ADVERTISEMENT

ದೊಡ್ಡಣ್ಣನ ಉತ್ಸವಕ್ಕೆ ಅಣ್ಣ–ತಮ್ಮಂದಿರದ್ದೇ ವಿರೋಧ: ಈಶ್ವರಪ್ಪ ಲೇವಡಿ

ಸಿದ್ದರಾಮೋತ್ಸವಕ್ಕೆ ಅಪಸ್ವರ; ಕಾಂಗ್ರೆಸ್ ಒಡೆದ ಮನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 9:27 IST
Last Updated 6 ಜುಲೈ 2022, 9:27 IST
ಶಾಸಕ ಕೆ.ಎಸ್.ಈಶ್ವರಪ್ಪ
ಶಾಸಕ ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ‘ದಾವಣಗೆರೆಯಲ್ಲಿ ಆಯೋಜಿಸಿರುವ ಸಿದ್ದರಾಮೋತ್ಸವಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಇದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಡೆದು ಛಿದ್ರವಾಗಿರುವುದರ ದ್ಯೋತಕ‘ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮನೆಯ ದೊಡ್ಡಣ್ಣನ (ಸಿದ್ದರಾಮಯ್ಯ) ಉತ್ಸವಕ್ಕೆ ಅಣ್ಣತಮ್ಮಂದಿರೇ ಇದು ನಮಗೆ ಸಂಬಂಧವಿಲ್ಲವೆಂದು ಹೇಳಿದರೆ ಅದನ್ನು ಜನರ ಉತ್ಸವ ಎಂದು ಕರೆಯೋಕೆ ಆಗುತ್ತಾ‘ ಎಂದು ಪ್ರಶ್ನಿಸಿದರು.

’ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬದವರು ಸೇರಿ ಸಂತೋಷದಿಂದ ಆಚರಿಸಬೇಕಾಗಿತ್ತು. ಆದರೆ ಅದಕ್ಕೆ ಸಿದ್ದರಾಮೋತ್ಸವ ಎಂದು ಕಾಂಗ್ರೆಸ್‌ನವರು ಹೆಸರು ಕೊಟ್ಟುಕೊಂಡು ಆಚರಿಸಲು ಮುಂದಾಗಿದ್ದಾರೆ. ಇದು ಜನರ ಉತ್ಸವ. ನಮ್ಮ ಬೆಂಬಲಿಗರು ಮಾಡಿಕೊಳ್ಳುತ್ತಿದ್ದಾರೆ. ನಾನು ಹೇಳಿಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ನಾನು ಮುಖ್ಯಮಂತ್ರಿ ಎಂದು ಘೋಷಣೆ ಕೂಗಬೇಡಿ ಎಂದು ಒಂದು ಕಡೆ ಹೇಳಿಕೊಳ್ಳುವುದು. ಮತ್ತೊಂದು ಕಡೆ ಅವರೇ ಚಿವುಟಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾ ಘೋಷಣೆ ಕೂಗಿಸಿಕೊಳ್ಳುವುದು ನೋಡುತ್ತಿದ್ದೇವೆ. ಇಂತಹ ದುಸ್ಥಿತಿ ಯಾವುದೇ ಪಕ್ಷದ ನಾಯಕರಿಗೂ ಬರಬಾರದು. ಡಿ.ಕೆ.ಶಿವಕುಮಾರ್ ಅವರದ್ದೂ ಇದೇ ಪರಿಸ್ಥಿತಿ‘ ಎಂದು ಕಟುಕಿದರು.

ADVERTISEMENT

‘ದೀಪ ಆರುವ ಸಂದರ್ಭದಲ್ಲಿ ಬಹಳಷ್ಟು ಕೂಗಾಡುತ್ತದೆ. ಹಂಗೆ ಇವರು (ಕಾಂಗ್ರೆಸ್ ನಾಯಕರು) ಪಿಎಸ್‌ಐ ನೇಮಕಾತಿ ವಿಚಾರದಲ್ಲಿ ಕೂಗಾಡುತ್ತಿದ್ದಾರೆ. ನಿಮ್ಮ (ಕಾಂಗ್ರೆಸ್) ಸರ್ಕಾರ ಇರುವಾಗ ಒಂದಾದರೂ ಇಂತಹ ತನಿಖೆ ಮಾಡಿ ಕ್ರಮ ಕೈಗೊಂಡಿದ್ದೀರಾ? ಸುಮ್ಮನೆ ಟೀಕೆಗೋಸ್ಕರ, ನಮ್ಮದೊಂದು ರಾಜಕೀಯ ಪಕ್ಷ ಇದೆ. ನಾವು ಜೀವಂತವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಹಾರಾಡುವುದು ಸಲ್ಲ‘ ಎಂದು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.