ADVERTISEMENT

ಗರಿಷ್ಠ ಮಟ್ಟದ ಸನಿಹದಲ್ಲಿ ಲಿಂಗನಮಕ್ಕಿ

ಕೆಪಿಸಿಯಿಂದ ಶರಾವತಿಗೆ ಬಾಗಿನ ಸಮರ್ಪಣೆ; ಜಲಾಶಯ ಭರ್ತಿಗೆ 10 ಅಡಿ ಬಾಕಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:34 IST
Last Updated 11 ಆಗಸ್ಟ್ 2022, 4:34 IST
ಲಿಂಗನಮಕ್ಕಿ ಜಲಾಶಯದ ಜಲ ಸಂಗ್ರಹ ಗರಿಷ್ಠ ಮಟ್ಟದ ಸನಿಹದಲ್ಲಿದ್ದು, ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಿಂದ ಬುಧವಾರ ಸಾಂಪ್ರದಾಯಿಕವಾಗಿ ಬಾಗಿನ ಸಮರ್ಪಿಸಲಾಯಿತು.
ಲಿಂಗನಮಕ್ಕಿ ಜಲಾಶಯದ ಜಲ ಸಂಗ್ರಹ ಗರಿಷ್ಠ ಮಟ್ಟದ ಸನಿಹದಲ್ಲಿದ್ದು, ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಿಂದ ಬುಧವಾರ ಸಾಂಪ್ರದಾಯಿಕವಾಗಿ ಬಾಗಿನ ಸಮರ್ಪಿಸಲಾಯಿತು.   

ಕಾರ್ಗಲ್: ನಾಡಿಗೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾಶಯದ ಜಲ ಸಂಗ್ರಹವು ಗರಿಷ್ಠ ಮಟ್ಟದ ಸನಿಹದಲ್ಲಿದ್ದು, ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಿಂದ ಸಾಂಪ್ರದಾಯಿಕವಾಗಿ ಬಾಗಿನ ಸಮರ್ಪಣೆ ಮಾಡಲಾಗಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ಜಿ.ಇ.ಮೋಹನ್ ಹೇಳಿದರು.

ಸಮೀಪದ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಬೆಡ್‌ಲೆವೆಲ್ ಮಟ್ಟ ತಲುಪಿದ್ದರಿಂದ ಕೆಪಿಸಿಯಿಂದ ಬುಧವಾರ ಶರಾವತಿಗೆ ಬಾಗಿನ ಸಮರ್ಪಿಸಿ ಅವರು ಮಾತನಾಡಿದರು.

ಶರಾವತಿ ನದಿ ಪಾತ್ರದ ಹಿನ್ನೀರಿನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯದ ಒಳಹರಿವಿನ ಮಟ್ಟ ದಿನೇ ದಿನೇ ಏರಿಕೆಯಾಗುತ್ತಿದೆ. ಅತ್ಯಂತ ಕನಿಷ್ಠ ಮಟ್ಟವಾದ 1749 ಅಡಿಗೆ ಇಳಿದಿದ್ದ ಜಲಾಶಯದ ನೀರಿನ ಸಂಗ್ರಹ ಈ ಬಾರಿ ಆತಂಕವನ್ನು ಸೃಷ್ಟಿಸಿತ್ತು. ಆದರೆ, 2 ಮಳೆ ಋತುಗಳು ಎಲ್ಲ ಊಹೆಗಳನ್ನು ಮೀರಿ 59 ಅಡಿಗಳಷ್ಟು ನೀರನ್ನು ಜಲಾಶಯಕ್ಕೆ ಪೂರೈಸಿವೆ ಎಂದು ಹೇಳಿದರು.

ADVERTISEMENT

‘ಜಲಾಶಯ ಗರಿಷ್ಠ ಮಟ್ಟದಲ್ಲಿ ಭರ್ತಿಯಾಗಲು ಇನ್ನು ಕೇವಲ 10 ಅಡಿಗಳಷ್ಟು ನೀರಿನ ಅಗತ್ಯವಿದ್ದು, ಕೆಲವೇ ದಿನಗಳಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ. ಪ್ರವಾಹ ಉಂಟಾದಲ್ಲಿ ತೆಗೆದುಕೊಳ್ಳಬೇಕಾಗುವ ಮುನ್ನೆಚ್ಚರಿಕೆ ಕ್ರಮಗಳು ಮತ್ತು ರೇಡಿಯಲ್ ಗೇಟ್‍ಗಳಿಂದ ನೀರು ಹೊರ ಹಾಯಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ನದಿ ದಂಡೆಯ ನಿವಾಸಿಗಳಿಗೆ 2ನೇ ಮುನ್ನೆಚ್ಚರಿಕೆ ನೀಡಲಾಗಿದೆ. ಜಿಲ್ಲಾಡಳಿತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಮಾಹಿತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಶರಾವತಿ ಯೋಜನಾ ಪ್ರದೇಶದ ಲಿಂಗನಮಕ್ಕಿ, ಮಹಾತ್ಮ ಗಾಂಧಿ, ಎ.ಬಿ.ಸೈಟ್, ಗೇರುಸೊಪ್ಪ ಜಲವಿದ್ಯುದಾಗಾರಗಳನ್ನು ಅತ್ಯಂತ ಸುಸ್ಥಿತಿಯಲ್ಲಿ ಇರಿಸಲಾಗಿದೆ. ಪ್ರಕೃತಿ ದತ್ತವಾಗಿ ದೊರಕುತ್ತಿರುವ ಮಳೆ ನೀರನ್ನು ಸಮಗ್ರವಾಗಿ ಬಳಸಿಕೊಂಡು, ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದಿಸಿ ಪೂರೈಸಲಾಗುತ್ತಿದೆ’ ಎಂದು ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ನಾರಾಯಣ್ ಪಿ. ಗಜಕೋಶ್ ತಿಳಿಸಿದರು.

