ADVERTISEMENT

ತುಮರಿ: ಕೋಟೆ ವೀರಾಂಜನೇಯ ಸ್ವಾಮಿ ಜಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 6:06 IST
Last Updated 6 ಫೆಬ್ರುವರಿ 2025, 6:06 IST
ಸಾಗರ ತಾಲ್ಲೂಕಿನ ಕಟ್ಟಿನಕಾರು ಗ್ರಾಮದ ಕೋಟೆ ವೀರಾಂಜನೇಯ ದೇವಸ್ಥಾನದ ನೋಟ
ಸಾಗರ ತಾಲ್ಲೂಕಿನ ಕಟ್ಟಿನಕಾರು ಗ್ರಾಮದ ಕೋಟೆ ವೀರಾಂಜನೇಯ ದೇವಸ್ಥಾನದ ನೋಟ   

ತುಮರಿ: ಪಶ್ಚಿಮಘಟ್ಟದ ದಟ್ಟ ಅರಣ್ಯದ ಪ್ರಶಾಂತ ಸ್ಥಳದಲ್ಲಿ ಹರಿವ ಸರಳಾ ಹೊಳೆಯ ಜುಳು ಜುಳು ನಾದ, ನಿಸರ್ಗ ನಿರ್ಮಿತ ನಿತ್ಯಹರಿದ್ವರ್ಣ ಕಾಡಿನ ವಿಸ್ಮಯದ ಮಧ್ಯೆ ನೆಲೆನಿಂತ ಕೋಟೆ ವೀರಾಂಜನೇಯ ಸ್ವಾಮಿ ದೇಗುಲ ಧಾರ್ಮಿಕ ಭಾವವನ್ನು ಇಮ್ಮಡಿಗೊಳಿಸುತ್ತದೆ. 

ಪ್ರಕೃತಿಯ ಆರಾಧನೆ, ದೈವತ್ವ ಭಾವವನ್ನು ಏಕಕಾಲಕ್ಕೆ ಮೂಡಿಸುವ ಹೊಗೆವಡ್ಡಿ ಬಳಿಯಿರುವ ವೀರಾಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವ ಫೆ. 6ರಿಂದ 8ವರೆಗೆ ನಡೆಯಲಿದೆ.

ತಾಲ್ಲೂಕು ಕೇಂದ್ರ ಸಾಗರದಿಂದ 67 ಕಿ.ಮೀ. ದೂರದಲ್ಲಿರುವ ಅರಣ್ಯದಂಚಿನ ಗ್ರಾಮ ಕಟ್ಟಿನಕಾರಿನಿಂದ 5 ಕಿ.ಮೀ. ದೂರವಿರುವ ಹೊಗೆವಡ್ಡಿ ವೀರಾಂಜನೇಯ ಸ್ವಾಮಿ ಅಲ್ಲಿನ ಮೂಲ ನೆಲೆಯಾಗಿ ಪ್ರಸಿದ್ಧಿ ಪಡೆದಿದ್ದಾನೆ. ವಿಜಯನಗರದ ಪಾಳೆಗಾರ, ಕೆಳದಿ ಸಂಸ್ಥಾನದ ಮಹಾಮಂತ್ರಿ ಉಗ್ರಾಣಿಮನೆ ಕಾಸರಗೋಡು ತಿಮ್ಮಣ್ಣ ನಾಯ್ಕನು ಈ ದೇವಸ್ಥಾನ ಕಟ್ಟಿಸಿದ್ದ ಎಂದು ಇತಿಹಾಸ ಸಾರುತ್ತದೆ.

ADVERTISEMENT

ಕ್ರಿ.ಶ. 1647ರಲ್ಲಿ ದೇವಾಲಯವನ್ನು ಕೆಳದಿಯ ಅರಸರಾದ ಶಿವಪ್ಪ ನಾಯ್ಕ ಅನಾವರಣಗೊಳಿಸಿದ ಎಂಬ ಪ್ರತೀತಿ ಇದೆ. ಈ ಕ್ಷೇತ್ರದಲ್ಲಿ ವೀರಾಂಜನೇಯನು ಪ್ರಧಾನ ಅಧಿದೇವನಾಗಿ ನೆಲೆ ನಿಂತಿದ್ದು, ಪರಿವಾರ ದೇವರುಗಳಾಗಿ ರಾಮೇಶ್ವರ, ಗಣಪತಿ, ಕ್ಷೇತ್ರಪಾಲ, ಜಟ್ಟಿಗರಾಯ, ನಾಗ ಚೌಡಿ, ಬಲಿಪ್ರಧಾನ ವೀರ ಹಾಗೂ ಭೂತರಾಯನ ಸಾನ್ನಿಧ್ಯ ಇದೆ. ಅಲ್ಲದೆ ಇಲ್ಲಿ ಪಾರ್ಶ್ವನಾಥ ತೀರ್ಥಂಕರರ ಜಿನಾಲಯವಿದೆ.

