ADVERTISEMENT

ಕಾರ್ಗಲ್: ಶರಾವತಿ ನದಿಗೆ ಕೆಪಿಸಿ ನಿಗಮದಿಂದ ಬಾಗಿನ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:25 IST
Last Updated 2 ಆಗಸ್ಟ್ 2025, 7:25 IST
ಕಾರ್ಗಲ್ ಸಮೀಪದ ಲಿಂಗನಮಕ್ಕಿ ಜಲಾಶಯದಲ್ಲಿ ಭರ್ತಿಯಾಗುವ ಸನಿಹದಲ್ಲಿದ್ದು, ಶರಾವತಿ ನದಿಗೆ ಕೆಪಿಸಿ ನಿಗಮದ ಅಧಿಕಾರಿಗಳು ಬಾಗಿನ ಸಮರ್ಪಣೆ ಮಾಡಿದರು 
ಕಾರ್ಗಲ್ ಸಮೀಪದ ಲಿಂಗನಮಕ್ಕಿ ಜಲಾಶಯದಲ್ಲಿ ಭರ್ತಿಯಾಗುವ ಸನಿಹದಲ್ಲಿದ್ದು, ಶರಾವತಿ ನದಿಗೆ ಕೆಪಿಸಿ ನಿಗಮದ ಅಧಿಕಾರಿಗಳು ಬಾಗಿನ ಸಮರ್ಪಣೆ ಮಾಡಿದರು    

ಕಾರ್ಗಲ್: ‘ನಾಡಿಗೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಅಣೆಕಟ್ಟೆ ಸಮುದ್ರಮಟ್ಟದಿಂದ 1811.40 ಅಡಿ ಜಲ ಮಟ್ಟ ತಲುಪಿ ಭರ್ತಿಯ ಸನಿಹದಲ್ಲಿದ್ದು, ಶರಾವತಿ ನದಿಗೆ ಕೆಪಿಸಿ ನಿಗಮದಿಂದ ವಾಡಿಕೆಯಂತೆ ಬಾಗಿನ ಸಮರ್ಪಣೆ ಮಾಡಲಾಗುತ್ತಿದೆ’ ಎಂದು ಕೆಪಿಸಿ ನಿಗಮದ ಮುಖ್ಯ ಎಂಜಿನಿಯರ್ ಎಂ. ಮಾದೇಶ ತಿಳಿಸಿದರು.

ಶರಾವತಿ ನದಿಗೆ ಶುಕ್ರವಾರ ಬಾಗಿನ ಸಮರ್ಪಣೆ ಮಾಡಿ ಅವರು ಮಾತನಾಡಿದರು.

‘ಆಗಸ್ಟ್ ತಿಂಗಳಲ್ಲಿ ಜಲಾಶಯದಲ್ಲಿ ನೀರು ತುಂಬುವ ಸಾಧ್ಯತೆ ದಟ್ಟವಾಗಿರುವುದರಿಂದ ಕೇಂದ್ರ ಕಚೇರಿಯ ಸಮ್ಮತಿ ಪಡೆದು ರಾಜ್ಯದ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರನ್ನು ಶರಾವತಿಗೆ ಬಾಗಿನ ಸಮರ್ಪಣೆ ಮಾಡಲು ಆಹ್ವಾನಿಸಲಾಗುವುದು. ರಾಜ್ಯಕ್ಕೆ ಉತ್ತಮ ಮಳೆ ಮತ್ತು ಬೆಳೆ ನೀಡುವಂತೆಯೂ ಕೆಪಿಸಿ ನಿಗಮದ ವತಿಯಿಂದ ಪ್ರಾರ್ಥನೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಲಿಂಗನಮಕ್ಕಿ ಜಲಾಶಯವನ್ನು ಆಶ್ರಯಿಸಿ 4 ಜಲವಿದ್ಯುದಾಗರಗಳಿದ್ದು, ಒಟ್ಟು 1,470 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಕಳೆದ ಸಾಲಿನಲ್ಲಿ 6,140 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯ ಮೂಲಕ ಕೆಪಿಸಿ ಹೊಸ ದಾಖಲೆಯನ್ನು ನಿರ್ಮಿಸಿದೆ. ರಾಜ್ಯದ ಒಟ್ಟು ವಿದ್ಯುತ್ ಬೇಡಿಕೆಯಲ್ಲಿ ಶೇ 40ರಷ್ಟು ವಿದ್ಯುತ್ ಅನ್ನು ಉತ್ಪಾದಿಸಿ, ಕೇಂದ್ರ ಗ್ರಿಡ್ ಸರಬರಾಜು ವಿಭಾಗಕ್ಕೆ ಕೆಪಿಸಿ ಪೂರೈಸುತ್ತಿದೆ’ ಎಂದು ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಆರ್. ರಮೇಶ್ ವಿವರಿಸಿದರು. 

