
ಕೋಣಂದೂರು: ಸಮೀಪದ ಕೆರೆಕೋಡಿಯ ಯುವ ರೈತ ಕೆ.ಎಸ್. ಸಚಿನ್ ಕೃಷಿಯೊಂದಿಗೆ ನಾಟಿ ಕೋಳಿ ಸಾಕಾಣಿಕೆ, ಜೇನು ಕೃಷಿ, ಪಶು ಸಂಗೋಪನೆ ಕೈಗೊಂಡು ಯಶಸ್ಸು ಸಾಧಿಸಿದ್ದಾರೆ.
ಬಿಬಿಎಂ ಹಾಗೂ ಎಚ್‌ಆರ್‌ಎಂ (ಮಾನವ ಸಂಪನ್ಮೂಲ ನಿರ್ವಹಣೆ) ಪದವಿ ಪಡೆದಿರುವ ಇವರು ನಾಟಿ ಕೋಳಿಗಳ ಸಾಕಣೆಯನ್ನು ಉದ್ಯಮವಾಗಿಸಿಕೊಂಡು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ.
ನಾಲ್ಕೂವರೆ ಎಕರೆ ಕೃಷಿ ಜಮೀನಿನಲ್ಲಿ ವಾಣಿಜ್ಯ ಬೆಳೆಯಾದ ಅಡಿಕೆ, ಬಾಳೆ, ಕಾಳುಮೆಣಸು, ವೆನಿಲಾ, ಕಾಫಿ, ಏಲಕ್ಕಿ ಬೆಳೆಯುತ್ತಿದ್ದಾರೆ.
ಅದರೊಂದಿಗೆ ನಾಟಿ ಕೋಳಿ, ಗಿರಿರಾಜ, ಸ್ವರ್ಣದಾರ, ಖಡಕ್ ನಾತ್, ಡಿ.ಪಿ. ಕ್ರಾಸ್, ಗೌಜಲ ಹಕ್ಕಿ ತಳಿಯ ಕೋಳಿಗಳನ್ನು ಮಾಂಸ ಮತ್ತು ಮೊಟ್ಟೆಗಾಗಿ ಸಾಕುತ್ತಿದ್ದಾರೆ. ಮಲೆನಾಡಿನಲ್ಲಿ ನಾಟಿ ಕೋಳಿಗೆ ಹೆಚ್ಚು ಬೇಡಿಕೆ ಇದೆ. ಜೊತೆಗೆ ಮೊಟ್ಟೆಗಳಿಗೂ ಉತ್ತಮ ಮಾರುಕಟ್ಟೆ ಇರುವುದರಿಂದ ಉತ್ತಮ ಆದಾಯ ದೊರೆಯುತ್ತಿದೆ.
ಸ್ವರ್ಣದಾರ ಕೋಳಿಗಳು ವರ್ಷದಲ್ಲಿ 200 ಮೊಟ್ಟೆಗಳನ್ನು ಕೊಡುತ್ತವೆ. ಜೊತೆಗೆ ಮಾಂಸವೂ ದೊರೆಯುತ್ತದೆ. ಖಡಕ್ ನಾತ್ ಕೋಳಿಗಳಿಂದ ವರ್ಷಕ್ಕೆ 150 ರಿಂದ 180 ಮೊಟ್ಟೆಗಳನ್ನು ಪಡೆಯಬಹುದು. ಈ ಕೋಳಿಯು ಕಡಿಮೆ ಪ್ರಮಾಣದ ಕೊಬ್ಬಿನಾಂಶ ಹೊಂದಿದೆ. ಮಧುಮೇಹಿಗಳಿಗೆ ಇದು ಇಷ್ಟದ ಕೋಳಿ.
ಗೌಜಲ ಹಕ್ಕಿ ತಳಿಯ ಕೋಳಿಯಲ್ಲಿ ಹೆಚ್ಚು ವಿಟಮಿನ್ ಅಂಶಗಳಿರುತ್ತವೆ. ಮಕ್ಕಳು, ಪಾರ್ಶ್ವವಾಯು ಪೀಡಿತರು ಹೆಚ್ಚಾಗಿ ಬಳಸುತ್ತಾರೆ. ಗಿರಿರಾಜ ಕೋಳಿಗಳನ್ನು ಮಾಂಸ ಹಾಗೂ ಮೊಟ್ಟೆಗಾಗಿ ಬಳಸುತ್ತಾರೆ. ಯಂತ್ರಗಳ ಮೂಲಕ ಕೃತಕವಾಗಿ ಕಾವುಕೊಟ್ಟು ಮರಿಗಳನ್ನು ಪಡೆಯಲಾಗುತ್ತದೆ.