‘ಹೊಳೆಬಾಗಿಲು ಸಿಗಂದೂರು ಸೇತುವೆ ನಿರ್ಮಾಣದ ಅನುಕೂಲಕ್ಕಾಗಿ ಲಿಂಗನಮಕ್ಕಿ ಜಲಾಶಯದ ನೀರನ್ನು ಸ್ಲ್ಯೂಸ್ ಗೇಟ್ ಮೂಲಕ ಹೆಚ್ಚುವರಿಯಾಗಿ ಹೊರಬಿಡಲಾಗಿದೆ’ ಎಂದು ಸಾರ್ವಜನಿಕ ವಲಯದಿಂದ ಕೇಳಿ ಬಂದ ಪ್ರಶ್ನೆಗೆ, ‘ಜಲಾಶಯದ ನೀರನ್ನು ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಸಿಕೊಳ್ಳಲಾಗಿದೆಯೇ ಹೊರತು ಇನ್ನಿತರ ಯಾವುದೇ ಕಾರಣಕ್ಕೂ ಬಳಸಿಲ್ಲ’ ಎಂದು ಕಾರ್ಯಪಾಲಕ ಎಂಜಿನಿಯರ್ ಆರ್. ಶಿವಕುಮಾರ್ ಸ್ಪಷ್ಟಪಡಿಸಿದರು.

ಜಲಾಶಯದ 6ನೇ ರೇಡಿಯಲ್ ಗೇಟ್‌ನ ಮೂಲಕ ಪ್ರಾಯೋಗಿಕವಾಗಿ ಅಣೆಕಟ್ಟಿನ ನೀರನ್ನು ಅಲ್ಪ ಸಮಯ ಹೊರಹಾಯಿಸಲಾಯಿತು.

ನಿಗಮದ ವಿದ್ಯುತ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಸಿ.ಗಿರೀಶ್, ದಿನೇಶ್‍ಕುಮಾರ್, ಎಂಜಿನಿಯರ್‌ಗಳಾದ ವಾಸುದೇವ ಮೂರ್ತಿ, ಇ. ರಾಜು, ಭದ್ರತಾ ಅಧಿಕಾರಿ ಶರಣಪ್ಪ, ಸಯ್ಯದ್, ಮಲ್ಲಿಕಾರ್ಜುನಸ್ವಾಮಿ, ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಪದಾಧಿಕಾರಿಗಳಾದ ವೀರೇಂದ್ರ, ಲಿಂಗರಾಜು, ಜೆ.ವೆಂಕಟೇಶ, ಜೆ. ಕೇಶವೇಗೌಡ, ಕಬಾಳಯ್ಯ ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.

‘ಪ್ರವಾಹ ಎದುರಿಸಲು ಅಗತ್ಯ ಕ್ರಮ’

‘ಜಲಾಶಯದ ಸುರಕ್ಷತೆಯಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತಿರುವ 11 ರೇಡಿಯಲ್ ಗೇಟ್ ಮತ್ತು ಸ್ಲ್ಯೂಸ್ ಗೇಟ್‍ಗಳನ್ನು ಮಳೆಗಾಲದ ಆರಂಭಕ್ಕೂ 2 ತಿಂಗಳ ಮುಂಚಿತವಾಗಿ ಅತ್ಯಂತ ಸುಸ್ಥಿತಿಯಲ್ಲಿಡಲಾಗಿದೆ. 2,000 ಚದರ ಕಿ.ಮೀ. ವ್ಯಾಪ್ತಿಯಲ್ಲಿ ನಿಂತಿರುವ ನೀರಿನ ಒತ್ತಡವನ್ನು ತಡೆದು ಜಲಸಂಗ್ರಹ ಮಾಡುವ ರೇಡಿಯಲ್ ಗೇಟ್‍ಗಳು, ಪ್ರವಾಹದ ಮುನ್ಸೂಚನೆ ದೊರೆತಾಗ ನಿಮಿಷಾರ್ಧದಲ್ಲಿ ಹೆಚ್ಚುವರಿ ನೀರನ್ನು ಹೊರಹಾಯಿಸಲು ಸಿದ್ಧಗೊಳಿಸಲಾಗಿದೆ. ಅನುಭವಿ ಉದ್ಯೋಗಿಗಳು ಮತ್ತು ಎಂಜಿನಿಯರ್‌ಗಳ ತಂಡ ದಿನದ 24 ಗಂಟೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ಲಿಂಗನಮಕ್ಕಿ ಗೇಟ್ಸ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶ ಹೆಗಡೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.