ADVERTISEMENT

ತೀರ್ಥಹಳ್ಳಿ: ಜನಪ್ರತಿನಿಧಿಗಳ ಮೇಲೆ ಹಲ್ಲೆಗೆ ಆರಗ ಪ್ರಚೋದನೆ

ಪಾದಯಾತ್ರೆ, ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 6:46 IST
Last Updated 22 ಫೆಬ್ರುವರಿ 2023, 6:46 IST
ತೀರ್ಥಹಳ್ಳಿ ತಾಲ್ಲೂಕು ಕಚೇರಿ ಮುಂಭಾಗ ಕಾಂಗ್ರೆಸ್‌ ಪಕ್ಷದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ತೀರ್ಥಹಳ್ಳಿ ತಾಲ್ಲೂಕು ಕಚೇರಿ ಮುಂಭಾಗ ಕಾಂಗ್ರೆಸ್‌ ಪಕ್ಷದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.   

ತೀರ್ಥಹಳ್ಳಿ: ‘ವಿರೋಧಪಕ್ಷದ ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಲು ಗೃಹಸಚಿವ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಆಡಳಿತದ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಬಳಸಿಕೊಂಡು ಅಭಿವೃದ್ಧಿ ಕೆಲಸಕ್ಕೆ ತೊಂದರೆ ನೀಡುತ್ತಿದ್ದಾರೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿದರು.

ಮಂಗಳವಾರ ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿಯಿಂದ ತಾಲ್ಲೂಕು ಕಚೇರಿವರೆಗೆ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡ ಪಾದಯಾತ್ರೆ, ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಪಿಡಿಒ ಪರಿಶಿಷ್ಟ ಮಹಿಳೆ ಎಂಬ ಕಾರಣಕ್ಕೆ ಆಕೆಯಿಂದ ಜನಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿಸುತ್ತಿದ್ದಾರೆ. ಕಾನೂನಿನ ದುರ್ಬಳಕೆ ಮಾಡಿಕೊಂಡು ಗ್ರಾಮ ಪಂಚಾಯಿತಿ ಆಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಹಿರಿಯ ಅಧಿಕಾರಿಗಳಿಂದ ವರ್ಗಾವಣೆಯಾದ ಕೆಲವೇ ಗಂಟೆಗಳಲ್ಲಿ ಪುನಃ ಸ್ವ-ಸ್ಥಾನಕ್ಕೆ ನಿಯೋಜಿಸುವ ಉದ್ದೇಶ ಏನಿತ್ತು. ಗೃಹ ಸಚಿವರ ಇಂತಹ ಚಟುವಟಿಕೆಯಿಂದ ಮೇಲಿನಕುರುವಳ್ಳಿಯ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಕಾರ್ಮಿಕರು ವಲಸೆ ಹೋಗಿದ್ದಾರೆ’ ಎಂದು ದೂರಿದರು.

ADVERTISEMENT

ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುಡುಬ ರಾಘವೇಂದ್ರ, ರಾಷ್ಟ್ರೀಯ ಯುವ ಕಾಂಗ್ರೆಸ್‌ ವಕ್ತಾರ ಆದರ್ಶ ಹುಂಚದಕಟ್ಟೆ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ, ಹೊರಬೈಲು ಪ್ರಭಾಕರ್, ಗ್ರಾ.ಪಂ ಉಪಾಧ್ಯಕ್ಷ ರಾಘವೇಂದ್ರ, ಸದಸ್ಯರಾದ ಯು.ಡಿ.ವೆಂಕಟೇಶ್‌, ಕುರುವಳ್ಳಿ ನಾಗರಾಜ್, ಅನಿತಾ, ಆನಂದ, ಮುಖಂಡರಾದ ಟಿ.ಎಲ್.ಸುಂದರೇಶ್‌, ಬಾಳೇಹಳ್ಳಿ ಪ್ರಭಾಕರ್, ಅಮ್ರಪಾಲಿ ಸುರೇಶ್‌, ಹರೀಶ್‌ ಮೇಲಿನಕೊಪ್ಪ, ರವಿ, ಗೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.