ಸಚಿನ್ ಅವರು ಅಜೋಲಾವನ್ನು ಬೆಳೆದು ಹಸು ಹಾಗೂ ಕೋಳಿಗಳಿಗೆ ನೀಡುತ್ತಾರೆ. ಯಂತ್ರಗಳ ಮೂಲಕ ಕೋಳಿ ಹಾಗೂ ಹಸುಗಳಿಗೆ ಆಹಾರ ಸಿದ್ಧಪಡಿಸಿ ಕೊಡುತ್ತಾರೆ.
6 ಮಲೆನಾಡು ಗಿಡ್ಡ ಹಸು, 1 ಎಚ್.ಎಫ್. ಹಸು ಇದೆ. ತೋಟಕ್ಕೆ ಹಸಿರೆಲೆ ಗೊಬ್ಬರ ತಯಾರಿಸಿ, ನೀಡಲಾಗುತ್ತದೆ. ಅಡಿಕೆ ಸೋಗೆಯನ್ನು ಕತ್ತರಿಸಿ ಸಗಣಿಯನ್ನು ಮಿಶ್ರಣ ಮಾಡಿ ಗೊಬ್ಬರ ತಯಾರಿಸಲಾಗುತ್ತದೆ. ಜೇನು ಸಾಕಾಣಿಕೆಯನ್ನೂ ಪ್ರಾರಂಭಿಸಲಾಗಿದೆ. 30 ಜೇನು ಪೆಟ್ಟಿಗೆಗಳಿಂದ ವರ್ಷಕ್ಕೆ 100 ಕೆ.ಜಿ. ಜೇನು ತುಪ್ಪವನ್ನು ಸಂಗ್ರಹಿಸಲಾಗುತ್ತಿದೆ. ಈ ಎಲ್ಲಾ ಕೆಲಸಗಳಿಗೂ ತಂದೆ ಸುರೇಶ್, ತಾಯಿ ಅನ್ನಪೂರ್ಣ, ಪತ್ನಿ ಕಾವ್ಯಾ ಕೈಜೋಡಿಸುತ್ತಾರೆ ಎಂದು ಅವರು ವಿವರಿಸಿದರು.
ಪಶು ಸಖಿ ಹಾಗೂ ಕೃಷಿ ಸಖಿಯರಿಗೆ ತಮ್ಮ ಕೃಷಿ ಭೂಮಿಯಲ್ಲಿ ಉಚಿತವಾಗಿ ತರಬೇತಿ ನೀಡುತ್ತಾರೆ. ಇವರ ಕೋಳಿ, ಮೊಟ್ಟೆ, ಮರಿಗಳಿಗೆ ಉತ್ತಮ ಬೇಡಿಕೆ ಇದೆ. ಶಿವಮೊಗ್ಗ, ಹಾಸನ, ಗದಗ ಪಶು ವೈದ್ಯಕೀಯ ಕಾಲೇಜುಗಳಿಗೆ ಮರಿ ಕಳಿಸಲಾಗಿದೆ. ಕೆಲಸ ಅರಸಿ ನಗರಗಳಿಗೆ ವಲಸೆ ಹೋಗುವ ಯುವಕರಿಗೆ ಇವರು ಮಾದರಿ.
ಸಚಿನ್ ಮಾದರಿ ಕೃಷಿಗೆ ಸಂದ ಪ್ರಶಸ್ತಿಗಳು
* ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ
* ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ
* ರಾಜ್ಯ ಸರ್ಕಾರದ ಸಮಗ್ರ ಕೃಷಿ ಪ್ರಶಸ್ತಿ
* ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಸ್ಥೆಯಿಂದ ಪ್ರಶಸ್ತಿ
* ಶಿವಮೊಗ್ಗ ರೈತ ಪ್ರಶಸ್ತಿ
* ಕೃಷಿ ವಿ.ವಿ.ಇರುವಕ್ಕಿಯಿಂದ ಕೃಷಿ ಮತ್ತು ಕಲೆ ಪ್ರಶಸ್ತಿ
* ಬೀದರ್ ಪಶು ವೈದ್ಯ ಹಾಗೂ ಮೀನುಗಾರಿಕೆ ವಿ.ವಿ.ಶ್ರೇಷ್ಠ ರೈತ ಪ್ರಶಸ್ತಿ
* ಸಮಗ್ರ ಪಶುಪಾಲನಾ ಪ್ರಶಸ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.