ADVERTISEMENT

ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಲಿ: ಎಂ.ಕೆ. ಭಟ್

8ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಂ.ಕೆ. ಭಟ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 2:21 IST
Last Updated 8 ಫೆಬ್ರುವರಿ 2021, 2:21 IST
ಡಾ.ಎಂ.ಕೆ.ಭಟ್
ಡಾ.ಎಂ.ಕೆ.ಭಟ್   

ಸೊರಬ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಡೆ ಸಂಸ್ಥಾನ ಮಠದ ವತಿಯಿಂದ ಫೆ. 10ರಂದು 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಜಡೆ ಸಂಸ್ಥಾನ ಮಠದ ಆವರಣದಲ್ಲಿ ನಡೆಯಲಿದೆ.

ವೈದ್ಯ, ಸಾಹಿತ್ಯ ಪ್ರೇಮಿ, ಕಲಾ ಪೋಷಕ ಡಾ.ಎಂ.ಕೆ. ಭಟ್ ಸಮ್ಮೇಳನಾಧ್ಯಕ್ಷರಾಗಿ ನಿಯೋಜನೆಗೊಂಡಿದ್ದಾರೆ. ಹುಟ್ಟಿದ್ದು ಹೊನ್ನಾವರ ತಾಲ್ಲೂಕಿನ ಸಾಲಕೋಡು ಗ್ರಾಮದಲ್ಲಿ. ಕೃಷ್ಣ ಭಟ್, ಸಾವಿತ್ರಿ ಭಟ್ ದಂಪತಿಯ ಪುತ್ರ.

1974ರಲ್ಲಿ ಹುಬ್ಬಳಿ ಕಿಮ್ಸ್ ಸಂಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ 1975ರಲ್ಲಿ ಸೊರಬದಲ್ಲಿ ವೃತ್ತಿ ಆರಂಭಿಸಿದರು. ಮಕ್ಕಳು ಹಾಗೂ ವೃದ್ಧರು ಎಂದರೆ ಇವರಿಗೆ ಬಲು ಪ್ರೀತಿ. ವೃತ್ತಿ ಜೊತೆಗೆ ಕಲೆ, ಸಾಹಿತ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ADVERTISEMENT

ಡಾ.ಎಂ.ಕೆ.ಭಟ್ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

lಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಬಹುಪಾಲು ಸಾಹಿತಿಗಳನ್ನೇ ಆಯ್ಕೆ ಮಾಡುವ ಬಗ್ಗೆ ನಿಮ್ಮ ಅನಿಸಿಕೆ ಏನು?

ಲಕ್ಷಾಂತರ ಸಾಹಿತ್ಯ ಆಸಕ್ತರು ಭಾಷೆ, ನೆಲ ಹಾಗೂ ಜಲದ ಬಗ್ಗೆ ಅಭಿಮಾನ ಹೊಂದಿದ್ದಾರೆ. ಸಾಹಿತ್ಯ ಪರಿಷತ್ ಸದಸ್ಯರಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಸಾಹಿತ್ಯ ಪ್ರೇಮಿಗಳನ್ನು ಅಪರೂಪಕ್ಕಾದರೂ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಕನ್ನಡದ ಮನಸ್ಸುಗಳು ಒಗ್ಗೂಡಲಿವೆ.

lಸಾಹಿತ್ಯ ಸಮ್ಮೇಳನಗಳಿಂದ ಭಾಷೆ ಉಳಿಯಲು ಸಾಧ್ಯವೇ?

ಗಡಿ ಭಾಗಗಳಲ್ಲಿ ನೆರೆ ರಾಜ್ಯದ ನೀತಿಯಿಂದಾಗಿ ಕನ್ನಡ ಶಾಲೆಗಳು ಮುಚ್ಚಿವೆ. ನಮಗಿರುವ ಭಾಷಾ ಸಹಿಷ್ಣುತೆಯಿಂದ ಅನ್ಯ ಭಾಷೆಗಳಿಗೆ ಮನ್ನಣೆ ದೊರೆತಿದೆ. ರಾಜ್ಯ ಸರ್ಕಾರ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕಡ್ಡಾಯಗೊಳಿಸಿದರೆ ಭಾಷೆಗೆ ಅಡೆತಡೆ ಉಂಟಾಗುವುದಿಲ್ಲ.

lಮೊಬೈಲ್ ಬಳಕೆ ಹೆಚ್ಚಾಗಿ ಯುವಕರಲ್ಲಿ ಓದು, ಬರಹದ ಕಡಿಮೆಯಾಗಿದೆ ಅನ್ನಿಸುತ್ತಿದೆಯಾ?