ಉಗ್ರಾಣಿಮನೆ ಕುಟುಂಬದ ಮೂಲ ಹೆಸರು ಕಾಸರಗೋಡು ತಿಮ್ಮಣ್ಣ ನಾಯ್ಕರ ಮನೆ ಎಂದು ಕರೆಯುವುದು ರೂಢಿ. ಅವರ ಕುಟುಂಬಸ್ಥರು ಕೇರಳದ ಕಾಸರಗೋಡಿನಿಂದ ಇಲ್ಲಿ ಬಂದು ನೆಲೆಸಿದರು. ನಂತರ ಅವರು ಹೊಗೆವಡ್ಡಿಯಿಂದ 17ನೇ ಶತಮಾನದ ಕೊನೆಯಲ್ಲಿ ಭಟ್ಕಳಕ್ಕೆ ತೆರಳಿ ನೆಲೆಸಿದರು. ಕಾಲಕ್ರಮೇಣ ಅಲ್ಲಿ ಕಾಡು ಆವರಿಸಿಕೊಂಡು ಜನವಸತಿ ಶೂನ್ಯವಾಯಿತು ಎಂದು ಇತಿಹಾಸ ತಿಳಿಸುತ್ತದೆ.

ದೇವಸ್ಥಾನವು ನೂರಾರು ವರ್ಷಗಳ ಕಾಲದಿಂದ ಶಿಥಿಲ ಸ್ಥಿತಿಯಲ್ಲೇ ಇತ್ತು. ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲು ಉಗ್ರಾಣಿಮನೆ ಕುಟುಂಬಸ್ಥರು ನಿಶ್ಚಯಿಸಿ ಜೀರ್ಣೋದ್ಧಾರ ತುರ್ತು ಕಾರ್ಯ ಕೈಗೊಂಡರು.

ದೇವಾಲಯದ ಮೂಲ ಕುಟುಂಬಸ್ಥರು, ಗ್ರಾಮಸ್ಥರ ಸಹಕಾರದಿಂದ ನೂರಾರು ವರ್ಷಗಳ ನಂತರ ವೀರಾಂಜನೆಯ ದೇವಸ್ಥಾನವು ಸಂಪೂರ್ಣ ಶಿಲಾಮಯ ದೇಗುಲವಾಗಿ ಜೀರ್ಣೋದ್ಧಾರಗೊಂಡಿದೆ. ದೇವಸ್ಥಾನದ ಪ್ರತಿಷ್ಠಾಪನಾ ಬ್ರಹ್ಮ ಕಲಶೋತ್ಸವ, ಶಿಲಾಮಯ ಆಲಯ, ತಿಮ್ಮಣ್ಣ ನಾಯ್ಕರ ಪ್ರತಿಮೆಯನ್ನು 2016ರಲ್ಲಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅನಾವರಣಗೊಳಿಸಿದ್ದರು ಎನ್ನುತ್ತಾರೆ ದೇವಸ್ಥಾನದ ಧರ್ಮದರ್ಶಿ ಅನಂತ ನಾಯ್ಕ ಉಗ್ರಾಣಿಮನೆ.

2016ರಲ್ಲಿ ಆನಾವರಣಗೊಂಡಿರುವ ಕಾಸರಗೋಡು ತಿಮ್ಮಣ್ಣ ನಾಯ್ಕರ ಪ್ರತಿಮೆ
ನಮ್ಮ ಕುಟುಂಬದ ಮೂಲ ಪುರುಷ ಕಾಸರಗೋಡು ತಿಮ್ಮಣ್ಣ ನಾಯ್ಕ ರಾಣಿ ಚನ್ನಮ್ಮಳ ಮಹಾಮಂತ್ರಿಯಾಗಿದ್ದರು. ನಾಲ್ಕೈದು ಶತಮಾನಗಳ ನಂತರ ಬ್ರಹ್ಮ ಕಲಶೋತ್ಸವ ಜಾತ್ರಾ ಮಹೋತ್ಸವ ನಡೆಯುತ್ತಿದೆ
ಅನಂತ ನಾಯ್ಕ ವಿರಾಂಜನೇಯ ದೇವಸ್ಥಾನದ ಧರ್ಮದರ್ಶಿ

ಇಂದಿನಿಂದ ಜಾತ್ರಾ ಮಹೋತ್ಸವ

ಹೊಗೆವಡ್ಡಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಇಂದಿನಿಂದ ಫೆ. 6ರಿಂದ 8ವರೆಗೆ ನಡೆಯಲಿದೆ. ಅಥಿತಿಗಳಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವ ಮಂಕಾಳೆ ಎಸ್. ವೈದ್ಯ ನಾರಾಯಣ ಗುರು ಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸಲಿದ್ದಾರೆ. ಜಾತ್ರೆ ಪ್ರಯುಕ್ತ ಫೆ. 6ರ ಸಂಜೆ 5ರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ರಾತ್ರಿ 7ರಿಂದ ದೀಪೋತ್ಸವ ಭಜನೆ ಸಾರ್ವತ್ರಿಕ ಅಭಿಷೇಕ ಪಲ್ಲಕ್ಕಿ ಉತ್ಸವ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಮೂಹಿಕ ಸತ್ಯನಾರಾಯಣ ಪೂಜೆ ಕ್ಷೇತ್ರದ ಅಥಿತಿ ಕಲಾವಿದರಿಂದ ನೃತ್ಯ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ದಿನ ಅನ್ನ ದಾಸೋಹ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.