ADVERTISEMENT

ಮೀ ಟೂನಲ್ಲಿ ಶೀಘ್ರ ಮುಖ್ಯಮಂತ್ರಿ ಹೆಸರು! -ಶಾಸಕ ಕುಮಾರ್ ಬಂಗಾರಪ್ಪ ಹೊಸ ಬಾಂಬ್

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 11:03 IST
Last Updated 30 ಅಕ್ಟೋಬರ್ 2018, 11:03 IST
ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕುಮಾರ್‌ ಬಂಗಾರಪ್ಪ
ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕುಮಾರ್‌ ಬಂಗಾರಪ್ಪ   

ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನದ ಘನತೆ ಮರೆತು ಬೇರೆ ಕುಟುಂಬಗಳ ಖಾಸಗಿ ವಿಷಯಗಳಲ್ಲಿ ಮೂಗು ತೂರಿಸುವ ಎಚ್‌.ಡಿ. ಕುಮಾರಸ್ವಾಮಿ ಸದ್ಯದಲ್ಲೇ ಮೀ ಟೂ ಅಭಿಯಾನದಲ್ಲಿ ಸಿಲುಕಲಿದ್ದಾರೆ ಎಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಹೊಸ ಬಾಂಬ್ ಸಿಡಿಸಿದರು.

‘ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕುಟುಂಬದ ವಿಚಾರಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಲು ಇವರಿಗೆ ಯಾವ ನೈತಿಕತೆ ಇದೆ. ತಂದೆ–ತಾಯಿ ಕಳೆದುಕೊಂಡಾಗ ನಾನು ಅನುಭವಿಸಿರುವ ವೇದನೆ ಇವರಿಗೇನು ಗೊತ್ತು? ಮತಗಳಿಕೆಗಾಗಿ ಬಂಗಾರಪ್ಪ ಹೆಸರು ಪ್ರಸ್ತಾಪಿಸುವ ಇವರು ಕೆಆರ್‌ಎಸ್‌ ನೀರಿನ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ಅವರ ಹೆಸರು ಮಂಡ್ಯ, ರಾಮನಗರದಲ್ಲಿ ಏಕೆ ಹೇಳುವುದಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಮೀ ಟೂನಲ್ಲಿ ಯಾರು ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡುತ್ತಾರೆ. ನಿಮ್ಮ ಬಳಿ ದಾಖಲೆ ಇವೆಯೇ ಎಂಬ ಪ್ರಶ್ನೆಗೆ ಆಕ್ರೋಶ ಭರಿತರಾಗಿ ಪ್ರತಿಕ್ರಿಯಿಸಿದ ಅವರು, ಯಾರನ್ನು ಇಟ್ಟುಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೇ ದಾಖಲೆಗಳುಇವೆ. ರಾಮನಗರದಲ್ಲಿ ಪತ್ನಿಯನ್ನು ಅಭ್ಯರ್ಥಿ ಮಾಡಿದ್ದಾರೆ. ಹಾಗೆಯೇ ಅವರಿಗೂ ಒಂದು ಕ್ಷೇತ್ರ ನೀಡಿ ಗೆಲ್ಲಿಸಲಿ ಎಂದುವ್ಯಂಗ್ಯವಾಡಿದರು.

ADVERTISEMENT

‘ಚುನಾವಣೆಗಾಗಿ ನಾಲ್ಕು ದಿನ ಜಿಲ್ಲೆಯಲ್ಲೇ ಠಿಕಾಣಿ ಹೂಡಿದ್ದಾರೆ. ಅದೇ ಅತಿವೃಷ್ಟಿಗೆ ಸಿಲುಕಿದಾಗ ಒಂದು ದಿನ ಕಾಲಿಡಲಿಲ್ಲ. 2004ರಲ್ಲಿ ಹೇಳಿದ್ದ ಸುಳ್ಳಿನ ಕಂತೆಗಳನ್ನೇ ಈಗಲೂ ಹೇಳುತ್ತಿದ್ದಾರೆ. ಸುಳ್ಳುಗಳಿಗೆ ದಾಖಲೆ, ಸಾಕ್ಷಿ ಇರುವುದಿಲ್ಲ. ಬಂಗಾರಪ್ಪ ಅವರ ಸಮಾಧಿ ಪಕ್ಕ ನಿಂತು ಅವರನ್ನು ಸ್ಮರಿಸುತ್ತಾರೆ. ಅದೇ ಸಮಾಧಿ ಸ್ಮಾರಕವಾಗಿಸಲು ಏಕೆ ಸಾಧ್ಯವಾಗಿಲ್ಲ? ನಮಗೆ ಬಿಟ್ಟುಕೊಟ್ಟರೆ 24 ಗಂಟೆಗಳ ಒಳಗೆ ಮಾಡಿ ತೋರಿಸುತ್ತೇವೆ’ ಎಂದು ಸವಾಲು ಹಾಕಿದರು.

ಸಮಾಜದ ಆಸ್ತಿಯನ್ನು ಮಧು ಬಂಗಾರಪ್ಪ ರಿಯಲ್‌ ಎಸ್ಟೇಟ್ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಮುಖೇನ ಈ ವ್ಯವಹಾರ ನಡೆಯುತ್ತಿದೆ ಎಂದು ಮತ್ತೊಂದು ಆರೋಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.