ADVERTISEMENT

ಮೀಸಲಾತಿ ನೀಡದಿದ್ದರೆ ಆಕ್ರೋಶಕ್ಕೆ ಗುರಿಯಾಗಬೇಕಾದೀತು: ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 4:24 IST
Last Updated 17 ಆಗಸ್ಟ್ 2022, 4:24 IST
ಸಾಗರ ಸಮೀಪದ ಇತಿಹಾಸ ಪ್ರಸಿದ್ಧ ಕೆಳದಿ ಗ್ರಾಮದಲ್ಲಿರುವ ರಾಣಿಚೆನ್ನಮ್ಮಾಜಿ ಪುತ್ಥಳಿಗೆ ಮಂಗಳವಾರ ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮಾಲಾರ್ಪಣೆ ಮಾಡಿದರು.
ಸಾಗರ ಸಮೀಪದ ಇತಿಹಾಸ ಪ್ರಸಿದ್ಧ ಕೆಳದಿ ಗ್ರಾಮದಲ್ಲಿರುವ ರಾಣಿಚೆನ್ನಮ್ಮಾಜಿ ಪುತ್ಥಳಿಗೆ ಮಂಗಳವಾರ ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮಾಲಾರ್ಪಣೆ ಮಾಡಿದರು.   

ಸಾಗರ: ‘ಲಿಂಗಾಯತರನ್ನು ಹಿಂದುಳಿದ ವರ್ಗ 2ಎ ಪಟ್ಟಿಗೆ ಸೇರಿಸದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವೀರಶೈವ ಲಿಂಗಾಯತರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ’ ಎಂದು ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.

ಸಮೀಪದ ಇತಿಹಾಸ ಪ್ರಸಿದ್ಧ ಕೆಳದಿ ಗ್ರಾಮದಲ್ಲಿರುವ ರಾಣಿಚೆನ್ನಮ್ಮಾಜಿ ಪುತ್ಥಳಿಗೆ ಮಂಗಳವಾರ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ‘ಮೀಸಲಾತಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದೀರ್ಘಕಾಲದಿಂದ ಹೋರಾಟ ನಡೆಯುತ್ತಿದೆ. ರಾಜ್ಯ ಸರ್ಕಾರ ಹಲವು ಬಾರಿ ಬೇಡಿಕೆ ಈಡೇರಿಸುವುದಾಗಿ ನೀಡಿರುವ ಆಶ್ವಾಸನೆ ನಿಜವಾಗಿಲ್ಲ. ಈ ಹಿನ್ನಲೆಯಲ್ಲಿ ಮುಂದಿನ ಹೋರಾಟದ ಸ್ವರೂಪ ತೀವ್ರವಾಗಿರುತ್ತದೆ’ ಎಂದರು.

‘ಪಂಚಮಸಾಲಿ-ಗೌಡ ಲಿಂಗಾಯತ, ಮಲೆಗೌಡ ದೀಕ್ಷಾ ಲಿಂಗಾಯತ ಸಮುದಾಯಕ್ಕೆ 2 ಎ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಒದಗಿಸಬೇಕು. ಕಳೆದ ಎರಡು ವರ್ಷಗಳಿಂದ ಈ ಸಂಬಂಧ ವೀರಶೈವರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

‘ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದರೆ ಲಿಂಗಾಯತರ ಮೀಸಲಾತಿ ಬೇಡಿಕೆಗೆ ಇಷ್ಟರೊಳಗೆ ಮನ್ನಣೆ ಸಿಗತ್ತಿತ್ತು ಎಂಬ ಭಾವನೆ ಸಮುದಾಯದಲ್ಲಿದೆ. ಇದನ್ನು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಮೀಸಲಾತಿ ಕಲ್ಪಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಅಖಿಲ ಭಾರತ ಮಲೆಗೌಡ ಪಂಚಮಸಾಲಿ ಒಕ್ಕೂಟದಿಂದ ಆ.16ರಿಂದ 24ವರೆಗೆ ವಿವಿಧೆಡೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಪ್ರಮುಖರಾದ ಜಿ.ಬಿ. ವಸಂತಕುಮಾರ್, ಭದ್ರೇಶ್ ಬಾಳೆಗೋಡು, ಅರುಣ್ ಪಾಟೀಲ್, ಗುರುಬಸವನ ಗೌಡ, ರುದ್ರೇಗೌಡ, ಡಾ. ಮಾಲತೇಶ್, ಪ್ರೊ. ವಿಜಯಕುಮಾರ್, ಚಂದ್ರಕಾಂತ್ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.