ತ್ಯಾಗರ್ತಿ: ಅಂದಾಜು 150 ಕುಟುಂಬಗಳ ಸದಸ್ಯರು ಮಳೆಗಾಲದಲ್ಲಿ ಗ್ರಾಮದ ಪಕ್ಕದಲ್ಲಿರುವ ನಂದಿಹೊಳೆ ದಾಟಲಾಗದೇ ಏಳೆಂಟು ಕಿಲೋಮೀಟರ್ ಸುತ್ತುವರಿದು ಸಾಗುತ್ತ ಸಮಸ್ಯೆ ಎದುರಿಸುತ್ತಿದ್ದುದನ್ನು ಗಮನಿಸಿದ ಸ್ಥಳೀಯರೊಬ್ಬರು ಆ ಹೊಳೆಗೆ ಕಬ್ಬಿಣದ ಕಾಲ್ಸೇತುವೆ ನಿರ್ಮಿಸಿ ಅನುಕೂಲ ಕಲ್ಪಿಸಿದ್ದಾರೆ.
ಸಾಗರ ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪ್ಪಳಿ ಗ್ರಾಮದ ಎಚ್.ಆರ್. ಗುರುನಾಥ್ ಅವರೇ ತಮ್ಮೂರಿನ ಜನರ ಬವಣೆ ನೀಗಿಸಲು ನಂದಿಹೊಳೆಗೆ ಸ್ವಂತ ಖರ್ಚಿನಲ್ಲಿ ಸೇತುವೆ ನಿರ್ಮಿಸಿ ಚಿಪ್ಪಳಿ, ಬ್ಯಾಡರಕೊಪ್ಪ, ಜಂಬೂರಮನೆ, ಅಡ್ಡೇರಿ ಗ್ರಾಮಗಳ ಜನರ ಓಡಾಟಕ್ಕೆ ಸಹಕಾರಿಯಾಗಿದ್ದಾರೆ.
ಚಿಪ್ಪಳಿ ಗ್ರಾಮದಿಂದ ಬ್ಯಾಡರಕೊಪ್ಪ ಸಂಪರ್ಕಿಸುವ ಮಾರ್ಗದಲ್ಲಿ ಹೊಳೆಯ ಎರಡೂ ದಡಕ್ಕೆ ಹೊಂದಿಕೊಂಡಂತೆ ಅಂದಾಜು ₹ 50,000 ವೆಚ್ಚದಲ್ಲಿ 60 ಅಡಿ ಉದ್ದ, 3 ಅಡಿ ಅಗಲದ ಸೇತುವೆ ಅಳವಡಿಸಲಾಗಿದೆ. ಸೇತುವೆಯನ್ನು ನಿಗದಿತ ಜಾಗದಲ್ಲಿ ಇರಿಸುವ ಕಾರ್ಯದಲ್ಲಿ ಗ್ರಾಮಸ್ಥರೂ ಕೈಜೋಡಿಸಿದ್ದರು ಎಂಬುದು ವಿಶೇಷ.
ಬ್ಯಾಡರಕೊಪ್ಪ ಗ್ರಾಮದ ರೈಲ್ವೆ ಅಂಡರ್‌ಪಾಸ್ ಬಳಿಯ ರಸ್ತೆಯನ್ನು ಸಂಪರ್ಕಿಸುವುದರಿಂದ ಬ್ಯಾಡರಕೊಪ್ಪ, ಜಂಬೂರಮನೆ, ಅಡ್ಡೇರಿ ಗ್ರಾಮದವರಿಗೆ ಅನುಕೂಲವಾಗಿದೆ. ಸೇತುವೆ ನಿರ್ಮಾಣಕ್ಕೂ ಮುನ್ನ, ಚೆನ್ನಶೆಟ್ಟಿಕೊಪ್ಪ, ಹೊಸೂರು, ಐಗಿನಬೈಲು ಗ್ರಾಮಗಳ ಮೂಲಕ ಸುಮಾರು 7 ಕಿ.ಮೀ. ಸುತ್ತು ಬಳಸಿ ಚಿಪ್ಪಳಿ ಸಂಪರ್ಕಿಸಬೇಕಾಗಿತ್ತು.
2010ರಲ್ಲಿ ಈ ಹೊಳೆಗೆ ಕಿರು ಸೇತುವೆ ನಿರ್ಮಿಸಲಾಗಿತ್ತು. ಆದರೆ, ಸೇತುವೆಯ ಎರಡೂ ಕಡೆ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಮಾಡದ ಕಾರಣ ಹೊಳೆ ತುಂಬಿ, ನೀರಿನ ರಭಸಕ್ಕೆ ಕೊರಕಲು ಉಂಟಾಗಿ ಸೇತುವೆಯು ಬಳಕೆಗೆ ಬಾರದಂತಾಗಿತ್ತು. ಕಳಪೆ ಕಾಮಗಾರಿಯ ಕಾರಣ ಮಧ್ಯದ ಕಂಬ ಶಿಥಿಲಗೊಂಡು ಏಳೆಂಟು ವರ್ಷ ಸೇತುವೆ ಬಳಸದಂತಾಗಿತ್ತು. ಊರಿನ ಹೊಳೆಗೆ ಶಾಶ್ವತ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದೆ ಸಂಕಷ್ಟಕ್ಕೀಡಾಗಿದ್ದರು.
ಜನರ ಸಮಸ್ಯೆ ಅರಿತು ಸರ್ಕಾರದ ಅನುದಾನಕ್ಕೆ ಕಾಯದೇ ಸ್ವಂತ ಹಣ ವ್ಯಯಿಸಿ ಈ ಸೇತುವೆ ನಿರ್ಮಿಸಿರುವುದಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
ನಮ್ಮೂರಿನ ರೈತಾಪಿ ಜನ ಹೊಳೆ ಆಚೆಗಿನ ಜಮೀನು ಮತ್ತು ಸಂಬಂಧಿಕರನ್ನು ಸಂಪರ್ಕಿಸಲು ಏಳೆಂಟು ಕಿ.ಮೀ ಸುತ್ತಿ ಓಡಾಡುವುದನ್ನು ಗಮನಿಸಿದ್ದೆ. ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಸೇತುವೆ ನಿರ್ಮಿಸಿದೆ.ಎಚ್.ಆರ್.ಗುರುನಾಥ್
ಕಿರುಸೇತುವೆ ಶಿಥಿಲಗೊಂಡಿದ್ದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಸುತ್ತು ಬಳಸಿ ಓಡಾಡುತ್ತಿದ್ದೆವು. ಈಗ ನಮ್ಮೂರಿನವರೇ ಕಬ್ಬಿಣದ ಸೇತುವೆ ನಿರ್ಮಿಸಿರುವುದು ಸಂತೋಷ. ಸರ್ಕಾರ ಶಾಶ್ವತ ಸೇತುವೆ ನಿರ್ಮಿಸಬೇಕು .ವೇರೇಂದ್ರ, ಚಿಪ್ಪಳಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.