ADVERTISEMENT

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ತರಬೇತಿ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 12:10 IST
Last Updated 17 ಸೆಪ್ಟೆಂಬರ್ 2020, 12:10 IST
ಎಸ್ . ಲಕ್ಷ್ಮಣ್ ಸಾಗರ್
ಎಸ್ . ಲಕ್ಷ್ಮಣ್ ಸಾಗರ್   

ಸಾಗರ: ರಾಜ್ಯ ಸರ್ಕಾರ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ವಿವಿಧ ಇಲಾಖೆ, ನಿಗಮಗಳ ಮೂಲಕ ಸೌಲಭ್ಯಗಳನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪದ್ದತಿಯನ್ನು ಜಾರಿಗೊಳಿಸಿದೆ. ಆದರೆ ಗ್ರಾಮೀಣ ಭಾಗದ ಹಲವರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲವಾಗಿದೆ. ಈ ಸಂಬಂಧ ಸರ್ಕಾರ ಸೂಕ್ತ ತರಬೇತಿ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಎಸ್. ಲಕ್ಷ್ಮಣ್ ಸಾಗರ್ ಒತ್ತಾಯಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಯೋಜನೆಗಳ ಫಲಾನುಭವಿಗಳ ಆಯ್ಕೆ ಸಮಿತಿಗೆ ಆಯಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದರಿಂದಾಗಿ ಶಾಸಕರು ಯಾವ ಪಕ್ಷಕ್ಕೆ ಸೇರಿದ್ದಾರೋ ಆ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಯೋಜನೆಯ ಲಾಭ ದೊರಕುವಂತಾಗಿದೆ. ಹೀಗಾಗಿ ಶಾಸಕರ ಬದಲು ಆಯ್ಕೆ ಸಮಿತಿಗೆ ಉಪ ವಿಭಾಗಾಧಿಕಾರಿ ಅಥವಾ ತಹಶೀಲ್ದಾರ್‌ ಅವರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

2017-18ನೇ ಸಾಲಿನಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಸೌಲಭ್ಯ ಕೋರಿ ಅನೇಕ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು ಕೆಲವರಿಗೆ ಅದು ಮಂಜೂರಾಗಿದೆ. ಆದಾಗ್ಯೂ ಈ ಸೌಲಭ್ಯ ದೊರಕಿಸದೆ ಫಲಾನುಭವಿಗಳನ್ನು ಸತಾಯಿಸಲಾಗುತ್ತಿದೆ ಎಂದು ಅವರು ದೂರಿದರು.

ADVERTISEMENT

ಕೋವಿಡ್-19ರ ಕಾರಣಕ್ಕೆ ಹೆಚ್ಚಿನ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಹೊತ್ತಿನಲ್ಲಿ ಶಾಲೆಗಳಿಗೆ ಶುಲ್ಕವನ್ನು ಸೆ.30ರೊಳಗೆ ಪಾವತಿಸಬೇಕು ಎಂದು ರಾಜ್ಯ ಸರ್ಕಾರ ಗಡುವು ವಿಧಿಸಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಈ ಆದೇಶವನ್ನು ಸರ್ಕಾರ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ರಾಜೇಂದ್ರ ಬಂದಗದ್ದೆ, ಪಶು ಸಂಗೋಪನಾ ಇಲಾಖೆಯಿಂದ ಕೋಳಿಮರಿ ಪಡೆಯಲು ಕೂಡ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರ ಶಿಫಾರಸು ಪತ್ರವನ್ನು ತರುವಂತೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ. ಇಂತಹ ನಿಯಮವಿದ್ದರೆ ಇಲಾಖೆಯ ಸೂಚನಾ ಫಲಕದಲ್ಲಿ ಪ್ರಕಟಿಸುವುದು ಸೂಕ್ತ. ಇಲ್ಲದಿದ್ದರೆ ಅಧಿಕಾರಿಗಳು ಈ ರೀತಿ ತಾಕೀತು ಮಾಡುವ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಧರ್ಮರಾಜ್ ಬೆಳಲಮಕ್ಕಿ, ಮಹಾದೇವಪ್ಪ, ಮಂಜಪ್ಪ ತ್ಯಾಗರ್ತಿ, ರಂಗಪ್ಪ ಹೊನ್ನೆಸರ, ನಾಗಪ್ಪ ಹುರುಳಿ, ರಮೇಶ್ ಶುಂಠಿಕೊಪ್ಪ, ಗುತ್ಯಪ್ಪ ಕಾನ್ಲೆ, ವಿಜಯಕುಮಾರ್, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.