ADVERTISEMENT

ಜೋಗದಲ್ಲಿ ಪ್ರವಾಸಿಗರ ಕಲರವ ಪುನಾರಂಭ

ಬೇಸಿಗೆಯ ಸುಡು ಬಿಸಿಲಿನಲ್ಲೂ ಜಲಪಾತ ವೀಕ್ಷಣೆಗೆ ಮುಂದು

​ಪ್ರಜಾವಾಣಿ ವಾರ್ತೆ
Published 2 ಮೇ 2025, 5:30 IST
Last Updated 2 ಮೇ 2025, 5:30 IST
ಕಾರ್ಗಲ್ ಸಮೀಪದ ಜೋಗ ಜಲಪಾತದಲ್ಲಿ ನೂತನವಾಗಿ ನಿರ್ಮಿಸಿರುವ ವೀಕ್ಷಣಾ ಗೋಪುರದಿಂದ ಜೋಗದ ಸಿರಿಯನ್ನು ಪ್ರವಾಸಿಗರು ಗುರುವಾರ ಕಣ್ತುಂಬಿಕೊಂಡರು 
ಕಾರ್ಗಲ್ ಸಮೀಪದ ಜೋಗ ಜಲಪಾತದಲ್ಲಿ ನೂತನವಾಗಿ ನಿರ್ಮಿಸಿರುವ ವೀಕ್ಷಣಾ ಗೋಪುರದಿಂದ ಜೋಗದ ಸಿರಿಯನ್ನು ಪ್ರವಾಸಿಗರು ಗುರುವಾರ ಕಣ್ತುಂಬಿಕೊಂಡರು    

ಕಾರ್ಗಲ್: ಜೋಗ ನಿರ್ವಹಣಾ ಪ್ರಾಧಿಕಾರವು ಜೋಗ ಜಲಪಾತ ದರ್ಶನಕ್ಕೆ ಗುರುವಾರ (ಮೇ 1)ದಿಂದ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಅದಕ್ಕೆ ಪೂರಕವಾಗಿ ಜೋಗ ಜಲಪಾತದಲ್ಲಿ ಬೇಸಿಗೆಯ ಸುಡು ಬಿಸಿಲಿನಲ್ಲಿ ಪ್ರವಾಸಿಗರ ಕಲರವ  ಆರಂಭವಾಗಿದೆ.

ನೂತನ ವರ್ಷಾರಂಭದಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತದ ಪ್ರಧಾನ ದ್ವಾರಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ 4 ತಿಂಗಳ ಕಾಲ ನಿಷೇಧ ಹೇರಲಾಗಿತ್ತು. ಅಭಿವೃದ್ಧಿ ಕಾರ್ಯಗಳಿಗಾಗಿ ನಿಷೇಧ ಹೇರಿದ್ದರೂ ದೂರದಿಂದ ಬರುವ ಪ್ರವಾಸಿಗರು ಅತಿ ಮುಖ್ಯವಾದ ಮೈಸೂರು ಬಂಗಲೆ ಪ್ರದೇಶದಿಂದ ಪ್ರಕೃತಿ ದತ್ತವಾದ ಜಲಸಿರಿಯ ನೈಜ ಸೊಬಗನ್ನು ಸವಿಯಲು ಅವಕಾಶ ವಂಚಿತರಾಗಿ ಬೇಸರದೊಂದಿಗೆ ವಾಪಸ್‌ ಹೋಗುತ್ತಿದ್ದರು.

₹ 183 ಕೋಟಿ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಜೋಗದಲ್ಲಿ ನಡೆಯುತ್ತಿದ್ದು, ನಿರೀಕ್ಷಿತ ಸಮಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆಯಾಗಿದೆ. ಪ್ರಸ್ತುತ ಸ್ಥಿತಿಗತಿಗಳನ್ನು ಅವಲೋಕನ ಮಾಡಿರುವ ಜೋಗ ನಿರ್ವಹಣಾ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಪ್ರವಾಸಿಗರಿಗೆ ಅನನುಕೂಲ ಆಗಬಾರದು, ಬೇಸರದಿಂದ  ಹೋಗಬಾರದು ಎಂಬ ದೃಷ್ಟಿಯಿಂದ ಮೇ 1ರಿಂದ ಜಲಪಾತ ಪ್ರದೇಶದ ಮೈಸೂರು ಬಂಗಲೆಯ ಮುಂಭಾಗದಿಂದ ಜೋಗ ಜಲಪಾತ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿದೆ. ಇದರಿಂದ ಪ್ರವಾಸಿಗರ ದಂಡು ಜೋಗತ್ತ ಮುಖ ಮಾಡಿದೆ.

