ADVERTISEMENT

ಕೆಎಸ್‌ಆರ್‌ಟಿಸಿ ಮುಷ್ಕರ: ಶಿವಮೊಗ್ಗದಲ್ಲಿ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:23 IST
Last Updated 6 ಆಗಸ್ಟ್ 2025, 5:23 IST
ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಕಾರನ ಮಂಗಳವಾರ ಬೆಳಿಗ್ಗೆ ಕೆಲಕಾಲ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಖ್ಯೆ ವಿರಳವಾಗಿತ್ತು
ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಕಾರನ ಮಂಗಳವಾರ ಬೆಳಿಗ್ಗೆ ಕೆಲಕಾಲ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಖ್ಯೆ ವಿರಳವಾಗಿತ್ತು   

ಶಿವಮೊಗ್ಗ: ವೇತನ ಪರಿಷ್ಕರಣೆ ಸೇರಿ ಬೇರೆ ಬೇರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಒಕ್ಕೂಟಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಸಾರಿಗೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಂಸ್ಥೆಯ ಕಾಯಂ ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣ ಶೇ 40ರಷ್ಟು ಕೆಎಸ್ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಆದರೆ, ಸಂಜೆ ವೇಳೆಗೆ ನೌಕರರು ಮುಷ್ಕರ ಹಿಂತೆಗೆದುಕೊಂಡ ಕಾರಣ ಎಂದಿನಂತೆಯೇ ಬಸ್‌ಗಳ ಕಾರ್ಯಾಚರಣೆ ಶುರುವಾಯಿತು.

ಮುಷ್ಕರದ ಹಿನ್ನೆಲೆಯಲ್ಲಿ ಶಿವಮೊಗ್ಗ ಡಿಪೋದಲ್ಲಿ ಸೋಮವಾರ ರಾತ್ರಿ ಬಂದು ತಂಗಿದ್ದ ಬಸ್‌ಗಳು ಮಾತ್ರ ಮುಂಜಾನೆ ತೆರಳಿದವು. ಬೆಳಿಗ್ಗೆ 7 ಗಂಟೆ ಬಳಿಕ ಸ್ವಲ್ಪ ಹೊತ್ತು ನಿಲ್ದಾಣದಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಆಗಿತ್ತು. ದೈನಂದಿನ ಮಾರ್ಗಗಳ ಬಸ್‌ಗಳ ಓಡಾಟದಲ್ಲಿ ವ್ಯತ್ಯಯವಾಯಿತು. ಇದರ ಬೆನ್ನಿಗೆ ಪ್ರಯಾಣಿಕರ ಸಂಖ್ಯೆಯೂ ತಗ್ಗಿತು. ನೌಕರರ ಮುಷ್ಕರ ನಡೆಯುತ್ತಿದೆ ಎಂಬುದು ಗೊತ್ತಿಲ್ಲದೇ ಬಸ್ ನಿಲ್ದಾಣಕ್ಕೆ ಬಂದಿದ್ದ ಬಹಳಷ್ಟು ಜನರು ಮನೆಗೆ ಮರಳಿದರೆ, ಹೆಚ್ಚಿನವರು ಖಾಸಗಿ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕಿದರು. ದೂರದ ಊರುಗಳಿಗೆ ತೆರಳುವವರು ಬಸ್‌ಗಳು ಆರಂಭವಾಗುವ ನಿರೀಕ್ಷೆಯಲ್ಲಿ ನಿಲ್ದಾಣದಲ್ಲಿ ಕಾಲ ಕಳೆದರು.

ADVERTISEMENT

ಬೆಳಿಗ್ಗೆ 9 ಗಂಟೆ ಬಳಿಕ ಕಚೇರಿ, ಶಾಲೆ–ಕಾಲೇಜುಗಳಿಗೆ ತೆರಳುವವರು ಬಂದಿದ್ದರಿಂದ ನಿಲ್ದಾಣದಲ್ಲಿ ಕೊಂಚ ಪ್ರಯಾಣಿಕರ ದಟ್ಟಣೆ ಕಂಡುಬಂದಿತು. ಮಧ್ಯಾಹ್ನದ ವೇಳೆಗೆ ನಿಲ್ದಾಣಕ್ಕೆ ಬರುವ ಬಸ್‌ಗಳ ಸಂಖ್ಯೆ ಹೆಚ್ಚಿತು. ಆದರೆ, ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಸಂಜೆ ವೇಳೆಗೆ ಶಿವಮೊಗ್ಗ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಬಸ್‌ಗಳು ಎಂದಿನಂತೆಯೇ ಓಡಾಟ ಆರಂಭಿಸಿದವು.

ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ: ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನದವರೆಗೂ ಬಸ್‌ಗಳ ಸಂಖ್ಯೆ ಕಡಿಮೆ ಆದ ಕಾರಣ ಪ್ರಯಾಣಿಕರು ಪರದಾಡಿದರು. ಬೆಂಗಳೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ ಸೇರಿ ದೂರದ ಊರುಗಳಿಗೆ ತೆರಳುವವರು ವಾಪಸ್ ಮರಳಿದರೆ, ಚಿತ್ರದುರ್ಗ, ಚನ್ನಗಿರಿ, ಶಿಕಾರಿಪುರ, ಸಾಗರಕ್ಕೆ ಹೋಗುವವರು ಖಾಸಗಿ ಬಸ್‌ ನಿಲ್ದಾಣದತ್ತ ತೆರಳಿದರು. 

ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಕಂಡುಬಂದಿತು. ಶಿವಮೊಗ್ಗದಲ್ಲಿ ಖಾಸಗಿ ಸಿಟಿ ಬಸ್‌ಗಳು ಕಾರ್ಯಾಚರಿಸುವುದರಿಂದ ನಗರದಲ್ಲಿ ಓಡಾಟಕ್ಕೆ ತೊಂದರೆ ಆಗಲಿಲ್ಲ. ಆದರೆ ಶಿವಮೊಗ್ಗ– ಭದ್ರಾವತಿ ನಡುವೆ ಓಡಾಟಕ್ಕೆ ಮಧ್ಯಾಹ್ನದವರೆಗೂ ತೊಂದರೆ ಆಗಿತ್ತು. 

ಬಸ್‌ಗಳು ಓಡಾಟ ನಡೆಸುತ್ತವೆಯೇ ಎಂದು ‍ಪ್ರಯಾಣಿಕರು ಕಂಟ್ರೋಲ್ ರೂಂ ಸಿಬ್ಬಂದಿಯ ಬಳಿ ಮಾಹಿತಿ ಪಡೆಯುವುದು ಕಂಡುಬಂದಿತು. ಶಿವಮೊಗ್ಗ ಬಸ್‌ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ತಿಂಡಿ, ತಿನಿಸು ಮಾರಾಟ ಮಾಡುವ ಅಂಗಡಿ, ಹೋಟೆಲ್‌ಗೂ ಗ್ರಾಹಕರ ಕೊರತೆ ಕಂಡುಬಂದಿತು.

ಮುಷ್ಕರ ಕರೆಯ ಕಾರಣ ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದ ದೊಡ್ಡಪೇಟೆ ಠಾಣೆ ಪೊಲೀಸರು ಯಾವುದೇ ಅಹಿತಕರ ನಡೆಯದಂತೆ ನೋಡಿಕೊಂಡರು.

ಬಲವಂತವಾಗಿ ಕರ್ತವ್ಯ ನಿರ್ವಹಣೆ? 

‘ಮುಷ್ಕರಕ್ಕೆ ಕಾಯಂ ನೌಕರರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಆದರೆ ತರಬೇತಿ ಅವಧಿಯಲ್ಲಿರುವ ಹಾಗೂ ಖಾಸಗಿ ಚಾಲಕರನ್ನು ಕರೆತಂದು ಬಲವಂತವಾಗಿ ಕೆಲವು ಬಸ್‌ಗಳನ್ನು ಓಡಿಸಲಾಗುತ್ತಿದೆ. ಮುಷ್ಕರಕ್ಕೆ ಬೆಂಬಲ ಕೊಟ್ಟಿರುವ ಚಾಲಕರು– ನಿರ್ವಾಹಕರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ. ಬೆದರಿಕೆ ಹಾಕುತ್ತಿದ್ದಾರೆ’ ಎಂದು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಬೆಂಬಲಿತ ಎಐಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ಮಹಾದೇವು ಮಾಧ್ಯಮಗಳ ಎದುರು ಆರೋಪಿಸಿದರು. ‘ತರಬೇತಿ ನಿರತ 20 ಚಾಲಕರನ್ನು ರಾತ್ರಿಯೇ ಕರೆತಂದು ಬಸ್ ನಿಲ್ದಾಣದಲ್ಲಿ ಕೂಡಿ ಹಾಕಿ ಈಗ ಬಲವಂತವಾಗಿ ಬಸ್ ಚಾಲನೆಗೆ ಕಳುಹಿಸಿದ್ದಾರೆ. ಕೆಲಸ ಮಾಡಲು ಮುಂದಾಗಿರುವ ಚಾಲಕರು–ನಿರ್ವಾಹಕರಿಗೆ ತೊಂದರೆ ಮಾಡುವುದಿಲ್ಲ. ನಮ್ಮದು ಶಾಂತಿಯುತ ಪ್ರತಿಭಟನೆ’ ಎಂದು ಮಹಾದೇವು ಹೇಳಿದರು.

ಯಾರನ್ನೂ ಬಲವಂತಪಡಿಸಿಲ್ಲ: ನವೀನ್

‘ಬಸ್ ಓಡಿಸುವಂತೆ ನಾವು ಯಾರನ್ನೂ ಬಲವಂತಪಡಿಸಿಲ್ಲ. ಹಿಂದಿನ ದಿನವೇ (ಸೋಮವಾರ) ಚಾಲಕರು ಬಂದು ಸಹಿ ಮಾಡಿ ಸ್ವಯಂ ಪ್ರೇರಿತವಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮುಷ್ಕರ ನಿರತ ಉಳಿದವರೂ ಕೆಲಸಕ್ಕೆ ಹಾಜರಾಗಿದ್ದಾರೆ. 20 ಮಾರ್ಗಗಳ ಹೊರತಾಗಿ ಬಸ್‌ಗಳ ದೈನಂದಿನ ಕಾರ್ಯಾಚರಣೆ ಎಂದಿನಂತೆಯೇ ನಡೆಯಿತು. ಪ್ರಯಾಣಿಕರು ಇಲ್ಲದ ಕಾರಣ ಬೆಂಗಳೂರಿಗೆ ತೆರಳಬೇಕಿದ್ದ ವೋಲ್ವೊ ಬಸ್‌ಗಳು ಸಂಚಾರ ನಿಲ್ಲಿಸಿದ್ದವು. ರಾತ್ರಿ ವೇಳೆಗೆ ಕಾರ್ಯಾಚರಣೆ ಎಂದಿನ ಸ್ಥಿತಿಗೆ ಮರಳಿತು’ ಎಂದು ಕೆಎಸ್ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಕ ಟಿ.ಆರ್.ನವೀನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.