ತಾಂತ್ರಿಕ ಯುಗದಲ್ಲಿ ಕಾಲಘಟ್ಟಕ್ಕೆ ಅನುಗುಣವಾಗಿ ಭೌಗೋಳಿಕ ಭಾಷೆ ಹೊಂದಿಕೊಳ್ಳದೇ ಹೋದರೆ ಅಪಾಯವನ್ನು ಎದುರಿಸಬೇಕಾಗುತ್ತದೆ. ಇತರ ಕ್ಷೇತ್ರದ ಬಗ್ಗೆ ಮಾಹಿತಿಗಳು ತಂತ್ರಜ್ಞಾನದಲ್ಲಿ ಸಿಗುವ ಹಾಗೆ ಸಾಹಿತ್ಯ ಕೃತಿಗಳ ಬಗ್ಗೆ ಮಾಹಿತಿ ವಿಪುಲವಾಗಿ ದೊರೆಯುವಂತಾದರೆ ಸಹಜವಾಗಿಯೇ ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲಿ ಪಠ್ಯದ ಜೊತೆ ಸಾಹಿತ್ಯ ಕೃತಿಗಳನ್ನು ಓದುವ ಹಾಗೂ ವಿಮರ್ಶೆ ಮಾಡುವ ಆಸಕ್ತಿ ಮೂಡುತ್ತದೆ.

lಸಾಹಿತ್ಯ ಹಾಗೂ ಸಮ್ಮೇಳನದಿಂದ ದೊರೆಯುವ ಪ್ರಯೋಜನವೇನು?

ಸಮಾಜಕ್ಕೆ ಬೆಳಕು ನೀಡುವ ಸಾಹಿತ್ಯ ನೋವು, ನಲಿವುಗಳಿಗೆ ಸ್ಪಂದಿಸುತ್ತಿದೆ. ಶೋಷಿತರಿಗೆ ದನಿಯಾಗಿರುವ ಸಾಹಿತ್ಯವು ಅಂತಿಮವಾಗಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮುನ್ನುಡಿಯಾಗಿದೆ. ಭಾಷೆ ಉಳಿವಿಗಾಗಿ ಸರ್ಕಾರ ತೆಗೆದುಕೊಳ್ಳಬೇಕಾದ ಗಟ್ಟಿ ನಿಲುವುಗಳನ್ನು ತಾಳಲು ಹಾಗೂ ಪ್ರೇರಣೆ ನೀಡಲು ಸಮ್ಮೇಳನಗಳು ಸಾಕ್ಷಿಯಾಗಲಿವೆ.

lಸಮ್ಮೇಳನಾಧ್ಯಕ್ಷರಾಗಿ ನಿಮ್ಮ ಸಂದೇಶ?

ಕನ್ನಡಿಗರಿಗೆ ಉನ್ನತ ವ್ಯಾಸಂಗಗಳಲ್ಲಿ ಹೆಚ್ಚಿನ ಮೀಸಲಾತಿ ನೀಡಬೇಕು. ನಿರ್ಣಾಯಕ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇ 15ರಷ್ಟು ಕೃಪಾಂಕ ನೀಡಬೇಕು. ಸರ್ಕಾರಿ ಶಾಲೆಗಳು ಖಾಸಗಿ ಶಾಲೆ ಮೀರಿಸುವಷ್ಟು ಬೆಳೆದಿವೆ. ಸರ್ಕಾರ ಕನ್ನಡವನ್ನು ಔದ್ಯೋಗಿಕ ಭಾಷೆಯಾಗಿ ಅನುಷ್ಠಾನಗೊಳಿಸುವತ್ತ ಚಿಂತನೆ ನಡೆಸಲಿ. ಜೊತೆಗೆ ಎಲ್ಲ ಜಿಲ್ಲೆ ಸೇರಿ ತಾಲ್ಲೂಕು ಕೇಂದ್ರಗಳಲ್ಲಿ ನಡೆಯುವ ಸಮ್ಮೇಳನದ ನಿರ್ಣಯಗಳು ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿ ಆಗಿರುವುದರಿಂದ ಸಾಹಿತ್ಯ ಪರಿಷತ್ ನೀಡುವ ವರದಿಯನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು.

ಬಹುಮುಖ ಪ್ರತಿಭೆಯ ಕಲಾವಿದ

ಗೃಹರಕ್ಷಕದಳದಲ್ಲಿ ವಿಭಾಗೀಯ ಅಧಿಕಾರಿಯಾಗಿ, ಅನಾಥ ಮಕ್ಕಳ ಪ್ರವಾಸ, ರಾಷ್ಟ್ರೀಯ ಭಾವೈಕ್ಯ ದಿನ, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ ಸೇರಿ ಡಾ. ಭಟ್‌ ಅವರ ಹಲವು ಸಮಾಜ ಸೇವೆ ಪರಿಗಣಿಸಿ 2000ರಲ್ಲಿ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಅವರ ಸಮಾಜಮುಖಿ ಸೇವೆಗೆ ಸಂಘ–ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ಪತ್ರಕರ್ತರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 1990ರಿಂದ 2005ರವರೆಗೆ ಆರೋಗ್ಯ ಸಂಪತ್ತು ಪತ್ರಿಕೆ ನಡೆಸುತ್ತಿದ್ದರು.

ಯಕ್ಷಗಾನ ಕಲಾವಿದರಾಗಿ, ಸಂಗೀತಗಾರರಾಗಿ, ಸಮಾಜ ಸೇವಕರಾಗಿ, ಸಂಘಟನಾ ಚತುರರಾಗಿ, ಹಲವು ಸಂಘ ಸಂಸ್ಥೆಗಳು ನಡೆಸುವ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.