. ಸ್ಫೋಟಕಗಳ ಮೂಲ ಪತ್ತೆಯಾದರೂ ಇಲ್ಲಿಗೆ ತರಿಸಿಕೊಂಡ ಆರೋಪಿಗಳನ್ನು ಬಂಧಿಸಿಲ್ಲ. ಯಾವ, ಯಾವ ಕಲ್ಲು ಕ್ವಾರಿಗಳನ್ನು ಅವು ತಲುಪಬೇಕಿತ್ತು. ಜಿಲ್ಲೆಗೆ ಅಧಿಕ ಪ್ರಮಾಣದಲ್ಲಿ ಸ್ಫೋಟಕ ತರಿಸಿಕೊಳ್ಳುವ ಪ್ರಮುಖರು ಯಾರು ಎನ್ನುವ ಕುರಿತು ಸರಿಯಾದ ಮಾಹಿತಿ ಸಂಗ್ರಹಿಸಿಲ್ಲ. ಬಿಜೆಪಿ ನಾಯಕರ ಅಭಯವಿಲ್ಲದೇ ಇದು ಸಾಧ್ಯವೂ ಇಲ್ಲ. ಹಾಗಾಗಿ, ತನಿಖೆಯನ್ನು ಉನ್ನತ ಸಂಸ್ಥೆಗಳಿಗೆ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಬಿ.ಎ.ರಮೇಶ್ ಹೆಗ್ಡೆ, ಆರ್.ಸಿ.ನಾಯಕ್, ಮಂಜುಳಾ ಶಿವಣ್ಣ, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮುಖಂಡರಾದ ಕೆ.ರಂಗನಾಥ್, ರಂಗೇಗೌಡ, ರಘು, ಚಂದ್ರು, ವೆಂಕಟೇಶ್, ಆರ್.ಪ್ರಸನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.