ತೀರ್ಥಹಳ್ಳಿ: ಹೊನ್ನೇತ್ತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡ ಕುಂದಾದ್ರಿ ಬಸದಿ ನಿರ್ವಹಣೆ ಇಲ್ಲದೇ ಗಿಡಗಂಟಿಗಳ ನಡುವೆ ಮರೆಯಾಗಿದೆ. ಬೆಟ್ಟದ ಶಿಖರದ ಮೇಲೊಂದು ಗುಡಿ ಇದ್ದರೆ, ತಪ್ಪಲಿನಲ್ಲಿ ಮತ್ತೊಂದು ಗುಡಿ ಇದೆ. ಅದೀಗ ಸಂಪೂರ್ಣ ಹಾಳಾಗುವ ಸ್ಥಿತಿಗೆ ತಲುಪಿದೆ.
ಕುಂದಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಹಳೆಯ ಬಸದಿಯನ್ನು ದಟ್ಟ ಕಾಡಿನ ನಡುವೆ ಹುಡುಕಬೇಕಿದೆ. ಇಲ್ಲೊಂದು ಬಸದಿ ಇದೆ ಎಂಬುದು ಬಹುತೇಕ ಸ್ಥಳೀಯರಿಗೂ ತಿಳಿದಿಲ್ಲ. ತರಗೆಲೆ, ಕಟ್ಟಿಗೆ ಸಂಗ್ರಹಣೆ ಮುಂತಾದ ಕಾರಣಕ್ಕೆ ಕಾಡನ್ನು ಅವಲಂಬಿಸಿದವರಿಗೆ ಮಾತ್ರ ಬಸದಿಯ ಅಸ್ತಿತ್ವ ಗೊತ್ತಾಗುತ್ತದೆ.
ಬೆಟ್ಟದ ಎರಡನೇ ತಿರುವಿನ ಕಾಲುದಾರಿಯಲ್ಲಿ 800 ಮೀಟರ್ ಕಾಡ ಹಾದಿಯಲ್ಲಿ ಕ್ರಮಿಸಿದರೆ ಬಸದಿ ಕಾಣ ಸಿಗುತ್ತದೆ. ಅಂದಾಜು 100 ಅಡಿಗಳಷ್ಟು ಸುತ್ತುಳತೆಯಲ್ಲಿ ಬಸದಿ ವ್ಯಾಪಿಸಿದ್ದು, ಕಲ್ಲುಗಳಿಂದಲೇ ಕಾಂಪೌಂಡ್ ನಿರ್ಮಿಸಿದ ಕುರುಹುಗಳು ಇವೆ. ದೇವಸ್ಥಾನದಲ್ಲಿ ವೃತ್ತಕಾರದ 4, ಆಯತಾಕಾರದ 2 ಕಂಬಗಳು ಮತ್ತು ಗರ್ಭಗುಡಿಯನ್ನು ಕಾಣಬಹುದು. ಮುಖ್ಯ ದೇವಸ್ಥಾನದ ಪಕ್ಕದಲ್ಲಿ ಮತ್ತೊಂದು ಚಿಕ್ಕ ಗುಡಿ ಇದ್ದು, ಇವೆರಡರ ಮುಂಭಾಗದಲ್ಲಿ 32 ಕಂಬಗಳ ವಾಹನ ಮಂಟಪ ನಿರ್ಮಿಸಲಾಗಿದೆ.
‘ದೇವಸ್ಥಾನದ ಎಡಭಾಗದಲ್ಲಿ ಬಾವಿ ಇತ್ತು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಅಲ್ಲಿ ಬಾವಿಯ ಕುರುಹುಗಳು ಕಂಡುಬರುವುದಿಲ್ಲ. ಬಾವಿ ಇತ್ತೆಂಬ ಸ್ಥಳದಲ್ಲಿ ದೊಡ್ಡ ಬೈನೆ ಮರ ಇದೆ. ಅಲ್ಲದೇ ನಿಧಿ ಕಳ್ಳತನಕ್ಕಾಗಿ ದೇವಸ್ಥಾನದ ಆಯಕಟ್ಟಿನ ಜಾಗದಲ್ಲಿ ಗುಂಡಿ ತೆಗೆದು ಶೋಧ ನಡೆದಿದೆ. ಗೋಡೆಗಳನ್ನು ಬೀಳಿಸಿರುವುದು ಕಾಣುತ್ತದೆ. ಮುಂಭಾಗದ ಹಾಸು ಬಂಡೆಯ ಮೇಲೆ ಭೀಮನ ಹೆಜ್ಜೆ ಇದೆ. ನಮ್ಮ ಅಜ್ಜನ ಕಾಲದಿಂದಲೂ ಇಲ್ಲಿ ಯಾವುದೇ ಪೂಜೆಗಳು ನಡೆದಿಲ್ಲ’ ಎಂದು ಚಂಗಾರು ಗ್ರಾಮದ ಹಿರಿಯ ಸತೀಶ್ ಹೇಳುತ್ತಾರೆ.