ಕೆಪಿಸಿ ನಿಗಮದ ಜಲಾಶಯ ವಿಭಾಗದ ಅದೀಕ್ಷಕ ಎಂಜಿನಿಯರ್ ಆರ್. ಶಿವಕುಮಾರ್ ಮಾತನಾಡಿ, ‘ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಜಲಮೂಲವನ್ನು ಸಂಗ್ರಹಿಸಿಡುತ್ತಿದ್ದು, ಅಣೆಕಟ್ಟೆಯ ಒಡಲಲ್ಲಿ ಸಂಗ್ರಹವಾಗುತ್ತಿರುವ ಹೂಳು ಜಲ ಸಂಗ್ರಹದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮವನ್ನು ಈವರೆಗೂ ಬೀರಿಲ್ಲ. ಈಗಾಗಲೇ ಸೆಂಟ್ರಲ್ ವಾಟರ್ ಕಮಿಷನ್ ಸರ್ವೆ ಕಾರ್ಯ ನಡೆದಿದ್ದು, ಮುಂದಿನ ದಿನಗಳಲ್ಲಿ ವರದಿ ಪಡೆದು ಅಧ್ಯಯನ ಮಾಡಲಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಕೆ. ವೀರೇಂದ್ರ ಮಾತನಾಡಿ, ‘ಕೆಪಿಸಿ ನಿಗಮದಲ್ಲಿ ನೌಕರರ ನೇಮಕಾತಿ ಆಗದೆ ಅನುಭವಿ ಕಾಯಂ ಉದ್ಯೋಗಿಗಳ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಕಾರ್ಮಿಕ ಸಂಘಟನೆಗಳಿಂದ ಮುಖ್ಯಮಂತ್ರಿ ಗಮನ ಸೆಳೆಯಲಾಗಿದೆ. ಶೀಘ್ರ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗುವ ಭರವಸೆ ಇದ್ದು, ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಭರ್ತಿಯಾಗುವ ಲಕ್ಷಣ ಕಾರ್ಮಿಕರಿಗೆ ಸಂತಸ ಮೂಡಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧೀಕ್ಷಕ ಎಂಜಿನಿಯರ್ ವಾಸುದೇವ ಮೂರ್ತಿ, ರಂಗನಾಥ, ಕಾರ್ಯನಿರ್ವಾಹಕ ಎಂಜಿನಿಯರ್ ಲಕ್ಷ್ಮೀ, ದಿನೇಶ್, ಪ್ರದೀಪ್, ಪರಿಶಿಷ್ಟ ವರ್ಗದ ಯೂನಿಯನ್ ಅಧ್ಯಕ್ಷ ಮಿರ್ಜಾಕುಮಾರ್, ಜೋಗ ಘಟಕದ ಮಹಮ್ಮದ್ ಸದ್ದೂರ್, ಕಾರ್ಗಲ್ ಘಟಕದ ಕೇಶವೇ ಗೌಡ, ಎಜಿಎಂ ಮಾದಪ್ಪ, ಹಣಕಾಸು ಅಧಿಕಾರಿ ಗಿಡ್ಡಪ್ಪ ಗೌಡ, ಸಿಬ್ಬಂದಿ ಅಧಿಕಾರಿ ಪೂರ್ಣಿಮಾ ಉಪಸ್ಥಿತರಿದ್ದರು.

ಜಲಾಶಯದ 6ನೇ ರೇಡಿಯಲ್ ಗೇಟ್‌ಗೆ ಪೂಜೆ ಮಾಡಿ, ಸಾಂಕೇತಿಕವಾಗಿ ರೇಡಿಯಲ್ ಗೇಟ್ ಮೂಲಕ ನೀರನ್ನು ಹೊರ ಹರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.