ADVERTISEMENT

ಇಂದಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲೆ ಆರಂಭ

ಕೊನೆಗೂ ಕೂಡಿ ಬಂತು ಮುಹೂರ್ತ

ರವಿ ನಾಗರಕೊಡಿಗೆ
Published 20 ಡಿಸೆಂಬರ್ 2025, 4:21 IST
Last Updated 20 ಡಿಸೆಂಬರ್ 2025, 4:21 IST
ಹೊಸನಗರ ತಾಲ್ಲೂಕು ಗೇರುಪುರ ಇಂದಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲಾ ಸಮುಚ್ಚಯ
ಹೊಸನಗರ ತಾಲ್ಲೂಕು ಗೇರುಪುರ ಇಂದಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲಾ ಸಮುಚ್ಚಯ   

ಹೊಸನಗರ: ಇಲ್ಲಿನ ಇಂದಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲೆಗೆ ಹಿಡಿದಿದ್ದ ಗ್ರಹಣಕ್ಕೆ ಮುಕ್ತಿ ಕಾಣುವ ಸಮಯ ಒದಗಿ ಬಂದಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಇಂದಿರಾಗಾಂಧಿ ವಸತಿ ಶಾಲೆಯ ನೂತನ ಸುಸಜ್ಜಿತ ಶಾಲಾ ಸಮುಚ್ಚಯ ಕೊಠಡಿಗಳ ಶುಭಾರಂಭಕ್ಕೆ ಮುಹೂರ್ತ ಕೂಡಿ ಬಂದಿದೆ.  

ಹೊಸನಗರ ತಾಲ್ಲೂಕಿಗೆ ಬಹುವರ್ಷದ ಬೇಡಿಕೆ ಫಲವಾಗಿ 8 ವರ್ಷದ ಹಿಂದೆ ಇಂದಿರಾ ಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲೆ ಮಂಜೂರು ಆಗಿತ್ತು. ತಾಲ್ಲೂಕಿನಲ್ಲಿ ಶಾಲೆ ನಿರ್ಮಾಣಕ್ಕೆ ಅಗತ್ಯವಾದ ಜಾಗ ಲಭ್ಯವಾಗದ ಕಾರಣಕ್ಕೆ ಮಂಜೂರಾದ ಶಾಲೆಯು ಶಿವಮೊಗ್ಗ ಹೊರವಲಯದಲ್ಲಿ ನಡೆಯಿತು. 

ಇತ್ತೀಚಿನ ಕೆಲ ವರ್ಷಗಳಿಂದ ಹೊಸನಗರ ಪಟ್ಟಣದ ಮೆಸ್ಕಾಂ ಆಡಳಿತ ಕಚೇರಿ ಎದುರಿನ ಖಾಸಗಿ ಬಾಡಿಗೆ ಕಟ್ಟಡದಲ್ಲಿ ವಸತಿ ಶಾಲೆ ನಡೆಯುತ್ತಿತ್ತು. 

ADVERTISEMENT

ಇದರ ಮಧ್ಯೆ ತಾಲ್ಲೂಕಿನ ಗೇರುಪುರದಲ್ಲಿ ಜಾಗ ಲಭ್ಯವಾಗಿದ್ದು, ಅಂದಿನಿಂದ ಇಂದಿನವರೆಗೂ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಲೇ ಇತ್ತು. ಇದೀಗ ಶಾಲಾ ಸಮುಚ್ಚಯ ಕೊಠಡಿಗಳ ಬಹುಪಾಲು ನಿರ್ಮಾಣ ಕಾರ್ಯ ಮುಗಿದಿದೆ. ಶೇ 90ಕ್ಕಿಂತ ಹೆಚ್ಚು ಕಾಮಗಾರಿ ಮುಗಿದಿದ್ದು,
ಶಾಲೆ ಆರಂಭಕ್ಕೆ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ತಾಲ್ಲೂಕು ಆಡಳಿತದಿಂದ ಹಸಿರು ನಿಶಾನೆ ದೊರಕಿದೆ. ಶಾಲೆ ಆರಂಭ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ. ಬುಧವಾರ ಗೇರುಪುರ ಶಾಲಾ ಸಮುಚ್ಚಯದಲ್ಲಿ ಹೋಮ, ಪೂಜೆ ನಡೆಸಿ ಸಾಂಕೇತಿಕ ಚಾಲನೆ ನೀಡಲಾಗಿದೆ. 

