ADVERTISEMENT

ಮೊಲಕ್ಕಾಗಿ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 5:31 IST
Last Updated 7 ಡಿಸೆಂಬರ್ 2022, 5:31 IST
ಶಿವಮೊಗ್ಗ ತಾಲ್ಲೂಕಿನ ಕೋಣೆಹೊಸೂರು ಬಳಿ ಪತ್ತೆಯಾದ ಚಿರತೆಯ ಶವ
ಶಿವಮೊಗ್ಗ ತಾಲ್ಲೂಕಿನ ಕೋಣೆಹೊಸೂರು ಬಳಿ ಪತ್ತೆಯಾದ ಚಿರತೆಯ ಶವ   

ಶಿವಮೊಗ್ಗ: ಮೊಲಗಳನ್ನು ಹಿಡಿಯುವ ಸಲುವಾಗಿ ಕಟ್ಟಿದ್ದ ಉರುಳಿನಲ್ಲಿ ಸಿಕ್ಕಿಕೊಂಡು ಐದು ವರ್ಷದ ಗಂಡು ಚಿರತೆ ತಾಲ್ಲೂಕಿನ ತುಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣೆ ಹೊಸೂರು ಗ್ರಾಮದಲ್ಲಿ ಮಂಗಳವಾರ ಸಾವನ್ನಪ್ಪಿದೆ.

ಜಮೀನಿನ ಅಂಚಿನಲ್ಲಿ ಕಟ್ಟಿದ್ದ ಆಕ್ಸಿಲೇಟರ್ ತಂತಿ ಚಿರತೆಯ ಹಿಂಬದಿಯ ಕಾಲಿಗೆ ಸಿಲುಕಿದೆ. ಅದು ತಪ್ಪಿಸಿಕೊಳ್ಳಲು ಹರಸಹಾಸ ಪಟ್ಟು ಮರವೇರಿದೆ. ಆದರೆ ತಂತಿ ಬಿಗಿ ಇದ್ದದ್ದರಿಂದ ದೇಹಕ್ಕೆ ರಕ್ತ ಸಂಚಾರ ಆಗದೇ ಮರದ ಕವಲಿನಲ್ಲಿಯೇ ಸಿಲುಕಿ ಚಿರತೆ ಮೃತ ಪಟ್ಟಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಚಿರತೆಯ ಕಳೇಬರವನ್ನು ಸುಟ್ಟು ಹಾಕಲಾಯಿತು.

ADVERTISEMENT

ಈ ಸಂದರ್ಭದಲ್ಲಿ ಜಿಲ್ಲಾ ವಲಯ ಅರಣ್ಯಾಧಿಕಾರಿ ರಾಮಕೃಷ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಅರಣ್ಯಾಧಿಕಾರಿ ಸೋಮಶೇಖರ್ ಗೌಡ ಮತ್ತು ಅರಣ್ಯ ಸಿಬ್ಬಂದಿ ಹಾಜರಿದ್ದರು.

ಸಾಗರ ವಿಭಾಗ ಚೋರಡಿ ವಲಯದಲ್ಲಿ ಯಾರೋ ಹಾಕಿರುವ ಉರುಳಿಗೆ ಚಿರತೆ ಸಿಲುಕಿ ಸಾವನ್ನಪ್ಪಿದೆ. ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.