
ತೀರ್ಥಹಳ್ಳಿ: ‘ಬಸವತತ್ವ ಸಾರಿದ ಬಸವಣ್ಣನವರ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು. ಅಕ್ಕಮಹಾದೇವಿ, ಕಿತ್ತೂರು ರಾಣಿ ಚನ್ನಮ್ಮ, ಆಯ್ದಕ್ಕಿ ಲಕ್ಕಮ್ಮ ಮುಂತಾದವರು ಪ್ರತಿಪಾದಿಸಿದ ಸ್ತ್ರೀ ಸಮಾನತೆಯ ತತ್ವಗಳು ಸಂವಿಧಾನದಲ್ಲಿವೆ. ಹಾಗಾಗಿ ಸಂವಿಧಾನಕ್ಕೆ ಕರ್ನಾಟಕದ ಭವ್ಯ ಇತಿಹಾಸ ಪ್ರೇರಣೆಯಾಗಿದೆ’ ಎಂದು ತಹಶೀಲ್ದಾರ್ ಎಸ್.ರಂಜಿತ್ ಅಭಿಪ್ರಾಯಿಸಿದರು.
ಸೋಮವಾರ ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
‘ಭಾರತೀಯರಿಗೆ ವಿವಿಧ ಧರ್ಮಗ್ರಂಥಕ್ಕಿಂತ ಶ್ರೇಷ್ಠವಾದ ಗ್ರಂಥ ಸಂವಿಧಾನ. ನೂರಕ್ಕೂ ಹೆಚ್ಚು ತಿದ್ದುಪಡಿಯಾಗಿರುವ ಜೀವಿಕ ಗ್ರಂಥವಾಗಿದೆ’ ಎಂದು ಹೇಳಿದರು.
‘ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಶಿಕ್ಷಣ, ರಕ್ಷಣೆ, ಆರ್ಥಿಕತೆ, ಸುರಕ್ಷತೆ ಸೇರಿದಂತೆ ಹತ್ತು ಹಲವು ಕ್ಷೇತ್ರದಲ್ಲಿ ಭಾರತ ಛಾಪು ಮೂಡಿಸಿದೆ. ಯುವ ಸಮುದಾಯದ ಎದೆಯಲ್ಲಿ ರಾಷ್ಟ್ರಾಭಿಮಾನ, ದೇಶಾಭಿಮಾನದ ಬೀಜಗಳನ್ನು ಬಿತ್ತಬೇಕು. ಗಾಂಧಿಯ ದೇಶಪ್ರೇಮ, ಕುವೆಂಪು ಸಾಹಿತ್ಯದ ಕ್ರಾಂತಿ, ಗೋಪಾಲಗೌಡರ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಮಾನವತಾವಾದಿ, ಜಾತ್ಯಾತೀತ ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.
‘ತೀರ್ಥಹಳ್ಳಿಯ ಭವಿಷ್ಯದ ದೃಷ್ಟಿಯಿಂದ ಪ್ರವಾಸೋದ್ಯಮ, ಕೈಗಾರಿಕೆ, ಸಂಶೋಧನೆ, ವೈದ್ಯಕೀಯ, ತಂತ್ರಜ್ಞಾನ, ನವ ಉದ್ಯಮದ ಕಲ್ಪನೆಗಳನ್ನು ಸಾಕಾರಗೊಳಿಸಬೇಕು’ ಎಂದರು.
ಕೃಷಿ ಇಲಾಖೆ ವತಿಯಿಂದ ನಡೆಸಲಾದ ಭತ್ತ ಬೆಳೆ ಸ್ಪರ್ಧೆಯ ಪುರುಷ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಾಸುದೇವ ಟಿ.ಸಿ., ದ್ವಿತೀಯ ಸ್ಥಾನ ಪಡೆದ ಪ್ರಸನ್ನ ಮಚಾಡೂ, ತೃತೀಯ ಸ್ಥಾನ ಪಡೆದ ಮಂಜುನಾಥ, ಮಹಿಳಾ ವಿಭಾಗದಲ್ಲಿ ಕ್ರಮವಾಗಿ ಡಿ.ಎಸ್.ವೀಣಾ, ಡಾಕಮ್ಮ, ಸೀತಾಲಕ್ಷ್ಮೀ ಯು.ವಿ ಅವರನ್ನು ಸನ್ಮಾನಿಸಿ ಕ್ರಮವಾಗಿ ₹1,5000, ₹10,000, ₹5,000 ಸಾವಿರ ಬಹುಮಾನ ನೀಡಲಾಯಿತು.
ಶಾಸಕ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಡಿವೈಎಸ್‌ಪಿ ಅರವಿಂದ ಎನ್.ಕಲಗುಜ್ಜಿ, ಇಒ ಶೈಲಾ ಎನ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.