‘ಮೆಸ್ಕಾಂ ಎದುರಿನ ಕಟ್ಟಡದಿಂದ ಗೇರುಪುರ ಶಾಲಾ ಸಮುಚ್ಚಯಕ್ಕೆ ಶಾಲೆ ಪರಿಕರಗಳ ಸಾಗಾಟ ನಡೆಯುತ್ತಿದೆ. ಶನಿವಾರದಿಂದ ತರಗತಿ  ಆರಂಭವಾಗಲಿವೆ’ ಎಂದು ವಸತಿ ಶಾಲೆ ಪ್ರಾಂಶುಪಾಲ ಚಂದ್ರಶೇಖರ್ ತಿಳಿಸಿದರು. 

ತಾಲ್ಲೂಕಿನ ಗೇರುಪುರದಲ್ಲಿನ ಇಂದಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಟೆಂಡರ್ 2018ರಲ್ಲಿ ನಡೆದಿತ್ತು. 2020 ರಲ್ಲಿ ಕಾಮಗಾರಿ ಆರಂಭವಾಗಿತ್ತು. ಆರಂಭದ ₹17.50 ಕೋಟಿ ವೆಚ್ಚವು ನಂತರ ₹18.30 ಕೋಟಿಗೆ ಏರಿದೆ. ಕಟ್ಟಡದ ಸುರಕ್ಷತೆ, ಸುಗಮ ವ್ಯಾಸಂಗಕ್ಕಾಗಿ ಶಾಲಾ ಕಟ್ಟಡದ ಮೇಲ್ಭಾಗದಲ್ಲಿ ಶೀಟ್ ಹೊದಿಕೆ ಹಾಗೂ ಇನ್ನಿತರ ಕಾಮಗಾರಿಗೆ ಹೆಚ್ಚುವರಿಯಾಗಿ ₹1.5 ಕೋಟಿ ಅನುದಾನ ಪಡೆಯಲಾಗಿದೆ. 

ಹಿಂದುಳಿದ ಶಾಲೆಗೆ ಜಾಗ 

ಇಂದಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲೆ ಜತೆಗೆ ಮಂಜೂರಾದ ಇಂದಿರಾ ಗಾಂಧಿ ಹಿಂದುಳಿದ ವರ್ಗಗಳ ವಸತಿ ಶಾಲೆಗೆ ಸದ್ಯ ಹೊಸ ಜಾಗ ಗುರುತಿಸುವಿಕೆ ಕಾರ್ಯ ನಡೆಯುತ್ತಿದೆ. ಪಟ್ಟಣದ ಹೊರವಲಯ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳೂರು ಗ್ರಾಮದಲ್ಲಿ 10. 29 ಎಕರೆ ಜಾಗ ಗುರುತಿಸಲಾಗಿದೆ. ₹22 ಕೋಟಿ ವೆಚ್ಚದ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ವಸತಿ ಶಾಲೆಯೂ ಶಿವಮೊಗ್ಗದ ಗಾಡಿಕೊಪ್ಪದ ಬಾಡಿಗೆ ಕಟ್ಟಡದಲ್ಲಿ‌ ನಡೆಯುತ್ತಿದೆ. 

ಶಾಲಾ ಸಮುಚ್ಚಯ ಆವರಣದಲ್ಲಿ ಶಾಲಾರಂಭ ಪ್ರಯುಕ್ತ ದೇವತಾ ಕಾರ್ಯ ನಡೆದವು
ಗೇರುಪುರ ವಸತಿ ಶಾಲೆಯ ರಂಗಮಂದಿರ ಶೀಟ್ ಹೊದಿಕೆ ಕಾಮಗಾರಿ ಆಗಬೇಕಿದೆ. ಬಳಿಕ ವಸತಿ ಶಾಲೆಯ ಅಧಿಕೃತ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗುವುದು.
– ಮಹೇಶಪ್ಪ, ಉಪನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.