
ಸಾಗರ: ಇಲ್ಲಿನ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಕೆಎಫ್‌ಡಿ (ಮಂಗನ ಕಾಯಿಲೆ) ಕಾಣಿಸಿಕೊಳ್ಳುತ್ತಿರುವ ಕಾರಣ ಕೆಎಫ್‌ಡಿ ಕಾರ್ಯ ಕ್ಷೇತ್ರಕ್ಕೆ ಮೂರು ವಾಹನಗಳನ್ನು ಮಂಜೂರು ಮಾಡುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ ಬರೆದಿದ್ದಾರೆ.
ಕೆಎಫ್‌ಡಿ ಬಾಧಿತ ಪ್ರದೇಶಗಳು ದಟ್ಟ ಅರಣ್ಯ ಮತ್ತು ಕಡಿದಾದ ಗುಡ್ಡಗಾಡುಗಳಿಂದ ಕೂಡಿದೆ. ಇಂತಹ ದುರ್ಗಮ ಪ್ರದೇಶಗಳಲ್ಲಿರುವ ಕೆಎಫ್‌ಡಿ ಶಂಕಿತರ ಮನೆಗಳಿಗೆ ತೆರಳಿ ಸರ್ವೇಕ್ಷಣೆ ನಡೆಸಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ವಾಹನಗಳ ತುರ್ತು ಅವಶ್ಯಕತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ಇಲಾಖೆಯಿಂದ ಹೊರಗುತ್ತಿಗೆ ಆಧಾರದ ಮೇಲೆ ವಾಹನಗಳನ್ನು ಪಡೆಯಲು ಅನುಮತಿ ಇದ್ದರೂ ಈಗಿರುವ ನಿಯಮಗಳ ಪ್ರಕಾರ ಸಣ್ಣ ಮಾದರಿಯ ಕಾರುಗಳನ್ನು ಮಾತ್ರ ಬಳಸಬಹುದಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸಲು ಈ ಮಾದರಿಯ ವಾಹನಗಳಿಗೆ ಕಷ್ಟಸಾಧ್ಯವಾಗಿದೆ. ಹಾಗಾಗಿ ಜೀಪ್ ಅಥವಾ ಬೊಲೆರೋ ಮಾದರಿಯ ವಾಹನ ಪೂರೈಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.