ಕಾರ್ಗಲ್: ಶರಾವತಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ನದಿ ನೀರಿನ ಒಳಹರಿವು ಹೆಚ್ಚಾಗಿದ್ದು, ಅಪಾರ ಪ್ರಮಾಣದ ನೀರು ಲಿಂಗನಮಕ್ಕಿ ಅಣೆಕಟ್ಟೆಗೆ ಹರಿದು ಬರುತ್ತಿದೆ.
ಗರಿಷ್ಠ ಮಟ್ಟದ ಸನಿಹದಲ್ಲಿ ಅಣೆಕಟ್ಟೆಯ ನೀರು ಸಂಗ್ರಹವಾಗಿದ್ದು, ಹೆಚ್ಚುವರಿಯಾಗಿ ಹರಿದು ಬರುತ್ತಿರುವ 52,000 ಕ್ಯುಸೆಕ್ ನೀರು 11 ರೇಡಿಯಲ್ ಗೇಟ್‌ಗಳ ಮೂಲಕ ಲಿಂಗನಮಕ್ಕಿ ಕೆಳದಂಡೆ ಪ್ರದೇಶಕ್ಕೆ ಹರಿಸುತ್ತಿರುವ ಕಾರಣ ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಜಲಸಿರಿಯ ವೈಭವ ಮರುಕಳಿಸಿದೆ.
ಜೋಗ ಜಲಪಾತದ ಮೈಸೂರು ಬಂಗಲೆಯ ಪ್ರದೇಶದಿಂದ ಜಲಪಾತದ ಸಂಪೂರ್ಣ ಸುಂದರ ನೋಟ ಕಾಣಸಿಗುತ್ತಿದೆ. ರಾಜಾ, ರೋರರ್, ರಾಕೆಟ್, ರಾಣಿ ಜಲಪಾತಗಳು ಒಟ್ಟುಗೂಡಿ ಭಾರಿ ಘರ್ಜನೆಯೊಂದಿಗೆ ರುದ್ರರಮಣೀಯವಾಗಿ ಶರಾವತಿ ಕೊಳ್ಳದ ಪ್ರಪಾತದ ಆಳಕ್ಕೆ ಧುಮ್ಮಿಕ್ಕುವ ರೋಮಾಂಚಕ ನೋಟ ಪ್ರವಾಸಿಗರನ್ನು ಮೂಕ ವಿಸ್ಮಿತರನ್ನಾಗಿಸುತ್ತಿದೆ. ಮೋಡ ಮುಸುಕಿದ ವಾತಾವರಣದ ನಡುವೆ ಜಲಸಿರಿಯ ವೈಭವವನ್ನು ಕಾಣುವ ಪ್ರವಾಸಿಗರು ‘ಹೋ...’ ಎಂದು ಹರ್ಷೋದ್ಘಾರ ಮಾಡುತ್ತಿರುವ ದೃಶ್ಯ ಜಲಪಾತ ಪ್ರದೇಶದಲ್ಲಿ ಶುಕ್ರವಾರ ಕಂಡು ಬಂತು.
ಲಿಂಗನಮಕ್ಕಿಯಿಂದ ಹರಿಯುತ್ತಿರುವ ಜಲ ಪ್ರವಾಹಕ್ಕೆ ಕಾರ್ಗಲ್ ಮರಳು ಕೋರೆ ಪ್ರದೇಶದ ಮುಖ್ಯ ರಸ್ತೆಗಳು ನೀರಿನಲ್ಲಿ ಮುಳುಗಿವೆ. ಮಹಾತ್ಮ ಗಾಂಧಿ ವಿದ್ಯುದಾಗರಕ್ಕೆ ನೀರು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕಾರ್ಗಲ್ ಅಣೆಕಟ್ಟೆಯ ಮೇಲಿನಿಂದ ನೀರು ಕೋಡಿ ಹರಿದು ಅತ್ಯಂತ ವೇಗವಾಗಿ ನದಿ ಹರಿಯುತ್ತಿದ್ದು, ಕಾರ್ಗಲ್ ಸಾಗರ ರಸ್ತೆಯ ಸಂಪರ್ಕ ಸೇತುವಾಗಿರುವ ಚೈನಾಗೇಟ್ ಸೇತುವೆಯ ಎತ್ತರಕ್ಕೆ ನೀರಿನ ಹರಿವು ತಲುಪುತ್ತಿದೆ.
