ADVERTISEMENT

ಮೋದಿ ಹೆಬ್ಬೆಟ್ಟು ಗಿರಾಕಿ ಹೇಳಿಕೆ: ಸಿದ್ದರಾಮಯ್ಯ ಕ್ಷಮೆಯಾಚನೆಗೆ ಈಶ್ವರಪ್ಪ ಪಟ್ಟು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 13:22 IST
Last Updated 20 ಅಕ್ಟೋಬರ್ 2021, 13:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಪ್ರಧಾನಿ ಮೋದಿ ಅವರನ್ನು ಹೆಬ್ಬೆಟ್ಟು ಗಿರಾಕಿ ಎಂದ ಸಿದ್ದರಾಮಯ್ಯ ಕ್ಷಮೆ ಯಾಚಿಸಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಚುನಾವಣಾ ಸಮಯದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಹುಲ್ ಗಾಂಧಿ ಕುರಿತು ಡ್ರಗ್‌ಪೆಡ್ಲರ್ ಎಂಬ ಪದ ಬಳಸಿದ್ದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಟ್ಟದಾಗಿ ಟೀಕೆ ಮಾಡುತ್ತಿದ್ದಾರೆ. ಮೋದಿ ಅವರನ್ನು ಹೆಬ್ಬೆಟ್ಟು ಗಿರಾಕಿ ಎಂದರೆ ನಾವು ಸುಮ್ಮನಿರಬೇಕಾ? ನಮಗೂ ಪದ ಬಳಕೆ ಮಾಡಲು ಬರುತ್ತದೆ. ಇಡೀ ದೇಶದ ಜನರಿಗೆ ಈ ಹೇಳಿಕೆ ನೋವು ತಂದಿದೆ. ರಾಹುಲ್ ಗಾಂಧಿ ಬಗ್ಗೆ ಹೇಳಿಕೆ ನೀಡಿದ ನಳಿನ್ ಕುಮಾರ್ ಕಟೀಲ್ ಅವರನ್ನು ನಿಮ್ಹಾನ್ಸ್ ಗೆ ಸೇರಿಸಿ ಎನ್ನುವ ಸಿದ್ಧರಾಮಯ್ಯ ಅವರನ್ನು ಯಾವ ಆಸ್ಪತ್ರೆಗೆ ಸೇರಿಸಬೇಕು ಎಂದು ಪ್ರಶ್ನಿಸಿದರು.

ADVERTISEMENT

ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿ ಪಾಕಿಸ್ತಾನದ ಮೇಲೆ ಯುದ್ಧ ಸಾರಿ ಜಯಗಳಿಸಿದಾಗ ವಾಜಪೇಯಿ ಅವರು ಇಂದಿರಾಗಾಂಧಿ ಅವರನ್ನು ದುರ್ಗೆ, ದೇಶದ ನಾಯಕಿ ಎಂದು ಹೊಗಳಿದ್ದರು. ಆದರೆ, ಈಗಿನ ಕಾಂಗ್ರೆಸ್ ಪರಿಸ್ಥಿತಿ ಹದಗೆಟ್ಟಿದೆ ಎಂದು ಕುಟುಕಿದರು.

ಆರ್‌ಎಸ್‌ಎಸ್‌ ಟೀಕೆ ಮಾಡುವ ಜೆಡಿಎಸ್‌ ಎಲ್ಲಿದೆ ಎಂದು ಹುಡುಕಬೇಕು. ಕುಂಟನೊಬ್ಬ ಕಟ್ಟಿ ಪೈಲ್ವಾನನೊಂದಿಗೆ ಹೋರಾಟ ಮಾಡಿದಂತೆ ಇದೆ ಜೆಡಿಎಸ್ ಕತೆ. ಆರ್‌ಎಸ್‌ಎಸ್‌ ತೆಗಳಿದರೆ ಮತ ಸಿಗುತ್ತದೆ ಎಂಬ ಭ್ರಮೆಯಲ್ಲಿ ಕುಮಾರಸ್ವಾಮಿ ಇದ್ದಾರೆ. ದೇವೇಗೌಡರು ಪ್ರಾದೇಶಿಕ ಪಕ್ಷ ಬೆಂಬಲಿಸಿ ಎಂದು ಹೇಳಿದ್ದಾರೆ. ಆದರೆ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೇ ಪ್ರಾದೇಶಿಕ ಪಕ್ಷದ ಸ್ಥಿತಿ ಬಂದಿದೆ ಎಂದು ಛೇಡಿಸಿದರು.

ಅಲ್ಪಸಂಖ್ಯಾತರ ಪರ ಎಂದು ಬಿಂಬಿಸಿಕೊಳ್ಳುವ ಕಾಂಗ್ರೆಸ್‌ ಡಿ.ಕೆ. ಶಿವಕುಮಾರ್ ವಿರುದ್ಧ ಮಾತನಾಡಿದ ಸಲೀಂ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ. ಆದರೆ, ಸಿದ್ದರಾಮಯ್ಯ ಅವರ ಶಿಷ್ಯ ಉಗ್ರಪ್ಪನ ಮೇಲೆ ಏಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.