ADVERTISEMENT

ಶಿವಮೊಗ್ಗ: ಬಾರದ ಗ್ರಾಹಕ, ಮತ್ತೆ ಬೀದಿಗೆ ವ್ಯಾಪಾರಸ್ಥ

ವಿನೋಬ ನಗರ ಶಿವಾಲಯ ಬಳಿ ಪಾಲಿಕೆಯ ಮಿನಿ ಮಾರುಕಟ್ಟೆ

ವೆಂಕಟೇಶ ಜಿ.ಎಚ್.
Published 29 ಜುಲೈ 2022, 4:22 IST
Last Updated 29 ಜುಲೈ 2022, 4:22 IST
ಶಿವಮೊಗ್ಗದ ವಿನೋಬ ನಗರದ ಶಿವಾಲಯ ಪಕ್ಕದ ಮಾರುಕಟ್ಟೆ ಕಟ್ಟಡದಿಂದ ಹೊರಗೆ ಕುಳಿತು ಗುರುವಾರ ವ್ಯಾಪಾರಸ್ಥರು ವಹಿವಾಟಿನಲ್ಲಿ ತೊಡಗಿದ್ದರು    ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್
ಶಿವಮೊಗ್ಗದ ವಿನೋಬ ನಗರದ ಶಿವಾಲಯ ಪಕ್ಕದ ಮಾರುಕಟ್ಟೆ ಕಟ್ಟಡದಿಂದ ಹೊರಗೆ ಕುಳಿತು ಗುರುವಾರ ವ್ಯಾಪಾರಸ್ಥರು ವಹಿವಾಟಿನಲ್ಲಿ ತೊಡಗಿದ್ದರು    ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್   

ಶಿವಮೊಗ್ಗ: ಇಲ್ಲಿನ ವಿನೋಬ ನಗರದಲ್ಲಿ ಮಹಾನಗರ ಪಾಲಿಕೆಯಿಂದ ಕಟ್ಟಿರುವ ಮಾರುಕಟ್ಟೆ ಪ್ರಾಂಗಣದಲ್ಲಿ ವಹಿವಾಟು ಆರಂಭಿಸಿದ್ದ ಬೀದಿ ಬದಿ ವ್ಯಾಪಾರಸ್ಥರು, ಕೊಳ್ಳಲು ಗ್ರಾಹಕರು ಬಾರದೇ ಒಂದೇ ವಾರದಲ್ಲಿ ಮತ್ತೆ ಬೀದಿಗೆ ಬಂದಿದ್ದಾರೆ.

ಬೀದಿ ಬದಿ ವ್ಯಾಪಾರಸ್ಥರಿಗೆ ಒಂದೇ ಸೂರಿನಡಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ಶಿವಾಲಯ ಪಕ್ಕದಲ್ಲಿ ಪಾಲಿಕೆಯಿಂದ 70 ಮಳಿಗೆಗಳ ಮಿನಿ ಮಾರುಕಟ್ಟೆ ನಿರ್ಮಿಸಲಾಗಿದೆ. ವಾರದ ಹಿಂದಷ್ಟೇ ಉದ್ಘಾಟನೆಯಾಗಿದೆ.

ಪೊಲೀಸ್ ಚೌಕಿ ಹಾಗೂ ಲಕ್ಷ್ಮೀ ಥಿಯೇಟರ್ ಬಳಿ ಬೀದಿ ಬದಿಯಲ್ಲಿ ಹಣ್ಣು, ತರಕಾರಿ, ಹೂವು,
ಸೊಪ್ಪು ಮಾರಾಟ ಮಾಡುತ್ತಿದ್ದವರಿಗೆ ಇಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತೀ ಮಳಿಗೆಗೆ ತಿಂಗಳಿಗೆ ₹1500 ಬಾಡಿಗೆ ನಿಗದಿಯಾಗಿದೆ.

