ADVERTISEMENT

ಶಿವಮೊಗ್ಗ | ವೈಜ್ಞಾನಿಕ ಆವಿಷ್ಕಾರದಿಂದ ಜೀವನ ವಿಧಾನ ಬದಲಾವಣೆ: ಕಿರಣ್ ಕುಮಾರ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:57 IST
Last Updated 3 ಮಾರ್ಚ್ 2026, 2:57 IST
ಶಿವಮೊಗ್ಗದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ‘ನಾನು ವಿಜ್ಞಾನಿ’ ತರಬೇತಿ ಕಾರ‍್ಯಾಗಾರವನ್ನು ಇಸ್ರೋ ಮಾಜಿ ಅಧ್ಯಕ್ಷ  ಎ.ಎಸ್. ಕಿರಣ್‌ಕುಮಾರ್ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಏರ್ಪಡಿಸಿದ್ದ ‘ನಾನು ವಿಜ್ಞಾನಿ’ ತರಬೇತಿ ಕಾರ‍್ಯಾಗಾರವನ್ನು ಇಸ್ರೋ ಮಾಜಿ ಅಧ್ಯಕ್ಷ  ಎ.ಎಸ್. ಕಿರಣ್‌ಕುಮಾರ್ ಉದ್ಘಾಟಿಸಿದರು   

ಶಿವಮೊಗ್ಗ: ‘ನೂತನ ವೈಜ್ಞಾನಿಕ ಆವಿಷ್ಕಾರಗಳಿಂದ ಜನರಿಗೆ ಆಧುನಿಕ ಸೌಲಭ್ಯಗಳ ಕಲ್ಪಿಸಿಕೊಡುವ ಮೂಲಕ ಅವರ ಜೀವನ ವಿಧಾನದಲ್ಲಿ ಗಣನೀಯ ಬದಲಾವಣೆ ಸಾಧ್ಯವಾಗಲಿದೆ’ ಎಂದು ಇಸ್ರೋ ಮಾಜಿ ಅಧ್ಯಕ್ಷ  ಎ.ಎಸ್. ಕಿರಣ್ ಕುಮಾರ್ ಅಭಿಪ್ರಾಯಪಟ್ಟರು.

ನಗರದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ಹಾಗೂ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮಲ್ಲಿಗೇನಹಳ್ಳಿಯ ಸನ್ನಿಧಿ ಇನ್‌ಸ್ಟಿಟ್ಯೂಟ್‌ನಲ್ಲಿ ಏರ್ಪಡಿಸಿದ್ದ ‘ನಾನು ವಿಜ್ಞಾನಿ’ ತರಬೇತಿ ಕಾರ‍್ಯಾಗಾರದಲ್ಲಿ ಅವರು ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ಕೊಡುಗೆ ಅತ್ಯಂತ ಮಹತ್ವದ್ದು. ಇಸ್ರೋ ಇಂದು ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿದೆ. ಚಂದ್ರಯಾನ–1ರ ಮೂಲಕ ಚಂದ್ರನ ಮೇಲೆ ನೀರಿನ ಅಣುಗಳ ಪತ್ತೆ ಹಚ್ಚಿದೆ. ಮಾತ್ರವಲ್ಲ ಮಂಗಳಯಾನದ ಮೊದಲ ಯತ್ನದಲ್ಲೇ ಯಶಸ್ಸು ಕಂಡಿದೆ. ಇದು ದೇಶದ ಹೆಗ್ಗಳಿಕೆ ಆಗಿದೆ ಎಂದರು.

ADVERTISEMENT

ರಕ್ಷಣಾ ಕ್ಷೇತ್ರ ಹೊರತುಪಡಿಸಿ, ಇತರೆ ಅಭಿವೃದ್ಧಿ ಪರ ವಿಷಯಗಳಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಾಗುತ್ತಿರುವುದು ಭಾರತದಲ್ಲಿ ಮಾತ್ರ. ಆಪರೇಷನ್ ಸಿಂಧೂರದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಬಳಕೆಯಾಗಿದೆ ಎಂದರು.

ನೆಲ, ಜಲ ಮತ್ತು ಆಹಾರ ವಿಷಯದ ವಿಷಯಗಳಲ್ಲಿ ಸ್ವಾಮ್ಯತ್ವ ಬೆಳೆಸಿಕೊಂಡವರು ಮಾತ್ರ ವ್ಯವಸ್ಥೆಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ಸಂಶೋಧನೆ, ಅಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ಅಳವಡಿಸಿಕೊಳ್ಳುವಲ್ಲಿ ಹೊಸಹೆಜ್ಜೆ ಇರಿಸಿದೆ. ತಂತ್ರಜ್ಞಾನ ನಾವು ತೆಗೆದುಕೊಳ್ಳುವ ಔಷಧ, ನಾವು ತಿನ್ನುವ ಆಹಾರ, ನಾವು ಧರಿಸುವ ಬಟ್ಟೆ ಮತ್ತು ಸಂವಹನ ಇವೆಲ್ಲವೂ ವಿಜ್ಞಾನದ ಬಳಕೆಯ ಮೂಲಕ ಸಾಧ್ಯವಾಗಿದೆ. ಜಗತ್ತನ್ನು ರೂಪಿಸುವ, ಪ್ರಗತಿ ಮತ್ತು ನಾವೀನ್ಯತೆಯ ಹಿಂದಿನ ಪ್ರೇರಕ ಶಕ್ತಿ ವಿಜ್ಞಾನವಾಗಿದೆ ಎಂದರು.

ನಾಲ್ಕು ದಿನಗಳ ಅವಧಿಯಲ್ಲಿ ಆರೋಗ್ಯಕ್ಕೆ ಪೂರಕವಾದ ಆಹಾರ ಮತ್ತು ಪೌಷ್ಟಿಕತೆ, ಪರಿಸರದಲ್ಲಿ ಗುರುತಿಸುವ ವಿಷಯಗಳು, ದೂರದರ್ಶಕ ತಯಾರಿಕೆ ಮತ್ತು ಬಾಹ್ಯಾಕಾಶಗಳ ವೀಕ್ಷಣೆ, ಮಕ್ಕಳು ಮತ್ತು ಸಾರ್ವಜನಿಕರಿಗೆ ವಿಜ್ಞಾನ ವಿಷಯಗಳಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎನ್‌.ಹೇಮಂತ್ ತಿಳಿಸಿದರು

ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಉ‍ಪಕಾರ್ಯದರ್ಶಿ ಕೆ.ಆರ್‌.ಸುಜಾತಾ, ಸನ್ನಿಧಿ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಫಾ.ಪಿಂಟೋ ಉಪಸ್ಥಿತರಿದ್ದರು.

ಜಿಲ್ಲೆಯ ಜನರಲ್ಲಿ ಮೌಢ್ಯ ಮತ್ತು ಕಂದಾಚಾರ ಅವೈಜ್ಞಾನಿಕ ವಿಷಯಗಳನ್ನು ಹೊರಹಾಕುವುದು ಬಾಲ್ಯವಿವಾಹದಂತಹ ಅನಿಷ್ಟಗಳ ಹೊರದೂಡಿ ವೈಜ್ಞಾನಿಕ ವಿಷಯಗಳನ್ನು ಜನರಿಗೆ ತಲುಪಿಸಲು ಈ ಕಾರ್ಯಕ್ರಮ ವೇದಿಕೆ ಆಗಲಿದೆ
ಎನ್.ಹೇಮಂತ್ ಜಿ.ಪಂ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.