ADVERTISEMENT

ಕಾನೂನು ಸಾಕ್ಷರತೆಯಿಂದ ಬಾಲ್ಯವಿವಾಹ, ಪೋಕ್ಸೊ ತಡೆ ಸಾಧ್ಯ: ನ್ಯಾಯಾಧೀಶ ಅಭಯ ಚೌಗಲಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 4:15 IST
Last Updated 23 ಜನವರಿ 2026, 4:15 IST
ಶಿವಮೊಗ್ಗದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 1234 ಕಾನೂನು ಸಾಕ್ಷರತಾ ಕ್ಲಬ್‌ಗಳನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಉದ್ಘಾಟಿಸಿದರು
ಶಿವಮೊಗ್ಗದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 1234 ಕಾನೂನು ಸಾಕ್ಷರತಾ ಕ್ಲಬ್‌ಗಳನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಉದ್ಘಾಟಿಸಿದರು   

ಶಿವಮೊಗ್ಗ: ‘ಕಾನೂನಿನ ಅರಿವು ಪಡೆದ ಮಕ್ಕಳು ಬಾಲ್ಯವಿವಾಹ, ಪೋಕ್ಸೊ ಸೇರಿದಂತೆ ಹಲವು ಅಪರಾಧಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬಹುದು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಾಧೀಶ ಅಭಯ ಧನಪಾಲ ಚೌಗಲಾ ಹೇಳಿದರು.

ಜಿಲ್ಲೆಯ ಆಯ್ದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ‘ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನ ಹಾಗೂ ‘ರಸ್ತೆ ಸುರಕ್ಷತಾ ಮಾಸಾಚರಣೆ’ ಅಂಗವಾಗಿ ಗುರುವಾರ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 1,234 ಕಾನೂನು ಸಾಕ್ಷರತಾ ಕ್ಲಬ್‌ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತ ವೈವಿಧ್ಯಮಯ ದೇಶವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜನರು ವಾಸಿಸುತ್ತಿರುವುದರಿಂದ ಕಾನೂನು ಅರಿವು ಕಡಿಮೆ ಎನ್ನುವ ಭಾವನೆ ಇದೆ. ಆದರೆ, ದೇಶದ ಕಾನೂನು ಪ್ರತಿಯೊಬ್ಬರಿಗೂ ತಿಳಿದಿರಬೇಕು ಎಂಬ ಆಶಯದಿಂದ 1987ರಲ್ಲಿ ಕಾನೂನು ಸೇವಾ ಅಧಿನಿಯಮ ಜಾರಿಗೆ ತರಲಾಯಿತು. ಈ ಕಾಯ್ದೆಯ ಉದ್ದೇಶ ಕಾನೂನು ಅರಿವು ಮೂಡಿಸುವುದು ಹಾಗೂ ಅಗತ್ಯವಿರುವವರಿಗೆ ಉಚಿತ ಕಾನೂನು ನೆರವು ಒದಗಿಸುವುದಾಗಿದೆ’ ಎಂದು ತಿಳಿಸಿದರು.

ADVERTISEMENT

‘ದೇಶದ ಭವಿಷ್ಯವಾಗಿರುವ ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸಿದಲ್ಲಿ, ಅವರು ತಮ್ಮ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸುವ ಮೂಲಕ ಅಪರಾಧಗಳನ್ನು ತಡೆಯಲು ಸಾಧ್ಯವಾಗುತ್ತದೆ. ಈ ಕುರಿತು ದೇಶದಾದ್ಯಂತ ಹಲವಾರು ಯಶಸ್ವಿ ಉದಾಹರಣೆಗಳಿವೆ. ಹೀಗಾಗಿ ಮಕ್ಕಳಿಗೆ ಕಾನೂನು ಶಿಕ್ಷಣ ನೀಡುವುದು ಅತ್ಯಂತ ಅಗತ್ಯವಾಗಿದೆ’ ಎಂದು ಹೇಳಿದರು.

‘ಈ ಕ್ಲಬ್‌ಗಳ ಮೂಲಕ ಮಕ್ಕಳು ಬಾಲ್ಯವಿವಾಹ, ಪೋಕ್ಸೊ, ರಸ್ತೆ ಅಪಘಾತಗಳು ಸೇರಿದಂತೆ ವಿವಿಧ ಅಪರಾಧಗಳ ಬಗ್ಗೆ ಅರಿವು ಪಡೆದು ಸಮಾಜದಲ್ಲಿ ಜಾಗೃತಿ ಮೂಡಿಸಬಹುದು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಕ್ಲಬ್‌ಗಳನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರ ಸ್ವಾಮಿ ಮಾತನಾಡಿ, ‘ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಿದಲ್ಲಿ ಅವರು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗುತ್ತಾರೆ’ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಆಯೋಜಿಸಲಾಗಿದ್ದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. 

ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಎಸ್.ಆರ್. ಸ್ವಾಗತಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಎಸ್. ಗುಂಡಪಳ್ಳಿ ವಂದಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲೇಶಪ್ಪ ಡಿ., ಡಿಸಿಪಿಒ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶಶಿರೇಖಾ, ಬಿಇಒ ರಮೇಶ್, ಜೆಸಿಐನ ಸ್ವಾತಿ ಸೇರಿದಂತೆ ಅಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾನೂನಿನ ಅರಿವು ಬೌದ್ಧಿಕ ಸಿರಿತನವನ್ನು ಹೆಚ್ಚಿಸುವುದರ ಜೊತೆಗೆ ಸಮಾಜದಲ್ಲಿ ಸಾಮರಸ್ಯ ಬೆಳೆಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಸಂವಿಧಾನಾತ್ಮಕ ಮೌಲ್ಯಗಳನ್ನು ತಿಳಿದುಕೊಳ್ಳಬೇಕು ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ರಸ್ತೆ ಸುರಕ್ಷತೆ ಪಾಲಿಸಬೇಕು. ಬಾಲ್ಯವಿವಾಹ ಪೋಕ್ಸೋ ಸೇರಿದಂತೆ ಇತರೆ ಕಾನೂನುಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಮೂಲಕ ಪ್ರಕರಣಗಳನ್ನು ತಗ್ಗಿಸಲು ಎಲ್ಲರೂ ಕೈಜೋಡಿಸಬೇಕು. ಅಗತ್ಯ ಕಾನೂನುಗಳ ಅರಿವು ಪಡೆದು ಸಮಾಜವನ್ನು ರಚನಾತ್ಮಕವಾಗಿ ಕಟ್ಟುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು
ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ
ಕಳೆದ ವರ್ಷ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗಿದ್ದು ಈ ವರ್ಷದ ಮಿಷನ್ ಸುರಕ್ಷಾ ಅಭಿಯಾನ ಮೂಲಕ ಶೇ 50ರಷ್ಟು ಬಾಲ್ಯವಿವಾಹ ತಡೆಯಲಾಗಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಲ್ಯಾಣ ಇಲಾಖೆ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಯಶಸ್ವಿಯಾಗಿ ಮೂಡಿಸಲಾಗಿದೆ. ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸುತ್ತಿರುವುದರಿಂದ ಮಕ್ಕಳಲ್ಲಿ ಸಂವಿಧಾನದ ಅರಿವು ಹೆಚ್ಚಾಗಿದೆ. ಮಕ್ಕಳು ಸಹಾಯವಾಣಿ 1098 ಬಳಸಿಕೊಂಡು ಬಾಲ್ಯವಿವಾಹ ತಡೆಗಟ್ಟಿದ್ದಾರೆ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಗೃತಿ ಮೂಡಿಸಿದ್ದಾರೆ
ಎನ್. ಹೇಮಂತ್ ಜಿ.ಪಂ. ಸಿಇಒ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲ್ಲೂಕು ಸಮಿತಿಗಳು ಕಾನೂನು ಅರಿವು ನೆರವು ಹಾಗೂ ಲೋಕ ಅದೋಲತ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿವೆ.ಮಿಷನ್ ಸುರಕ್ಷಾ ಅಭಿಯಾನ ಮೂಲಕ ಪೋಕ್ಸೊ ಬಾಲ್ಯವಿವಾಹ ಮುಂತಾದ ಸಮಸ್ಯೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಜನನ ಪ್ರಮಾಣ ಪತ್ರವಿಲ್ಲದೆ ಶಾಲೆಗೆ ದಾಖಲಾಗದ 5000 ಮಕ್ಕಳನ್ನು ಗುರುತಿಸಿ 500 ಮಕ್ಕಳು ಪ್ರಮಾಣ ಪತ್ರ ಪಡೆದಿದ್ದಾರೆ. ಶಾಲೆಗಳಲ್ಲಿ ಸ್ಥಾಪಿತ ಸಾಕ್ಷರತಾ ಕ್ಲಬ್‌ಗಳಿಂದ ವಿದ್ಯಾರ್ಥಿಗಳಿಗೆ ಕಾನೂನು ಜ್ಞಾನ ವಿಸ್ತಾರವಾಗುತ್ತಿದೆ.
ಸಂತೋಷ್ ಎಂ.ಎಸ್. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.