ADVERTISEMENT

ಸಮಾಜ ಪಾಳೆಗಾರಿಕೆ ಮನಸ್ಥಿತಿಯಲ್ಲಿದೆ: ನಿವೃತ್ತ ಪ್ರಾಂಶುಪಾಲ ಬಿ.ಗಣಪತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 2:56 IST
Last Updated 19 ಫೆಬ್ರುವರಿ 2026, 2:56 IST
ತೀರ್ಥಹಳ್ಳಿಯಲ್ಲಿ ಬುಧವಾರ ಕವಲೊಡೆದ ಕಣ್ಮಣಿ ಕಾದಂಬರಿಯನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ ಬಿಡುಗಡೆಗೊಳಿಸಿದರು.
ತೀರ್ಥಹಳ್ಳಿಯಲ್ಲಿ ಬುಧವಾರ ಕವಲೊಡೆದ ಕಣ್ಮಣಿ ಕಾದಂಬರಿಯನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ ಬಿಡುಗಡೆಗೊಳಿಸಿದರು.   

ತೀರ್ಥಹಳ್ಳಿ : ತಂದೆ ತಾಯಿ ಪ್ರೇಮ ವಿವಾಹ ಆಗಿದ್ದ ಸಂದರ್ಭದಲ್ಲಿಯೂ ಮಕ್ಕಳ ವಿವಾಹ ತಮ್ಮಿಚ್ಚೆಯಂತೆ ಆಗಬೇಕೆಂಬ ಹಂಬಲ ಇಟ್ಟುಕೊಂಡಿರುತ್ತಾರೆ. ಅಲ್ಲದೇ ಸಮಾಜ ಇಂದಿಗೂ ಹಲವು ಕಾರಣಗಳಲ್ಲಿ ಪಾಳೆಗಾರಿಕೆ ಮನಸ್ಥಿತಿಯ ಹಂಗಿನಲ್ಲಿ ಬದುಕುತ್ತಿದೆ ಎಂದು ನಿವೃತ್ತ ಪ್ರಾಂಶುಪಾಲ ಬಿ.ಗಣಪತಿ ಅಭಿಪ್ರಾಯಿಸಿದರು.

ಬುಧವಾರ ಮೇಲಿನಕುರುವಳ್ಳಿಯಲ್ಲಿ ರವಿ ಸಿ ಅವರ “ಕವಲೊಡೆದ ಕಣ್ಮಣಿ” ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಅವರು ಕೃತಿಯ ಕುರಿತು ಮಾತನಾಡಿ, ಹೆಚ್ಚು ಓದಿರದ ಲೇಖಕ ಜೀವನಾನುಭವದ ಆಧಾರದ ಮೇಲೆ ಕೃತಿ ರಚನೆ ಮಾಡಿರುವುದರಿಂದ ಪ್ರೇಮ ಕಥೆಯಾದರು ನಿರೂಪಣೆಯಲ್ಲಿ ತಾಜಾತನ ಮತ್ತು ಲವಲವಿಕೆ ಇದೆ ಎಂದು ಹೇಳಿದರು.

ಇಲ್ಲಿ ಪ್ರತಿಷ್ಠೆ, ಅಂತಸ್ತು, ಯೋಗ್ಯತೆ, ಆಕಾಂಕ್ಷೆ, ಋಣಗಳ ಪ್ರಸ್ತಾಪದ ಮೂಲಕ ಎಲ್ಲಾ ಚೌಕಟ್ಟುಗಳನ್ನು ಮೀರಿ ಕಟ್ಟಿಕೊಡಲಾಗಿದೆ. ಕಾದಂಬರಿಯ ಹೀರೋ ನೀಲಮೇಘ ಶಾಮನಂತೆ ಕಪ್ಪು ಬಣ್ಣದವನಾಗಿದ್ದರೂ ಆತನನ್ನು ಪ್ರೀತಿಸುವ ಹುಡುಗಿ ನಿನ್ನ ಬಣ್ಣವನ್ನು ನೋಡಿಲ್ಲ ಮನಸ್ಸನ್ನು ಪ್ರೀತಿಸುತ್ತೇನೆ ಎನ್ನುವ ಮೂಲಕ ಪ್ರೀತಿಯ ಆಳವನ್ನು ಪರಿಚಯಿಸಲಾಗಿದೆ ಎಂದರು.

ADVERTISEMENT

ಜಾತಿ, ಅಂತಸ್ತು, ಕುಟುಂಬದ ವಿರೋಧಗಳನ್ನು ಎದುರಿಸಲು ಪ್ರಯತ್ನಿಸುವ ಇಬ್ಬರು ಬದುಕು, ಸಂಸಾರ ನಮ್ಮಿಬ್ಬರ ಸುತ್ತ ನಡೆಯಬೇಕು. ನಿಮ್ಮ ಆಲೋಚನೆಗಳ ನಡುವೆ ಅಲ್ಲ ಎಂಬ ದಿಟ್ಟ ನಿಲುವನ್ನು ಪ್ರತಿಪಾದಿಸುತ್ತಾರೆ. ಇಂತಹ ಪ್ರೇಮದ ನಡುವಿನ ತೊಳಲಾಟ ಕೃತಿಯಲ್ಲಿ ಅವ್ಯಕ್ತವಾಗಿದೆ ಎಂದು ಹೇಳಿದರು.

“ಕೃತಿಯಲ್ಲಿ ಇಬ್ಬರು ಪ್ರೇಮಿಗಳ ದುರಂತ ಅಂತ್ಯ ಮನಸ್ಸನ್ನು ಕಾಡುವಂತಿದೆ. ಬಂಡೆ ಕಾರ್ಮಿಕರಾಗಿರುವ ಅವರು ತನ್ನದಲ್ಲದ ಕೃಷಿ ಬದುಕಿನ ಸುತ್ತ ನಡೆಯುವ ಚಟುವಟಿಕೆಯನ್ನು ಹೆಚ್ಚು ಗಾಢವಾಗಿ ಚಿತ್ರಿಸಿದ್ದಾರೆ. ಲೇಖಕರ ಮಾತೃ ಭಾಷೆ ತೆಲುಗು ಆಗಿದ್ದು ಕನ್ನಡವನ್ನು ಅತ್ಯಾಪ್ತ ಭಾಷೆಯಾಗಿ ಬಳಕೆ ಮಾಡಿರುವುದು ವಿಶೇಷ” ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಕಣ್ಣನ್‌ ಸಿ. ಅಧ್ಯಕ್ಷತೆ ವಹಿಸಿದ್ದರು. ನೆಂಪೆ ದೇವರಾಜ್‌ ಪ್ರಸ್ತಾವಿಸಿದರು. ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್‌, ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್‌ ಶೆಟ್ಟಿ, ಲೇಖಕಿ ಪದ್ಮಜಾ ಜೋಯ್ಸ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಶಿಕ್ಷಕ ಎಚ್.ಎಂ.ರವೀಶ್‌, ಕೃತಿಕಾರ ರವಿ.ಸಿ. ಇದ್ದರು.

ನಿಶ್ಚಲ್‌ ಜಾದೂಗಾರ್‌ ಸ್ವಾಗತಿಸಿದರು. ಆನಂದ ಸಿ. ವಂದಿಸಿದರು. ಸುರೇಶ್‌ ಮಲ್ಲಿಗೆಮನೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.