ಗಣಪತಿ ವಿಸರ್ಜನೆಗೆ ಹೊಳೆಯಲ್ಲಿ ನಿರ್ಬಂಧ: ಗಣೇಶೋತ್ಸವದ ಅಂಗವಾಗಿ ಅಲ್ಲಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣಪತಿ ವಿಗ್ರಹಗಳನ್ನು ಶರಾವತಿ ನದಿಯಲ್ಲಿ ವಿಸರ್ಜಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಬಾರಿ ಲಿಂಗನಮಕ್ಕಿ ಜಲಾಶಯದ ರೇಡಿಯಲ್ ಗೇಟ್‌ನ ನೀರು ಹೊರ ಹರಿದಿರುವ ಕಾರಣ ಶರಾವತಿ ನದಿ ಅಪಾಯಕರ ಸ್ಥಿತಿಯಲ್ಲಿ ಹರಿಯುತ್ತಿದೆ. ಆದ್ದರಿಂದ ಗಣಪತಿ ಮೂರ್ತಿಯನ್ನು ಹೊಳೆಗೆ ಇಳಿದು ವಿಸರ್ಜಿಸುವ ಕ್ರಮವನ್ನು ಪೊಲೀಸ್ ಇಲಾಖೆಯವರು ಸುರಕ್ಷತೆಯ ಭಾಗವಾಗಿ ನಿರ್ಬಂಧಿಸಿದ್ದಾರೆ.
‘ಪ್ರವಾಹ ಭೀತಿ; ಹಂತ ಹಂತವಾಗಿ ಬಿಡುಗಡೆ’ ಲಿಂಗನಮಕ್ಕಿ ಕೆಳದಂಡೆಯ ಪ್ರದೇಶಗಳಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಹೊನ್ನಾವರ ಪ್ರದೇಶಗಳಲ್ಲಿ ಒಮ್ಮೆಲೆ ಪ್ರವಾಹ ಭೀತಿ ಎದುರಾಗಬಾರದು ಎಂಬ ಉದ್ದೇಶದಿಂದ ಜಲಾಶಯದಲ್ಲಿ ಸಂಗ್ರಹವಾಗಿರುವ ನದಿ ನೀರಿನ ಹೆಚ್ಚಿನ ಹರಿವನ್ನು ಹಂತ ಹಂತವಾಗಿ ಹೊರ ಬಿಡಲಾಗುತ್ತಿದೆ ಎಂದು ಕೆಪಿಸಿ ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್ ಎಂ. ಮಾದೇಶ ಮಾಹಿತಿ ನೀಡಿದ್ದಾರೆ. ಲಿಂಗನಮಕ್ಕಿಯ 11 ರೇಡಿಯಲ್ ಗೇಟ್‌ಗಳನ್ನು ಮೂರು ಮುಕ್ಕಾಲು ಅಡಿ ಎತ್ತರಕ್ಕೆ ತೆರೆದಿದ್ದು ಪ್ರತಿ ಗೇಟ್‌ನಲ್ಲಿ ಅಂದಾಜು 5000 ಕ್ಯುಸೆಕ್ ನೀರು ಹೊರ ಹಾಯುತ್ತಿದೆ ಎಂದು ಜಲಾಶಯದ ಮೇಲುಸ್ತುವಾರಿ ಅಧೀಕ್ಷಕ ಎಂಜಿನಿಯರ್ ಆರ್. ಶಿವಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.