ADVERTISEMENT

ಅಹಿಂಸೆ, ಪರೋಪಕಾರ ಜೈನ ಧರ್ಮದ ಪ್ರಮುಖ ಸಿದ್ಧಾಂತ

ಗುರುವಂದನೆ ಕಾರ್ಯಕ್ರಮದಲ್ಲಿ ಅಭಿನವ ಚಾರುಕೀರ್ತಿ ಭಟ್ಟಾರಕ ಶ್ರೀ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:31 IST
Last Updated 27 ನವೆಂಬರ್ 2025, 4:31 IST
ಸಾಗರದಲ್ಲಿ ಸರ್ವತೋಭದ್ರ ಜೈನ ಸಮಾಜದ ವತಿಯಿಂದ ಬುಧವಾರ ಗುರುವಂದನೆ ಕಾರ್ಯಕ್ರಮ ನಡೆಯಿತು.
ಸಾಗರದಲ್ಲಿ ಸರ್ವತೋಭದ್ರ ಜೈನ ಸಮಾಜದ ವತಿಯಿಂದ ಬುಧವಾರ ಗುರುವಂದನೆ ಕಾರ್ಯಕ್ರಮ ನಡೆಯಿತು.   

ಸಾಗರ: ಅಹಿಂಸೆಯ ಜೊತೆಗೆ ಪರೋಪಕಾರ ಕೂಡ ಜೈನ ಧರ್ಮದ ಪ್ರಮುಖ ಸಿದ್ಧಾಂತಗಳಲ್ಲಿ ಒಂದು ಎಂದು ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿರುವ ಜೈನ ಮಂದಿರದ ಆವರಣದಲ್ಲಿ ಸರ್ವತೋಭದ್ರ ಜೈನ ಸಮಾಜ ಬುಧವಾರ ಏರ್ಪಡಿಸಿದ್ದ ಮಂಗಲ ಪುರಪ್ರವೇಶ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಸಾಗರ ಸರ್ವಧರ್ಮ ಸಹಿಷ್ಣುತೆಗೆ ಮಾದರಿಯಾದಂತಹ ಊರು. ಇಲ್ಲಿ ಗಣಪತಿ ದೇವಸ್ಥಾನದ ಗೋಡೆಗೆ ಹೊಂದಿಕೊಂಡಂತೆ ಮಸೀದಿ ಕಟ್ಟಡವಿದೆ. ಇಲ್ಲಿನ ಹಿರಿಯರು ಬ್ರಾಹ್ಮಣ, ಜೈನ, ಲಿಂಗಾಯತ, ಕ್ರಿಶ್ಚಿಯನ್ ಸಮುದಾಯಕ್ಕೆ ಅಕ್ಕಪಕ್ಕದಲ್ಲೇ ನಿವೇಶನಗಳನ್ನು ನೀಡಿದ್ದಾರೆ. ಇಂತಹ ಸ್ಥಳದಲ್ಲಿ ಹುಟ್ಟಿ 2,300 ವರ್ಷಗಳ ಇತಿಹಾಸ ಹೊಂದಿರುವ ಶ್ರವಣಬೆಳಗೊಳ ಪೀಠದ ಶ್ರೀಗಳಾಗುವ ಅವಕಾಶ ದೊರಕಿರುವುದು ನಮ್ಮ ಜೀವನದ ಸೌಭಾಗ್ಯ’ ಎಂದು ಹೇಳಿದರು.

ADVERTISEMENT

‘ಈ ಹಿಂದೆ ರಾಜಮಹಾರಾಜರು ಮಠ– ಮಂದಿರಗಳಿಗೆ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಈಗಿನ ಸರ್ಕಾರಗಳು ಆ ಧೋರಣೆಯನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ಕಿವಿಮಾತು ಹೇಳಿದರು.

‘ಆತ್ಮದ ಉನ್ನತೀಕರಣಕ್ಕೆ ಸಂಯಮದ ಮನೋಭಾವ ರೂಢಿಸಿಕೊಳ್ಳುವುದು ಮುಖ್ಯ. ಶ್ರವಣಬೆಳಗೊಳ ಸಂಸ್ಥಾನ ಮಠದ ಶ್ರೀಗಳಲ್ಲಿ ಸಂಯಮದ ಜೊತೆಗೆ ಕ್ಷೇತ್ರವನ್ನು ಉತ್ತಮ ರೀತಿಯಲ್ಲಿ ನಡೆಸುವ ಆಡಳಿತಾತ್ಮಕ ಕೌಶಲವೂ ಇದೆ’ ಎಂದು ಸೋಂದಾ ಮಠದ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ತಿಳಿಸಿದರು.

‘ಮಠ– ಮಂದಿರಗಳ ಬೆಳವಣಿಗೆಯಲ್ಲಿ ಭಕ್ತರ ಭಾಗವಹಿಸುವಿಕೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜೈನರು ಅಲ್ಪಸಂಖ್ಯಾತರಾದರೂ ಅವರ ಧಾರ್ಮಿಕ ಮನೋಭಾವದ ಔನತ್ಯದಿಂದಾಗಿ ಜೈನ ಮಠಗಳು ಹೆಚ್ಚಿನ ಅಭಿವೃದ್ಧಿ ಕಂಡಿವೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

‘ಶಬ್ಧಗಳಲ್ಲಿ ವಿವರಿಸಲಾಗದ ಉತ್ಕೃಷ್ಟ ಸಿದ್ಧಾಂತಗಳನ್ನು ಜೈನ ಧರ್ಮ ತನ್ನ ಒಡಲಿನಲ್ಲಿ ಇರಿಸಿಕೊಂಡಿದೆ. ಹಿಂಸೆಯಿಂದ ಅಹಿಂಸೆಯ ಮಾರ್ಗದತ್ತ ಕೊಂಡೊಯ್ಯುವ ಮನಪರಿವರ್ತನೆಯ ಮಾರ್ಗಗಳನ್ನು ಜೈನ ಧರ್ಮ ಶೋಧಿಸಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ಹೇಳಿದರು.

ಹುಂಚ ಹೊಂಬುಜ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೈನ ಸಮಾಜದ ಅಧ್ಯಕ್ಷ ಗಜೇಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎಚ್.ಎಂ.ವೀರರಾಜಯ್ಯ ಜೈನ್, ಚಂದ್ರಕಲಾ ಜೈನ್, ವಿರೇಂದ್ರಕುಮಾರ್ ಪಿ.ಛಗನ್ ಲಾಲ್, ಪಾರ್ಶ್ವನಾಥ ಇಂದ್ರ, ಜ್ಯೋತಿ ನೇಮಿರಾಜ್, ಯಶೋಧರ ಇಂದ್ರ, ಬಿ.ಪಿ.ವಸಂತಕುಮಾರ್, ವಿ.ಟಿ.ಸ್ವಾಮಿ, ಕುಮುದಾ  ಇದ್ದರು. ಮಹಾವೀರ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

- 5000 ಸಸಿ ವಿತರಿಸಿದ ಸ್ವಾಮೀಜಿ

ತಮ್ಮ ಮಂಗಲ ಪುರಪ್ರವೇಶ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳದಿಂದ ತಂದಿದ್ದ 5000 ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಪರಿಸರಪ್ರೇಮ ಮೆರೆದರು. ಶ್ರೀಗಳ ಈ ಕಾರ್ಯಕ್ಕೆ ಸಭೆಯಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.