ADVERTISEMENT

ಶಾಶ್ವತ ಸೂರು ದೊರೆತ ಖುಷಿಯಲ್ಲಿಅಂಗಡಿ ತೆಗೆದು ಕುಳಿತವರಿಗೆ ಒಂದೇ ವಾರದಲ್ಲಿ ಸಂಭ್ರಮ ಮಾಯವಾಗಿದೆ. ದಿನವಿಡೀ ಕುಳಿತರೂ ಗ್ರಾಹಕರ ದರ್ಶನ ಆಗುತ್ತಿಲ್ಲ. ಇದು ಅವರನ್ನು ಕಂಗಾಲಾಗಿಸಿದೆ. ‘ಆಗೊಮ್ಮೆ ಈಗೊಮ್ಮೆ ಒಬ್ಬಿಬ್ಬರು ಮಾತ್ರ ಬರುತ್ತಿದ್ದಾರೆ. ತಂದ ಮಾಲು ಕೊಳ್ಳುವವರು ಇಲ್ಲದೇ ಕೆಟ್ಟು ಹೋಗುತ್ತಿದೆ. ಕಸದ ತೊಟ್ಟಿಗೆ ಹಾಕಿ ಮರಳುತ್ತಿದ್ದೇವೆ’ ಎಂದು ಸೊಪ್ಪು ಮಾರುವ ಚಂದ್ರಮ್ಮ ಅಳಲು ತೋಡಿಕೊಂಡರು.

ಚೌಕಿಯಲ್ಲಿ ಒಂದು ದಿನ ಆಗುತ್ತಿದ್ದ ವ್ಯಾಪಾರ, ಇಲ್ಲಿ ವಾರವಿಡೀ ಮಾಡಿದರೂ ಆಗಿಲ್ಲ ಎಂದು ಹಣ್ಣಿನ ವ್ಯಾಪಾರಿ ಮಂಜಣ್ಣ ಬೇಸರ ವ್ಯಕ್ತಪಡಿಸಿದರು.

‘ಈ ಮೊದಲು ದಿನಕ್ಕೆ ₹150ರಿಂದ ₹200 ಉಳಿಯುತ್ತಿತ್ತು. ಈಗ ಅದೂ ಇಲ್ಲ. ಬಾಡಿಗೆ ಮನೆ. ಇಲ್ಲಿಯೂ ಬಾಡಿಗೆ ಕಟ್ಟಬೇಕು. ಸಂಸಾರ ನಡೆಸಿ ಮಕ್ಕಳ ಸಾಕಬೇಕು. ಎಲ್ಲಿಂದ ಹಣ ಹೊಂದಿಸುವುದು ಎಂದು ಹೂವಿನ ವ್ಯಾಪಾರಿ ಯಶೋದಾ ಪ್ರಶ್ನಿಸುತ್ತಾರೆ. ‘ನೋಡಿ ತಂದ ಹೂವು ಮಾರಾಟವಾಗದೇ ಒಣಗಿ ಹೋಗಿದೆ’ ಎಂದು ತೋರಿಸಿದರು.

ಪ್ರಚಾರದ ಕೊರತೆ: ‘ಇಲ್ಲಿ ತರಕಾರಿ, ಹಣ್ಣಿನ ಮಾರುಕಟ್ಟೆ ಆಗಿರುವುದರ ಬಗ್ಗೆ ಗ್ರಾಹಕರಿಗೆ ಹೆಚ್ಚು ಮಾಹಿತಿಯೇ ಇಲ್ಲ. ಮುಂಜಾನೆ ಕಸ ಒಯ್ಯುವ ವಾಹನಗಳ ಮೂಲಕ ವಿನೋಬ ನಗರ, ಕಾಶೀಪುರ, ಅರವಿಂದ ನಗರ, ರಾಜೇಂದ್ರ ನಗರ ಭಾಗದಲ್ಲಿ ಹೆಚ್ಚು ಪ್ರಚಾರ ನಡೆಸಲಿ. ಇದರಿಂದ ನಮಗೆ ಅನುಕೂಲವಾಗಲಿದೆ’ ಎಂದು ರಂಗನಾಥ್ ಒತ್ತಾಯಿಸಿದರು.

ನಮ್ಮದು ಅತಂತ್ರ ಪರಿಸ್ಥಿತಿ: ಪ್ರದೀಪ್
ಪೊಲೀಸ್ ಚೌಕಿ ಹಾಗೂ ಲಕ್ಷ್ಮೀ ಥಿಯೇಟರ್ ಬಳಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ‘ನಾವು ಅಲ್ಲಿಂದ ಬರುತ್ತಿದ್ದಂತೆಯೇ ಆ ಜಾಗದಲ್ಲಿ ಹೊಸದಾಗಿ ಬೇರೆಯವರು ಬಂದು ವ್ಯಾಪಾರ ಮಾಡುತ್ತಿದ್ದಾರೆ. ನಮ್ಮ ಗ್ರಾಹಕರು ಅಲ್ಲಿಗೆ ಹೋಗುತ್ತಿದ್ದಾರೆ. ಹೀಗಾಗಿ ಈ ಮಾರುಕಟ್ಟೆಗೆ ಯಾರೂ ಬರುತ್ತಿಲ್ಲ ಎಂದು ಹಣ್ಣಿನ ವ್ಯಾಪಾರಿ ಪ್ರದೀಪ್ ಹೇಳುತ್ತಾರೆ.