20 ವರ್ಷಗಳ ಹಿಂದೆ ಬಸದಿಗೆ ಹೊಂದಿಕೊಂಡ ಕುಂದಾದ್ರಿ ಬೆಟ್ಟದ ತಪ್ಪಲಿನಲ್ಲಿ ಕಲ್ಲು ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿತ್ತು. ಅರಣ್ಯ ಕಾಯ್ದೆಗಳು ಬಿಗಿಯಾಗುತ್ತಿದ್ದಂತೆ ಗಣಿಗಾರಿಕೆ ನಿಯಂತ್ರಣಕ್ಕೆ ಬಂದಿತ್ತು. ಗಣಿಗಾರಿಕೆ ಸಂಬಂಧ ಹಲವರ ಮೇಲೆ ಪ್ರಕರಣಗಳು ದಾಖಲಾಗಿತ್ತು. ಗಣಿಗಾರಿಕೆ ಕಾಲಘಟ್ಟದಲ್ಲಿ ದೇವಸ್ಥಾನ ಸಂಪೂರ್ಣ ಅಧೋಗತಿಗೆ ತಲುಪಿತ್ತು ಎಂದು ಸ್ಥಳೀಯರು ನೆನಪಿಸುತ್ತಾರೆ.
ತೀರ್ಥಹಳ್ಳಿಯಲ್ಲಿ ದವಣೇಬೈಲು ಮಾತ್ರ ನಮ್ಮ ಸುಪರ್ದಿಗೆಯಲ್ಲಿದೆ. ಕುಂದಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಬಸದಿ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಪರಿಶೀಲನೆ ನಡೆಸುತ್ತೇವೆಎಚ್.ಸಿ.ಕುಮಾರ್ ಪುರಾತತ್ವ ಇಲಾಖೆ ಉಪ ನಿರ್ದೇಶಕ ಶಿವಮೊಗ್ಗ
ದೇವಸ್ಥಾನದ ಅಕ್ಕಪಕ್ಕ ಊರುಗಳು ಇದ್ದಿರುವ ಸಾಧ್ಯತೆ ಇದೆ. ಮನೆಗಳಿಗೆ ಬಳಸಿದ ಹೆಂಚು ಇಟ್ಟಿಗೆ ಮುಚ್ಚಿದ ಕೆರೆಗಳು ಸುತ್ತಮುತ್ತಲೂ ಇವೆ. ಪುರಾತತ್ವ ಇಲಾಖೆ ಉತ್ಖನನ ಮಾಡಬೇಕುಕುಂದಾದ್ರಿ ರಾಘವೇಂದ್ರ ಹೊನ್ನೇತ್ತಾಳು ಗ್ರಾ.ಪಂ.ಸದಸ್ಯ
ಕುಂದಾದ್ರಿ ಬಸದಿಯು ರಕ್ಷಿತಾರಣ್ಯ ಪ್ರದೇಶದ ಒಳಗಿದೆ. ಗ್ರಾಮಾರಣ್ಯ ಸಮಿತಿ ಮೂಲಕ ಪ್ರವಾಸಿಗರನ್ನು ಸೆಳೆಯುವ ಕಾರ್ಯಕ್ರಮ ರೂಪಿಸುತ್ತಿದ್ದೇವೆಹೇಮಗಿರಿ ಅಂಗಡಿ ಆಗುಂಬೆ ವಲಯ ಅರಣ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.