ADVERTISEMENT

ಕಸಾಪ ಸಮನ್ವಯತೆಯಿಂದ ನಡೆದುಕೊಳ್ಳಲಿ: ಪಿ.ಪುಟ್ಟಯ್ಯ

​ಪ್ರಜಾವಾಣಿ ವಾರ್ತೆ
Published 6 ಮೇ 2025, 14:30 IST
Last Updated 6 ಮೇ 2025, 14:30 IST
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸೋಮವಾರ ‌ಆಯೋಜಿಸಿದ್ದ 111 ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯ ನೋಟ
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸೋಮವಾರ ‌ಆಯೋಜಿಸಿದ್ದ 111 ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯ ನೋಟ   

ಶಿವಮೊಗ್ಗ: ಭಾಷೆ ಸಾಹಿತ್ಯ ಸಂಘಟನೆಗೆ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈಚೆಗೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಆಡಳಿತದ ಚುಕ್ಕಾಣಿ ಹಿಡಿದವರು ಪ್ರಬುದ್ಧತೆಯಿಂದ ನಡೆದುಕೊಳ್ಳಬೇಕಿದೆ ಎಂದು ಹಿರಿಯ ಸಮಾಜವಾದಿ ಚಿಂತಕ ಪಿ.ಪುಟ್ಟಯ್ಯ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸೋಮವಾರ ‌ಆಯೋಜಿಸಿದ್ದ 111 ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕರ ತ್ಯಾಗ, ಮಹಾರಾಜರು ಹಾಗೂ ಸರ್ಕಾರದ ಪ್ರೋತ್ಸಾಹಗಳಿಂದ ಬೆಳೆದು ಬಂದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಇತ್ತೀಚಿಗೆ ಸಮನ್ವಯದ ಕೊರತೆ ಕಾಣುತ್ತಿದೆ. ತಾಲ್ಲೂಕು, ಜಿಲ್ಲಾ ಹಂತದಲ್ಲಿ ಕಾರ್ಯಚಟುವಟಿಕೆಗೆ ಹಣವಿಲ್ಲ. ಮತ್ತೊಂದು ಕಡೆ ದೊಡ್ಡ ಮೊತ್ತದ ಹಣ ಸಂಗ್ರಹ ಆದಾಗ ಇಂತಹ ವೈಪರೀತ್ಯಗಳು ನಡೆಯುತ್ತವೆ ಎಂದರು.

ADVERTISEMENT

ಮುಕ್ತ ಸಂವಾದದಲ್ಲಿ ಹಿರಿಯ ಸಾಹಿತಿ ಪ್ರೊ. ರಾಜೇಂದ್ರ ಚೆನ್ನಿ ಮಾತನಾಡಿ, ಪ್ರಜಾಪ್ರಭುತ್ವದ ನಂಬಿಕೆ ಅಡಿಯಲ್ಲಿ ರಾಜರು, ಸರ್ಕಾರ, ನಾಗರೀಕರಿಂದ ಬರುವ ಸಂಪನ್ಮೂಲದಿಂದ ಈ ಸಂಸ್ಥೆ ಬೆಳೆದು ಬಂದಿದೆ. ಹೀಗಾಗಿ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಬೇಕಿದೆ. ಕನ್ನಡ ಸಾಹಿತ್ಯ ಯಾವ ಸಂದರ್ಭದಲ್ಲಿಯೂ ಸರ್ವಾಧಿಕಾರಿ ಧೋರಣೆ ಪ್ರೋತ್ಸಾಹಿಸಿಲ್ಲ ಎಂದರು. 

ಲೇಖಕಿಯರ ಸಂಘದ ಅಧ್ಯಕ್ಷೆ ಎಸ್.ವಿ. ಚಂದ್ರಕಲಾ ಮಾತನಾಡಿ, ‘ಯುವ ಜನಾಂಗ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕನ್ನಡವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಚೆನ್ನಾಗಿ ಬೆಳೆದಿದೆ’ ಎಂದರು.

ವಕೀಲ ಕೆ.ಪಿ. ಶ್ರೀಪಾಲ್, ಮಾಜಿ ಮೇಯರ್‌ ಸುವರ್ಣಾ ಶಂಕರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿದರು. ಸಾಹಿತಿ ವಿ. ಗಣೇಶ್ ಅಧ್ಯಕ್ಷತೆ ವಹಿಸಿದ್ದರು.     

ಮುಕ್ತ ಸಂವಾದದಲ್ಲಿ ಸಾಹಿತಿಗಳಾದ ಬಿ. ಚಂದ್ರೇಗೌಡರು, ಕಡಿದಾಳು ಗೋಪಾಲ, ರಾಮಚಂದ್ರ, ಎಚ್. ತಿಮ್ಮಪ್ಪ, ಕೆ. ಎಸ್. ಮಂಜಪ್ಪ ಭಾಗವಹಿಸಿದ್ದರು. ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ರಾಮಕೃಷ್ಣ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ನಿತ್ಯಾ ಎಂ. ಕುಲಕರ್ಣಿ, ಆದಿಚುಂಚನಗಿರಿ ಶಾಲೆ ವಿದ್ಯಾರ್ಥಿ ಸಹಿಷ್ಣು ಅವರನ್ನು ಅಭಿನಂದಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.