‘ನಮ್ಮ ಸ್ಥಿತಿ ಅತಂತ್ರ. ಗ್ರಾಹಕರು ಇಲ್ಲಿಗೆ ಬಾರದೇ ವ್ಯಾಪಾರ ಆಗುತ್ತಿಲ್ಲ. ಹಿಂದೆ ಇದ್ದ ಸ್ಥಳಕ್ಕೆ ವಾಪಸ್ ಹೋಗೋಣ ಅಂದರೆ ಆ ಜಾಗದಲ್ಲಿ ಈಗ ಬೇರೆಯವರು ಇದ್ದಾರೆ. ಅವರನ್ನು ಪಾಲಿಕೆ ಮೊದಲು ಒಕ್ಕಲೆಬ್ಬಿಸಲಿ’ ಎಂದು ಆಗ್ರಹಿಸಿದರು.

ನಿತ್ಯ 2 ಬಾರಿ ತಪಾಸಣೆ: ಮಾಯಣ್ಣಗೌಡ
‘ಈಗ ನಾವು ಖಾಲಿ ಮಾಡಿಸಿರುವ ಜಾಗದಲ್ಲಿ ಬೇರೆಯವರು ಬಂದು ವ್ಯಾಪಾರ ಮಾಡದಂತೆ ತಡೆಯಲು ಪೊಲೀಸ್ ಚೌಕಿ, ಲಕ್ಷ್ಮೀ ಥಿಯೇಟರ್ ಭಾಗದಲ್ಲಿ ನಿತ್ಯ ಬೆಳಿಗ್ಗೆ, ಸಂಜೆ ತಪಾಸಣೆಯನ್ನು ಶುಕ್ರವಾರದಿಂದಲೇ ಆರಂಭಿಸಲಿದ್ದೇವೆ’ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಅನಧಿಕೃತವಾಗಿ ಅಲ್ಲಿ ವ್ಯಾಪಾರಕ್ಕೆ ಕುಳಿತವರ ತೆರವುಗೊಳಿಸಲಾಗುವುದು. ಅದು ಪುನರಾವರ್ತನೆ ಆದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

‘ಎಲ್ಲಿಯೇ ಆಗಲಿ ಹೊಸ ಜಾಗದಲ್ಲಿ ವ್ಯಾಪಾರ ಸ್ಥಿರವಾಗಲು ಕೆಲ ಸಮಯ ಬೇಕಾಗುತ್ತದೆ. ಹೀಗಾಗಿ ವ್ಯಾಪಾರಸ್ಥರು ನಿರಾಶೆಗೊಳ್ಳುವುದು ಇಲ್ಲವೇ ಮಾರುಕಟ್ಟೆ ಬಿಟ್ಟು ಹೊರಗೆ ಬಂದು ವ್ಯಾಪಾರಕ್ಕೆ ಕುಳಿತುಕೊಳ್ಳುವುದು ಬೇಡ’ ಎಂದು ಕಿವಿಮಾತು ಹೇಳಿದರು.

***

ಇಲ್ಲಿ ಮಳಿಗೆ ಕೊಡುವಾಗ ಅಧಿಕಾರಿಗಳು ನಮ್ಮ ಬಳಿ ಚಹಾ ಕೂಡ ಕುಡಿದಿಲ್ಲ. ನಯಾ ಪೈಸೆ ಪಡೆದಿಲ್ಲ. ಅದೇ ರೀತಿ ಸುಗಮ ವ್ಯಾಪಾರಕ್ಕೂ ಅವಕಾಶ ಮಾಡಿಕೊಡಲಿ.
–ಯಶೋದಾ,ಹೂವಿನ ವ್ಯಾಪಾರಿ

***

ಜನರು ಮಾರುಕಟ್ಟೆ ಒಳಗಡೆ ಬರುತ್ತಿಲ್ಲ. ಇಲ್ಲಿ ಮಾರ್ಕೆಟ್ ಇದೆ ಎಂಬುದು ಗೊತ್ತಾಗಲಿ ಎಂದು ನಾವೇ ಹೊರಗಡೆ ಅಂಗಡಿ ಹಾಕಿಕೊಂಡಿದ್ದೇವೆ.
-ಚಂದ್ರಮ್ಮ,ಸೊಪ್ಪಿನ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.