ADVERTISEMENT

‘ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಿರುವುದು ಅತ್ಯಂತ ಸಂತಸದ ವಿಚಾರ. ಜಲಪಾತ ಪ್ರದೇಶದ ಅಭಿವೃದ್ಧಿ ಕೆಲಸಗಳು ಅದರ ಪಾಡಿಗೆ ನಡೆಯುತ್ತಿರಲಿ, ಪ್ರವಾಸಿಗರು ಬಂದಾಗ ಪ್ರಕೃತಿ ದತ್ತವಾದ ನೈಜ ಸೌಂದರ್ಯ ಸವಿಯಲು ಅವಕಾಶ ಇರಬೇಕು’ ಎಂದು ಸ್ಥಳೀಯರಾದ ಎಸ್.ಎಲ್. ರಾಜಕುಮಾರ್ ಅಭಿಪ್ರಾಯಪಟ್ಟರು.

‘ಜೋಗ ಪ್ರದೇಶದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಭಾರೀ ಗಾತ್ರದ ಯಂತ್ರೋಪಕರಣಗಳು, ವಿವಿಧ ಬಗೆಯ ಸಾಮಗ್ರಿಗಳು ಎಲ್ಲೆಂದರಲ್ಲಿ ಹರಡಿಕೊಂಡಿವೆ. ಇವುಗಳ ನಡುವೆ ಪ್ರವಾಸಿಗರ ಸುರಕ್ಷತೆಗೆ ಪ್ರಾಮುಖ್ಯ ನೀಡಲು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಸಿಗರು ಸಂಚರಿಸುವ ಎಲ್ಲ ಮಾರ್ಗಗಳಲ್ಲಿ ಸ್ವ– ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ನಾಮಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರಿಗೆ ಸ್ವಚ್ಛ ಕುಡಿಯುವ ನೀರು, ಶೌಚಾಲಯ ಸೇರಿ ಮೂಲಸೌಲಭ್ಯಗಳ ಕೊರತೆ ಉಂಟಾಗದಂತೆ ತ್ವರಿತವಾಗಿ ಗಮನಹರಿಸಲು ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆಗೆ ತಿಳಿಸಲಾಗಿದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಕಾರ್ಗಲ್ ಸಮೀಪದ ಜೋಗ ಜಲಪಾತದಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಅಳವಡಿಸಿರುವ ನಾಮಫಲಕಗಳು

ವಾಹನ ನಿಲುಗಡೆ ಸಮಸ್ಯೆ; ಸವಾಲಿನ ಸಂಗತಿ

‘ಜೋಗದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಪ್ರವಾಸಿ ವಾಹನ ನಿಲುಗಡೆ ಸಮಸ್ಯೆ ಪರಿಹರಿಸುವುದು ಸವಾಲಿನ ಸಂಗತಿಯಾಗಿದೆ. ರಾಣಿ ಜಲಪಾತ ಪ್ರದೇಶದಲ್ಲಿ ವಾಹನ ನಿಲುಗಡೆ ಲಾಟ್ ನಿರ್ಮಾಣವಾಗುತ್ತಿದೆ. ಇಲ್ಲಿನ ಕಾಮಗಾರಿಗಳು ಪೂರ್ಣಗೊಂಡ ನಂತರ ಜೋಗ ಕಾರ್ಗಲ್ ಮಾರ್ಗದಲ್ಲಿ ವಾಹನ ನಿಲುಗಡೆ ಪ್ರದೇಶ ಗುರುತಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಧರ್ಮಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.